ಬಹುರೂಪಿ ಕೃಷ್ಣ

ಇಷ್ಟೇ ಎಂದು ಹೇಳಲು ಆಗದಂತಹ ಅದ್ಭುತ ವ್ಯಕ್ತಿತ್ವ ಕೃಷ್ಣನದು. ಕೃಷ್ಣ ಯಾರು, ಏನು ಎಂಬುದನ್ನು ಹೇಳಲು ಹೊರಟರೆ ಮೂವರು ಅಂಧರು ಆನೆಯನ್ನು ಮುಟ್ಟಿ ಅದರ ಬಾಲ, ಸೊಂಡಿಲು, ಹೊಟ್ಟೆ… ಹೀಗೆ ತಮ್ಮ ಅನುಭವ-ಸ್ಪರ್ಶಕ್ಕೆ ಎಷ್ಟು ಸಿಕ್ಕಿದೆಯೋ ಅಷ್ಟನ್ನೇ ವಿವರಿಸಿದಂತಾಗುತ್ತದೆ. ಹಾಗಾಗಿ ಕೃಷ್ಣನ ವಿರಾಟ್​ರೂಪವನ್ನು ಕಟ್ಟಿಕೊಡುವ ಪ್ರಯತ್ನ ಮಾಡದೆ ನಮ್ಮ ಗ್ರಹಿಕೆಗೆ ಸಿಕ್ಕಂತೆ ವಿಭಿನ್ನವಾಗಿ ಹೇಳುವ ಒಂದು ಕಿರುಪ್ರಯತ್ನ ಇಲ್ಲಿದೆ.

| ಕಾಂತ್ ಶೇಷಾದ್ರಿ/ರವಿಕಾಂತ ಕುಂದಾಪುರ

ಭಗವಾನ್ ಶ್ರೀಕೃಷ್ಣ ಎಂದಾಕ್ಷಣ ಒಬ್ಬೊಬ್ಬರ ಮನಸಿನಲ್ಲಿ ಒಂದೊಂದು ಚಿತ್ರಣ ಮೂಡುತ್ತದೆ. ಪ್ರೀತಿಸುವವರ ಪಾಲಿಗೆ ಕೃಷ್ಣ ಪ್ರೇಮಸ್ವರೂಪಿ, ಸ್ಪುರದ್ರೂಪಿ, ಚಿತ್ತಚೋರ. ರಾಜಕೀಯ ಮನಸ್ಥಿತಿಯವರಿಗೆ ಆತ ಅಪ್ರತಿಮ ರಾಜತಾಂತ್ರಿಕ ಚತುರ, ಉನ್ನತಾಧಿಕಾರಿಗಳ ಪಾಲಿಗೆ ಕೃಷ್ಣ ಅದೆಂಥದ್ದೇ ಪರಿಸ್ಥಿತಿಯನ್ನು ಸಲೀಸಾಗಿ ನಿಭಾಯಿಸುವ ಟ್ರಬಲ್​ಶೂಟರ್. ಭಕ್ತರ ಪಾಲಿಗೆ ಕರೆದಾಕ್ಷಣ ನೆರವಿಗೆ ಧಾವಿಸುವ ಆಪತ್ಬಾಂಧವ, ಅಧರ್ವಿುಗಳ ಪಾಲಿಗೆ ಕೃಷ್ಣ ದುಷ್ಟಶಿಕ್ಷಕ, ಧರ್ಮವನ್ನು ಪಾಲಿಸುವವರಿಗೆ ಶಿಷ್ಟರಕ್ಷಕ…

