ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮಿಸಿದ ಉಡುಪಿ

ಉಡುಪಿ: ಆಚಾರ್ಯ ಮಧ್ವ ಪ್ರತಿಷ್ಠಿತ ರುಕ್ಮಿಣೀ ಕರಾರ್ಚಿತ ಉಡುಪಿ ಶ್ರೀಕೃಷ್ಣನ ಜನ್ಮಾಷ್ಟಮಿ ಶುಕ್ರವಾರ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಂದ ವಿಶೇಷ ಪೂಜೆ, ಅರ್ಘ್ಯ ಪ್ರದಾನದೊಂದಿಗೆ ಶ್ರದ್ಧೆ, ಭಕ್ತಿ, ಸಂಭ್ರಮ ಮಿಳಿತಗೊಂಡು ನೆರವೇರಿತು.

ಕೃಷ್ಣಮಠ ರಥಬೀದಿಯಲ್ಲಿ ಬೆಳಗ್ಗಿನಿಂದಲೇ ಹಬ್ಬದ ಸಡಗರವಿತ್ತು. ಮಠದ ಒಳಗೆ, ಹೊರಗೆ ಪುಷ್ಪಾಲಂಕಾರ, ರಥಬೀದಿಯಲ್ಲಿ ಮುದ್ದುಕೃಷ್ಣ-ಗೋಪಿಕೆಯರ ಓಡಾಟ, ಹುಲಿ ಸಹಿತ ವಿವಿಧ ವೇಷಧಾರಿಗಳ ಕಸರತ್ತು, ಉಪವಾಸ ನಿರತ ಭಕ್ತರಿಂದ ಭಜನೆ ಸಂಕೀರ್ತನೆ ನಡೆದರೆ, ಪರ್ಯಾಯ ಶ್ರೀಗಳು ಇಡೀ ದಿನ ಉಪವಾಸದಲ್ಲಿದ್ದು ಕೃಷ್ಣ ಕೈಂಕರ್ಯದಲ್ಲಿ ತೊಡಗಿಸಿಕೊಂಡರು.

ಜನ್ಮಾಷ್ಟಮಿ ಅಂಗವಾಗಿ ಬೆಳಗ್ಗೆ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ದೇವರಿಗೆ ಯಶೋದಾ ಕೃಷ್ಣ ಅಲಂಕಾರ ಮಾಡಿದ್ದರು. ಪರ್ಯಾಯ ಶ್ರೀಗಳು ಲಕ್ಷ ತುಳಸಿ ಅರ್ಚನೆ ಮಾಡಿ, ಮಹಾಪೂಜೆ ನೆರವೇರಿಸಿದರು.

ಲಡ್ಡಿಗೆ ಸಮರ್ಪಣೆ: ಭೋಜನ ಶಾಲೆಯಲ್ಲಿ ಪರ್ಯಾಯ ಶ್ರೀಗಳು, ಅದಮಾರು ಮಠದ ಕಿರಿಯ ಶ್ರೀ ಹಾಗೂ ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಕೃಷ್ಣದೇವರ ಸಮರ್ಪಣೆಗಾಗಿ ಲಡ್ಡಿಗೆ ಮತ್ತು ಚಕ್ಕುಲಿ ತಯಾರಿ ಕಾರ್ಯಕ್ಕೆ ಚಾಲನೆ ನೀಡಿದರು. ರಾತ್ರಿ ಕೃಷ್ಣ ದೇವರಿಗೆ ವಿವಿಧ ಬಗೆಯ ಲಡ್ಡಿಗೆ ಹಾಗೂ ಚಕ್ಕುಲಿ ಸಮರ್ಪಿಸಲಾಯಿತು. ಈ ಪ್ರಸಾದವನ್ನು ಗರ್ಭಗುಡಿಯಲ್ಲೇ ಇರಿಸಲಾಗಿದ್ದು, ಶನಿವಾರ ಬೆಳಗ್ಗೆ ಮುಖ್ಯಪ್ರಾಣ ದೇವರಿಗೆ ಸಮರ್ಪಣೆ ಮಾಡಿದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.

 ಹೂವಿನ ಅಲಂಕಾರ: ಕೃಷ್ಣ ಮಠದ ಸುತ್ತಮುತ್ತ ವಿಶೇಷ ಹೂವಿನ ಅಲಂಕಾರ ನೆರವೇರಿಸಲಾಗಿತ್ತು. ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹಗುಡಿ ಮೊದಲಾದೆಡೆ ಸೇವಂತಿಗೆ, ಚೆಂಡು ಹೂ, ಕನಕಾಂಬರ, ತುಳಸಿ, ಅಬ್ಬಲ್ಲಿಗೆ ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿತ್ತು. ರಾಜ್ಯ, ಹೊರರಾಜ್ಯಗಳಿಂದಲೂ ಭಕ್ತಜನ ಸಾಗರ ಹರಿದುಬಂದಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ವಸಂತ ಮಂಟಪದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಭಜನೆ ನಡೆಯಿತು.

