ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಪೇಜಾವರ ಶ್ರೀ ಹೇಳಿದ್ದು ಹೀಗೆ…

ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನನ್ನ ಆಕ್ಷೇಪವೇನು ಇಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಲ್ಲಿ ಮಹಿಳೆಯರು ಶ್ರೀಕೃಷ್ಣನ ದರ್ಶನಕ್ಕೆ ಬರುತ್ತಾರೆ. ಶಿವ, ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಪ್ರವೇಶ ಇದೆ. ಈ ವಿಚಾರದಲ್ಲಿ ನಾನು‌ ಮಧ್ಯ ಪ್ರವೇಶಿಸುವುದಿಲ್ಲ. ಮತ್ತೊಂದು ದೇಗುಲದ ಬಗ್ಗೆ ಮಾತನಾಡೋದು ಸರಿಯಲ್ಲ ಎಂದರು.

ಅಲ್ಲಿನ ಸಂಪ್ರದಾಯವೇ ಬೇರೆ. ಅವುಗಳನ್ನು ನಿರ್ಧರಿಸುವುದಕ್ಕೆ ನ್ಯಾಯಾಲಯ ಇದೆ, ಅರ್ಚಕರಿದ್ದಾರೆ, ಭಕರಿದ್ದಾರೆ, ಅಲ್ಲಿನ ರಾಜರಿದ್ದಾರೆ. ಶಬರಿಮಲೆ ವಿಚಾರ ಅವರೇ ನೋಡುತ್ತಾರೆ. ಮತ್ತೊಂದು ದೇವಾಲಯದ ಸಂಪ್ರದಾಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ-ಮಠದ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವಸ್ಥಾನದವರು ಮಠಕ್ಕೆ ತೊಂದರೆ ಕೊಡಬಾರದು. ಮಠದ ಗೋಶಾಲೆಗೆ ಬರುವ ನೀರು ಸ್ಥಗಿತವಾಗಿದೆ. ಸರ್ಪ ಸಂಸ್ಕಾರಕ್ಕೆ ಎಲ್ಲೂ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ. ಈ ನಿಲುವಿನಿಂದ ಸಮಾಜಕ್ಕೆ ತೊಂದರೆಯಾಗುತ್ತಿದೆ. ಕುಕ್ಕೆ ದೇವಸ್ಥಾನ-ಮಠದ ಸಂಘರ್ಷ ಸರಿಯಲ್ಲ. ದೇವಸ್ಥಾನ, ಮಠ ಸ್ವತಂತ್ರವಾಗಿ ನಡೆಯಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಲಿಮಾರು ಶ್ರೀ, ಕಾಣಿಯೂರು ಶ್ರೀ, ಸೋದೆ ಸ್ವಾಮೀಜಿ ಭಾಗವಹಿಸಿದ್ದರು. (ದಿಗ್ವಿಜಯ ನ್ಯೂಸ್​)