ಹಾಗೆ ನೋಡಿದರೆ ಕೃಷ್ಣ ಪರಮಜ್ಞಾನಿ ಮಾತ್ರವಲ್ಲ, ಒಂಥರ ವಿಜ್ಞಾನಿ ಕೂಡ. ನಾವೆಲ್ಲರೂ ಮಂಗನಿಂದ ಮಾನವ ಎಂಬ ವಿವರಣೆಯೊಂದಿಗೆ ವಿಕಾಸವಾದದ ಅನೇಕ ಮಜಲುಗಳನ್ನು ತಿಳಿಯುತ್ತ ಬೆಳೆದವರು. ಅಂಥ ವಿಕಾಸವಾದವನ್ನು ನಮ್ಮ ಮುಂದಿಟ್ಟ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್. ‘ದಿ ಒರಿಜಿನ್ ಆಫ್ ಸ್ಪೀಸಿಸ್’ ಎನ್ನುತ್ತ ಯಾವ್ಯಾವ ಜೀವಿಗಳು ಹೇಗ್ಹೇಗೆ ಜೀವ ತಳೆದವು, ಹೇಗೆ ಬೆಳೆದವು ಹಾಗೂ ಹೇಗೆ ನಾಮಾವಶೇಷವಾದವು ಎಂಬುದನ್ನು ಹಲವಾರು ನಿದರ್ಶನಗಳೊಂದಿಗೆ ವಿವರವಾಗಿ ನಮ್ಮ ಮುಂದಿಟ್ಟ ಡಾರ್ವಿನ್, ಅದನ್ನೇ ‘ವಿಕಾಸವಾದ’ ಎಂದು ಕರೆದ. ಅದರಲ್ಲಿ ಆತ ಉಲ್ಲೇಖಿಸಿದ ಎರಡು ಪ್ರಮುಖ ವಿಷಯಗಳೆಂದರೆ, ಸರ್ವೆವಲ್ ಆಫ್ ದಿ ಫಿಟ್ಟೆಸ್ಟ್’ ಮತ್ತು ‘ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್’. ಅಂದರೆ ಯಾವುದು ಅತಿ ಶಕ್ತಿಯುತವಾಗಿದೆಯೋ ಅದಷ್ಟೇ ಉಳಿಯುತ್ತದೆ ಮತ್ತು ಇಲ್ಲಿ ಎಲ್ಲವೂ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟ ಎಂದರ್ಥ.

ಅಂತಹ ವಿಕಾಸವಾದವನ್ನು ಡಾರ್ವಿನ್ ಹೇಳಿದ್ದು ಸುಮಾರು 200 ವರ್ಷಗಳ ಹಿಂದೆ. ಆದರೆ ಕೃಷ್ಣ ಅದನ್ನೇ 5 ಸಾವಿರ ವರ್ಷಗಳ ಹಿಂದೆ ಬರೀ ಹೇಳುವುದಕ್ಕಷ್ಟೇ ಸೀಮಿತವಾಗದೆ ಹಾಗೆಯೇ ಬದುಕಿ ತೋರಿಸಿದ್ದಾನೆ. ಜಗತ್ತು ಒಂದು ರೀತಿಯಲ್ಲಿ ಪರೋಕ್ಷವಾಗಿ ವಿನಾಶದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ದೇವೋತ್ತಮ ಪರಮಪುರುಷನಾದ ಕೃಷ್ಣನನ್ನು ನಾವೆಲ್ಲ ಅರಿತುಕೊಳ್ಳುವ ಅಗತ್ಯವಿದೆ. ಇದೊಂದು ರೀತಿಯಲ್ಲಿ ‘ಮಾಧವನಿಂದ ಮಾನವ’ ಎಂಬಂಥ ವಿಚಾರವಾದ. ಅರ್ಥಾತ್ ಮಾಧವನಿಂದ ಮಾನವ ಏನನ್ನು ತಿಳಿದುಕೊಳ್ಳಬೇಕು ಎಂಬ ಒಂದು ಪರಿಕಲ್ಪನೆ.

‘ಸರ್ವೈವಲ್‌ ಆಫ್ ದಿ ಫಿಟ್ಟೆಸ್ಟ್’