ಇಂದು ವಿಟ್ಲಪಿಂಡಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ ಬಹು ಆಕರ್ಷಣೆಯ ವಿಟ್ಲಪಿಂಡಿ ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆ ಆ.24ರಂದು ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿದೆ. ಹುಲಿವೇಷ ತಂಡ ಸೇರಿದಂತೆ ನಾನಾ ರೀತಿಯ ವೇಷಗಳು ಸಾಥ್ ನೀಡುತ್ತವೆ. ವಿಟ್ಲಪಿಂಡಿಗಾಗಿ ರಥಬೀದಿ ತಳಿರುತೋರಣ, ಹೂ, ಬಣ್ಣಗಳಿಂದ ಸಿಂಗಾರಗೊಂಡಿದ್ದು, ಮೊಸರು ಕುಡಿಕೆ ಗುರ್ಜಿಗಳು ಸಿದ್ಧಗೊಂಡಿವೆ. ಈ ಮೊಸರು ಕುಡಿಕೆಗಳನ್ನು ಸಾಂಪ್ರದಾಯಿಕ ಧಿರಿಸಿನಲ್ಲಿ ಬರುವ ಕೃಷ್ಣಮಠದ ಗೋವಳರು ಒಡೆಯಲಿದ್ದಾರೆ. ಈ ಸಂಭ್ರಮದ ಕ್ಷಣಗಳಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಸಾಯಂಕಾಲ 5ಕ್ಕೆ ರಾಜಾಂಗಣದಲ್ಲಿ ಹುಲಿ ವೇಷ ತಂಡಗಳ ಸ್ಪರ್ಧೆ ನಡೆಯಲಿದೆ. ನಗರದ ವಿವಿಧೆಡೆ ಮುಂಬೈಯ ಅಲಾರೆ ತಂಡದ ಸದಸ್ಯರು ಪಿರಮಿಡ್ ಮೂಲಕ ಮೊಸರು ಕುಡಿಕೆಗಳನ್ನು ಒಡೆಯಲಿದ್ದಾರೆ.

ಮೃಣ್ಮಯ ಮೂರ್ತಿ: ಭಾಗೀರಥಿ ಜಯಂತಿಯಂದು ಕೃಷ್ಣ ಮಠದ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ಹೀಗಾಗಿ ಉತ್ಥಾನ ದ್ವಾದಶಿವರೆಗೆ ಯಾವುದೇ ಉತ್ಸವಗಳು ಇರುವುದಿಲ್ಲ. ಆದರೆ ವಿಟ್ಲಪಿಂಡಿ ಉತ್ಸವಕ್ಕೆ ಮಾತ್ರ ವಿಶೇಷವಾಗಿ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಚಿಸಿ ಸ್ವರ್ಣ ರಥದಲ್ಲಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

ಅರ್ಘ್ಯ ಪ್ರದಾನ: ಶ್ರೀಕೃಷ್ಣ ಜಯಂತಿ ಅಂಗವಾಗಿ ಶುಕ್ರವಾರ ರಾತ್ರಿ 12.12ಕ್ಕೆ ಕೃಷ್ಣ ಮಠದ ಗರ್ಭಗುಡಿಯಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ಬಿಲ್ವಪತ್ರೆ ಅರ್ಪಿಸಿ, ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡಿದರು. ಚಂದ್ರೋದಯ ಸಮಯ ತುಳಸಿಕಟ್ಟೆ ಬಳಿ ವಿಶೇಷ ಪೂಜೆ ನೆರವೇರಿಸಿ, ತೆಂಗಿನ ಹೋಳಿನಲ್ಲಿ ಸುದರ್ಶನ ಸಾಲಿಗ್ರಾಮವನ್ನಿಟ್ಟು ಚಂದ್ರನಿಗೆ ಶಂಖದಿಂದ ಕ್ಷೀರಾರ್ಘ್ಯ ನೀಡಿದರು. ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರೂ ಕೈಜೋಡಿಸಿದರು. ಕೃಷ್ಣನ ಮುಂಭಾಗ ತೀರ್ಥ ಮಂಟಪದಲ್ಲಿ ವಿಶೇಷವಾಗಿ ಅಳವಡಿಸಿದ್ದ ಬೆಳ್ಳಿಯ ಮಂಟಪದಲ್ಲಿ ವಿದ್ವಾಂಸರು, ಮಠದ ಪರಿವಾರದವರು, ಗಣ್ಯರು, ಭಕ್ತರು ಸರತಿ ಸಾಲಿನಲ್ಲಿ ಬಂದು ಕೃಷ್ಣಾರ್ಘ್ಯವನ್ನೂ, ತುಳಸಿಕಟ್ಟೆಯಲ್ಲಿ ಚಂದ್ರಾರ್ಘ್ಯವನ್ನು ನೀಡಿದರು.

Leave a Reply

Your email address will not be published. Required fields are marked *