ಕೃಷ್ಣನದು ಬರೀ ‘ಅಸ್ತಿತ್ವಕ್ಕಾಗಿ ಹೋರಾಟ’ (ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್) ಆಗಿರಲಿಲ್ಲ. ಆತನ ಹುಟ್ಟೇ ಒಂದು ಹೋರಾಟವಾಗಿತ್ತು. ದುಷ್ಟ ಕಂಸ ಆತನನ್ನು ಭ್ರೂಣಾವಸ್ಥೆಯಲ್ಲೇ ಇಲ್ಲವಾಗಿಸಲು ಯತ್ನಿಸಿದ್ದ. ಅದಾಗ್ಯೂ ಕೃಷ್ಣ ಹುಟ್ಟಿದ. ಆನಂತರ ಪೂತನಿ, ಅಘಾಸುರ ಮತ್ತಿತರ ದುಷ್ಟ ಶಕ್ತಿಗಳು ಸಾಯಿಸಲು ಯತ್ನಿಸಿದರೂ ಕೃಷ್ಣ ಅವರನ್ನೇ ಸಂಹರಿಸಿದ. ಹೀಗೆ ‘ಅಸ್ತಿತ್ವಕ್ಕಾಗಿ ಹೋರಾಟ’ ಎಂಬುದನ್ನು ಸ್ವತಃ ಬದುಕಿ ತೋರಿದ ಕೃಷ್ಣ, ಇಡೀ ಬದುಕೇ ಒಂದು ಹೋರಾಟ ಎಂದು ಪ್ರತಿಪಾದಿಸಿದ. ಮಾತ್ರವಲ್ಲ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ವಿಶ್ವರೂಪ ತೋರಿ ಅದನ್ನೇ ಬೋಧಿಸಿದ. ಆ ಮೂಲಕ ಬದುಕೆಂಬ ಹೋರಾಟದಲ್ಲಿ ನಾವೆಂದೂ ಯಾವುದಕ್ಕೂ ಹಿಂಜರಿಯಬಾರದು, ಎಲ್ಲವನ್ನೂ ಎದುರಿಸುತ್ತಲೇ ಬದುಕಬೇಕು ಎಂಬುದನ್ನು ಸಾರಿದ. ಅದರಲ್ಲೂ ಬದುಕಿನ ಈ ಎಲ್ಲ ಹೋರಾಟಗಳನ್ನು ಎದುರಿಸುವಾಗಲೂ ಕೃಷ್ಣ ಪ್ರಸನ್ನವದನನಾಗಿ, ಪ್ರಶಾಂತಚಿತ್ತನಾಗಿಯೇ ಇದ್ದುದು ವಿಶೇಷ. ಯಾವುದೇ ಕಷ್ಟ ಬಂದಾಗಲೂ ನಮ್ಮ ನಗು ಹಾಗೂ ಖುಷಿ ಕಳೆದುಕೊಳ್ಳಬಾರದು ಎಂಬುದೇ ಇದರ ಹಿಂದಿರುವ ಸಂದೇಶ.

ಇನ್ನು ಆತ್ಮಕ್ಕೆ ಆದಿ ಇಲ್ಲ, ಅಂತ್ಯವೂ ಇಲ್ಲ. ಅದು ಒಂದು ಶರೀರದಿಂದ ಮತ್ತೊಂದು ಶರೀರಕ್ಕೆ ಸಾಗುತ್ತಿರುತ್ತದೆ. ಶರೀರವನ್ನೇ ಸಾಯಿಸಿದರೂ ಆತ್ಮ ಸಾಯುವುದಿಲ್ಲ. ಆತ್ಮವನ್ನು ಶಸ್ತ್ರ ಕತ್ತರಿಸಲಾಗದು, ಬೆಂಕಿ ಸುಡಲಾರದು, ಆತ್ಮ ಅತ್ಯಂತ ಶಕ್ತಿಶಾಲಿ ಎಂದು ಕೃಷ್ಣ ವರ್ಣಿಸಿದ್ದಾನೆ. ಅದನ್ನೇ ನಂತರ ವಿಜ್ಞಾನಿಗಳು ‘ಎನರ್ಜಿ ಕ್ಯಾನ್ ನೈದರ್ ಬಿ ಕ್ರಿಯೇಟೆಡ್, ನಾರ್ ಬಿ ಡೆಸ್ಟ್ರಾಯ್ಡ್’ (ಶಕ್ತಿಯನ್ನು ಸೃಷ್ಟಿಸಲೂ ಆಗುವುದಿಲ್ಲ, ನಾಶಪಡಿಸಲೂ ಆಗುವುದಿಲ್ಲ) ಎಂದು ಪ್ರತಿಪಾದಿಸಿದ್ದಾರೆ.

ಅಂತಿಮವಾಗಿ ಉಳಿಯುವುದು ಅಂಥ ಶಕ್ತಿಶಾಲಿಯಾದ ಆತ್ಮ ಮಾತ್ರ. ‘ಸರ್ವೆವಲ್ ಆಫ್ ದಿ ಫಿಟ್ಟೆಸ್ಟ್’ ಎಂದರೆ ಇದೇ. ಆ ಫಿಟ್ಟೆಸ್ಟ್ ಆದ ಆತ್ಮಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮ ಶರೀರ ಸಹಕರಿಸದಿದ್ದಾಗಲೂ ಆತ್ಮದ ಮೇಲೆ ವಿಶ್ವಾಸ ಇರಿಸಿಕೊಂಡರೆ ಅರ್ಥಾತ್ ಇಂಥ ಕೆಲಸವನ್ನು ನಾವು ಮಾಡಬಲ್ಲೆವು ಎಂಬ ಆತ್ಮಸ್ಥೈರ್ಯ, ಆತ್ಮವಿಶ್ವಾಸವನ್ನು ತಂದುಕೊಂಡರೆ ನಾವು ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುದನ್ನೇ ಕೃಷ್ಣ ಪರೋಕ್ಷವಾಗಿ ಹೇಳಿದ್ದಾನೆ.

ಜರಾ ಸಮಝ್ಲೊ…

ತಪ್ಪು ಮಾಡದವರು ಯಾರಿದ್ದಾರೆ ಹೇಳಿ? ಸಾಮಾನ್ಯವಾಗಿ ಎಲ್ಲರಿಂದಲೂ ಒಂದಲ್ಲ ಒಂದು ತಪ್ಪು ಆಗಿಬಿಡುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಟ್ಟದ್ದೇನನ್ನೋ ಮಾಡಿಬಿಟ್ಟಿರುತ್ತೇವೆ. ಅದಾಗ್ಯೂ ಅದರಿಂದ ನಮಗೇನೂ ದುಷ್ಪರಿಣಾಮ ಆಗಿಲ್ಲವೆಂದರೆ ನಾವು ಮಾಡಿದ್ದು ಸರಿ ಅಥವಾ ಒಳಿತು ಎಂದರ್ಥವಲ್ಲ. ಅದು ನಮಗೆ ತಿದ್ದಿಕೊಳ್ಳಲು ಸಿಕ್ಕ ಒಂದು ಅವಕಾಶ ಎಂದು ತಿಳಿಯಬೇಕು. ಅದನ್ನೇ ಕೃಷ್ಣ ನಮಗೆ ಜರಾಸಂಧನ ವಧೆ ಮೂಲಕ ಹೇಳಿದ್ದಾನೆ. ಜರಾಸಂಧ ಒಮ್ಮೆಗೇ 18 ಅಸುರೀ ಅಕ್ಷೋಹಿಣಿ ಸೈನ್ಯದೊಂದಿಗೆ ಬರುತ್ತಿದ್ದ. ಹೀಗೆ ಬಂದಾಗೆಲ್ಲ ಆತ ಸೋಲುತ್ತಿದ್ದ. ಆದರೂ ಅವನನ್ನು ಸಾಯಿಸದೆ ಕೃಷ್ಣ ಬಿಟ್ಟು ಕಳುಹಿಸುತ್ತಿದ್ದ. ಆದರೆ ಜರಾಸಂಧ ಮತ್ತೆ ಮತ್ತೆ ಬರುತ್ತಿದ್ದ ಹಾಗೂ ಪ್ರತಿ ಸಲ ಬಂದಾಗಲೂ ಒಂದೊಂದು ಅಕ್ಷೋಹಿಣಿ ಸೈನ್ಯವನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಬರುತ್ತಿದ್ದ. ಹೀಗೆ 17 ಬಾರಿ ಬಂದಾಗಲೂ ಸೋತ ಅವನನ್ನು ಕೃಷ್ಣ ಬಿಟ್ಟುಕಳಿಸಿದ್ದನ್ನು ನೋಡಿದ ಬಲರಾಮ, ಯಾಕೆ ಹಾಗೆ ಮಾಡಿದೆ ಎಂದು ಕೇಳುತ್ತಾನೆ. ಎಲ್ಲ ಅಸುರೀ ಶಕ್ತಿಗಳು ನಮ್ಮಲ್ಲಿಗೇ ಬಂದರೆ ಎಲ್ಲವನ್ನೂ ಒಮ್ಮೆಗೇ ಸಂಹರಿಸಲು ಅನುಕೂಲವಲ್ಲವೇ? ಎನ್ನುತ್ತಾನೆ ಕೃಷ್ಣ. ಹಾಗೆಯೇ ನಾವು ಒಂದು ತಪ್ಪು/ಕೆಡುಕು ಮಾಡಿದಾಕ್ಷಣ ಏನೂ ಆಗಲಿಲ್ಲ ಎಂದುಕೊಂಡು ಮತ್ತೆ ಮತ್ತೆ ತಪ್ಪು/ಕೆಡುಕು ಮಾಡಲು ಹೋಗಬಾರದು. ನಮ್ಮಿಂದ ಕೆಡುಕು ಅತಿಯಾದಾಗ ಅದಕ್ಕೆ ತಕ್ಕ ಶಾಸ್ತಿ ಆಗಿಯೇ ಆಗುತ್ತದೆ. ಪಾಪದ ಕೊಡ ತುಂಬುವುದು ಎಂದರೆ ಇದೇ ಅಲ್ಲವೇ?

ಆಪತ್ಬಾಂಧವ

ಆಪತ್ತಿಗಾದವನೇ ಕೃಷ್ಣ. ಒಂದರ್ಥದಲ್ಲಿ ಟ್ರಬಲ್​ಶೂಟರ್ ರೀತಿ ಭಗವಂತ ಕಾಣಿಸಿಕೊಳ್ಳುತ್ತ ಹೋಗುತ್ತಾನೆ. ಬಾಲ್ಯದಲ್ಲಿ ಗೆಳೆಯರು, ನೆರೆಹೊರೆಯವರಿಗೆ, ಯೌವನದಲ್ಲಿ ಪಾಂಡವರಿಗೆ… ಹೀಗೆ ಕೃಷ್ಣ ತನ್ನನ್ನು ನಂಬಿದವರಿಗೆ ಆಪತ್ತಿನಲ್ಲಿ ಅಚಾನಕ್ ಕಾಣಿಸಿಕೊಂಡು ಸಮಸ್ಯೆ ಪರಿಹರಿಸುತ್ತಾನೆ. ಗೋವರ್ಧನ ಲೀಲೆ, ಅಘಾಸುರ ಸಂಹಾರ, ದ್ರೌಪದಿ ವಸ್ತ್ರಾಪಹರಣ ಸಂದರ್ಭ ಸೇರಿ ಅನೇಕ ನಿದರ್ಶನಗಳಿವೆ. ಆ ಮೂಲಕ ಕೃಷ್ಣ ಹೇಳುವುದೇನೆಂದರೆ ಗೆಳೆಯರು, ನೆಂಟರು, ಸಹೋದ್ಯೋಗಿಗಳು ಅಥವಾ ನಮ್ಮನ್ನು ನಂಬಿದ ಯಾರೇ ಆಗಿರಲಿ ಅವರಿಗೆ ಕಷ್ಟ ಕಾಲದಲ್ಲಿ ನೆರವಾಗಬೇಕು. ಗೆಳೆಯರಾದ ಸುಧಾಮ, ಶ್ರೀಧಾಮ, ಮಧುಮಂಗಳ, ಅರ್ಜುನ, ಉದ್ಧವ ಮುಂತಾದವರೊಂದಿಗೆ ಒಡನಾಡಿದ ಕೃಷ್ಣ ಗೆಳೆತನವೆಂದರೆ ಹೇಗಿರಬೇಕು ಎಂಬುದನ್ನೂ ತಿಳಿಸಿಕೊಟ್ಟಿದ್ದಾನೆ.

ನಿಂತ ನೆಲವೇ ಕುಸಿದಾಗ…

ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ಎಂದಿರುವ ಕೃಷ್ಣ, ಈ ಜಗತ್ತಿನ ಸೃಷ್ಟಿ ನನ್ನ ಅಧ್ಯಕ್ಷತೆಯಲ್ಲೇ ಆಗಿದೆ, ಪ್ರಕೃತಿಯ ಪ್ರತಿಯೊಂದೂ ನನ್ನ ಆಣತಿಯಂತೆಯೇ ನಡೆಯುತ್ತಿದೆ ಎಂದಿದ್ದಾನೆ. ಇತ್ತೀಚೆಗೆ ಕೊಡಗು-ಕೇರಳ ಪ್ರಕೃತಿ ವಿಕೋಪಕ್ಕೀಡಾಗಿ ಅಲ್ಲಿನ ಜನರು ಅಕ್ಷರಶಃ ‘ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್’ ನಡೆಸುತ್ತಿರುವಾಗ ಕೃಷ್ಣನ ಸ್ಮರಣೆ ಇಲ್ಲಿ ಅತ್ಯಂತ ಸೂಕ್ತ. ಮನುಷ್ಯ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡಿರುವುದೇ ಕೊಡಗು-ಕೇರಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಮೂಲಕಾರಣ ಎನ್ನಲಾಗುತ್ತಿದೆ. ಪ್ರಕೃತಿಯೇ ದೈವನಿಯಾಮಕ ಎಂದಾಗಿರುವಾಗ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸುವುದೂ ದೇವರ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಂತೆ. ಇದು ಕೂಡ ಒಂದು ರೀತಿಯಲ್ಲಿ ಅಧರ್ಮವೇ ಎಂಬುದನ್ನು ಹುಲುಮಾನವರು ತಿಳಿದುಕೊಳ್ಳಲು ಇದು ಸಕಾಲ.

ಕೊಡಗಿನಲ್ಲಿ ಸಂಭವಿಸಿದ ಭಾರಿ ಭೂಕುಸಿತಗಳನ್ನು, ಅದರ ಭೀಕರತೆ, ಅಲ್ಲಿನ ಜನರ ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್ಗಳನ್ನು ದೃಶ್ಯಮಾಧ್ಯಮದಲ್ಲಿ ಬಹುತೇಕ ಎಲ್ಲರೂ ಕಂಡಿದ್ದೇವೆ. ಎಷ್ಟೋ ಸಲ ಬದುಕಿನ ಹೋರಾಟದಲ್ಲಿ ನಾವೂ ಹಾಗೆ ದೈಹಿಕವಾಗಿ ಮಾನಸಿಕವಾಗಿ ಕುಸಿದುಬಿಟ್ಟಿರುತ್ತೇವೆ. ಅಂಥ ಸಂದರ್ಭಗಳಲ್ಲಿ ನಮ್ಮನ್ನು ನಾವು ಹೇಗೆ ಸಂಭಾಳಿಸಿಕೊಳ್ಳಬೇಕು ಎಂಬುದನ್ನು ಕುರುಕ್ಷೇತ್ರದ ಸನ್ನಿವೇಶವೊಂದರಿಂದ ತಿಳಿಯಬಹುದು. ಬದುಕಿನ ಹೋರಾಟದಲ್ಲಿ ಕುಸಿದಾಕ್ಷಣ ಅಷ್ಟಕ್ಕೇ ಅಂಜಬಾರದು. ಕುರುಕ್ಷೇತ್ರದಲ್ಲಿ ಹೋರಾಡುವಾಗ ಅರ್ಜುನನಿಗೂ ಹಾಗೇ ಆಗಿತ್ತು. ಎದುರಾಳಿ ಕರ್ಣ ಬಿಟ್ಟ ಬ್ರಹ್ಮಾಸ್ತ್ರವನ್ನು ಎದುರಿಸಬೇಕು ಎನ್ನುತ್ತಿರುವಾಗಲೇ ಅರ್ಜುನ ನಿಂತಿದ್ದ ಜಾಗವೇ ಧಸಕ್ ಎಂದು ಕುಸಿದಿತ್ತು. ಹಾಗಾಗಲಿ ಎಂದೇ ಅರ್ಜುನನಿದ್ದ ರಥವನ್ನು ಅಂದು ಸಾರಥಿಯಾಗಿದ್ದ ಕೃಷ್ಣ ತುಳಿದು ಕುಸಿಯುವಂತೆ ಮಾಡಿದ್ದ, ಇಲ್ಲದಿದ್ದರೆ ಆ ಅಸ್ತ್ರ ಅರ್ಜುನನ ಕಿರೀಟದ ಬದಲು ಶಿರವನ್ನೇ ಉರುಳಿಸಿಬಿಟ್ಟಿರುತ್ತಿತ್ತು. ನಾವೂ ಅಷ್ಟೇ… ಒಮ್ಮೊಮ್ಮೆ ಮಾನಸಿಕವಾಗಿ ತೀರಾ ಕುಸಿದಾಗ ಬೇಸರದಿಂದ ಕುಗ್ಗಿಹೋಗಬಾರದು. ದೇವರೇ ತುಳಿದ ಎನಿಸಿದರೂ ಅದು ನಮ್ಮ ತಲೆ ಉಳಿಸುವುದಕ್ಕಾಗಿಯೇ ಅಂತ ಅಂದುಕೊಳ್ಳಬೇಕು. ಹೀಗೆ ಕೃಷ್ಣನಿಂದ ಕಲಿಯುತ್ತ ಹೋದಷ್ಟೂ ಕಷ್ಟಕಾಲಗಳನ್ನು ಕಳೆಯುವುದು ಸಲೀಸಾಗುತ್ತ ಹೋಗುತ್ತದೆ.

ಸದ್ಯ ಬದುಕಿಗಾಗಿ ಹೋರಾಡುತ್ತಿರುವ ಸಂತ್ರಸ್ತರ ಪಾಲಿಗೀಗ ಕೊಡಗು ಎಂಬುದೇ ಕುರುಕ್ಷೇತ್ರ. ಸರ್ವೆವಲ್ ಆಫ್ ದ ಫಿಟ್ಟೆಸ್ಟ್ ನಿಜ. ಆದರೆ ಸಂತ್ರಸ್ತರೆಲ್ಲರೂ ಸರ್ವೆವ್ ಆಗುವಷ್ಟು ಫಿಟ್ಟೆಸ್ಟ್ ಆಗಲಿ, ಅದಕ್ಕೆ ಬೇಕಾದ ಆತ್ಮವಿಶ್ವಾಸ-ಆತ್ಮಸ್ಥೈರ್ಯವನ್ನು ಭಗವಾನ್ ಶ್ರೀಕೃಷ್ಣ ಅನುಗ್ರಹಿಸಲಿ. ಇನ್ನಾದರೂ ಪ್ರಕೃತಿಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತಿಸೋಣ.. ಉಳಿದಿದ್ದನ್ನು ಕೃಷ್ಣನಿಗೆ ಬಿಟ್ಟುಬಿಡೋಣ.

‘ಸ್ಟ್ರ್ಯಾಟಜಿಸ್ಟ್‌’ಗಳ ಮಹಾಗುರು

ಶಕ್ತಿಗಿಂತ ಯುಕ್ತಿ ಮೇಲು ಎಂಬುದು ನಾಣ್ಣುಡಿ. ಅದನ್ನೇ ಈಗ ‘ಸ್ಟ್ರಾ ್ಯಜಿ’ ಎಂದು ಕರೆಯಲಾಗುತ್ತಿದೆ. ಕಾರ್ಪೆರೇಟ್ ಕಂಪನಿಗಳಲ್ಲಿ ‘ಸ್ಟ್ರಾ ್ಯಜಿ’ ಮಾಡುವ, ಅಂದರೆ ತಂತ್ರ ಹೆಣೆಯುವ ವ್ಯಕ್ತಿಗಳಿಗೆ ಬಹುಮೌಲ್ಯಯುತ ಸ್ಥಾನ ಉಂಟು. ಅಂಥ ‘ಸ್ಟ್ರಾ ್ಯಜಿಸ್ಟ್’ಗಳಿಗೆಲ್ಲ ಮಹಾಗುರು ಕೃಷ್ಣ ಎಂದರೂ ಅತಿಶಯೋಕ್ತಿಯಲ್ಲ. ಕೃಷ್ಣನಿಗೂ ತಂತ್ರಗಾರಿಕೆಗೂ ಅವಿನಾಭಾವ ನಂಟು. ಅದೆಂಥ ತಂತ್ರಕ್ಕೂ ಪ್ರತಿತಂತ್ರ ಹೆಣೆಯುವಲ್ಲಿ ಕೃಷ್ಣ ನಿಷ್ಣಾತ. ಅಂಥ ಹತ್ತಾರು ದೃಷ್ಟಾಂತಗಳು ಅವನನ್ನು ಒಬ್ಬ ಮಹಾನ್ ತಂತ್ರಗಾರ ಎಂಬುದನ್ನು ನಿರೂಪಿಸಿವೆ. ಅದರಲ್ಲಿ ಇದೂ ಒಂದು. ಪಂಚಪಾಂಡವರ ಸಂಹಾರಕ್ಕೆಂದೇ ಐದು ಪ್ರಮುಖ ಬಾಣಗಳನ್ನು ಭೀಷ್ಮರು ಇರಿಸಿಕೊಂಡಿದ್ದರು. ಆದರೆ ಭೀಷ್ಮರು ತನ್ನ ಪರವಾಗಿ ಸರಿಯಾಗಿ ಯುದ್ಧತಂತ್ರ ಮಾಡುತ್ತಿಲ್ಲ ಎನಿಸಿದಾಗ ದುರ್ಯೋಧನ, ಒಂದು ರಾತ್ರಿಯ ಮಟ್ಟಿಗೆ ಕೊಡಿ ಎಂದು ಭೀಷ್ಮರಲ್ಲಿದ್ದ ಆ ಬಾಣಗಳನ್ನು ಯುದ್ಧ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾನೆ. ದುರ್ಯೋಧನನ ಈ ತಂತ್ರಕ್ಕೆ ಕೃಷ್ಣ ಪ್ರತಿತಂತ್ರ ಹೂಡುತ್ತಾನೆ. ಹಿಂದೆ ಗುರುಕುಲದಲ್ಲಿ ಒಟ್ಟಿಗೇ ಇದ್ದಾಗ ಮೊಸಳೆಯೊಂದರಿಂದ ದುರ್ಯೋಧನನ್ನು ಅರ್ಜುನ ಕಾಪಾಡಿರುತ್ತಾನೆ. ಆಗ, ನೀನು ಕೇಳಿದ್ದನ್ನು ಕೊಡುವೆ ಎಂದು ಅರ್ಜುನನಿಗೆ ದುರ್ಯೋಧನ ಮಾತು ಕೊಟ್ಟಿದ್ದ. ಆ ಮಾತನ್ನು ಯುದ್ಧದ ಈ ಸಂದರ್ಭದಲ್ಲಿ ಈಡೇರಿಸಿಕೊಳ್ಳಲು ಅರ್ಜುನನಿಗೆ ಕೃಷ್ಣ ಸಲಹೆ ನೀಡಿ, ದುರ್ಯೋಧನನಿಂದ ಆ ಬಾಣಗಳನ್ನು ಪಡೆದುಕೊಳ್ಳುವಂತೆ ಮಾಡುತ್ತಾನೆ. ಇನ್ನು ಗಾಂಧಾರಿಯ ವಿಶೇಷ ದೃಷ್ಟಿಯಿಂದ ದುರ್ಯೋಧನನ ದೇಹ ವಜ್ರಕಾಯವಾದರೂ ತೊಡೆಯ ಭಾಗದಲ್ಲಿ ಆಕೆಯ ದೃಷ್ಟಿ ಫಲ ಕೊಡದಂತೆ ಕೃಷ್ಣ ತಂತ್ರ ಮಾಡಿರುತ್ತಾನೆ. ಇದು ಮುಂದೆ ಊರುಭಂಗ ಸಂದರ್ಭ ಭೀಮನಿಗೆ ದುರ್ಯೋಧನನನ್ನು ಮಣಿಸಲು ನೆರವಾಗುತ್ತದೆ. ಇಂಥ ಹಲವು ತಂತ್ರಗಳ ಮೂಲಕ ಕೃಷ್ಣ ಮನುಕುಲಕ್ಕೆ ಸಾರುವ ಸಂದೇಶವಿಷ್ಟೇ.. ಬದುಕೊಂದು ಯುದ್ಧ ನಿಜ. ಆದರೆ ಹೋರಾಡುವಾಗ ದೇಹದ ತಾಕತ್ತಿಗಿಂತಲೂ ಬುದ್ಧಿಯ ಕಸರತ್ತನ್ನು ಹೆಚ್ಚು ಬಳಸಿಕೊಳ್ಳಿ..

| ಪೂರಕ ಮಾಹಿತಿ: ಶ್ರೀ ಕುಲಶೇಖರ ಚೈತನ್ಯ ದಾಸ, ಶ್ರೀ ಮಾಧವಾನಂದ ದಾಸ, ಬೆಂಗಳೂರು