ಮಡಕೆ ಒಡೆದು ಸಂಭ್ರಮಿಸಿದ ಯುವಕರುವಿಜಯವಾಣಿ ಸುದ್ದಿಜಾಲ ನಂಜನಗೂಡು
ತಾಲೂಕಿನ ಕತ್ವಾಡಿಪುರದಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಸಾವಿರಾರು ಭಕ್ತರು ವೇಣುಗೋಪಾಲಸ್ವಾಮಿ ದರ್ಶನ ಪಡೆದರು.
ಮುಂಜಾನೆಯಿಂದಲೇ ದೇವಾಲಯದ ಗರ್ಭಗುಡಿಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಿರ್ವಿಘ್ನವಾಗಿ ಸಾಗಿದವು. ವೇಣುಗೋಪಾಲ ವಿಗ್ರಹಕ್ಕೆ ಮಾಡಲಾಗಿದ್ದ ಪುಷ್ಪಾಲಂಕಾರ ಕಣ್ಮನ ಸೆಳೆಯಿತು. ಪುರೋಹಿತ ಕೃಷ್ಣ ಜೋಯಿಸ್ ನೇತೃತ್ವದಲ್ಲಿ ಸುದರ್ಶನ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು ನಡೆದವು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಸಾಗರೋಪಾದಿಯಲ್ಲಿ ಆಗಮಿಸಿದ ಭಕ್ತರು ವೇಣುಗೋಪಲನ ದರ್ಶನ ಪಡೆದು ಪುನೀತರಾದರು. ಭಕ್ತರಿಗಾಗಿ ಸೇವಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶಿವರಂಜಿನಿ ಮೆಲೋಡಿ ತಂಡ ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಭಕ್ತರನ್ನು ತಲೆದೂಗುವಂತೆ ಮಾಡಿತು.
ಮಡಕೆ ಒಡೆಯುವ ಸ್ಪರ್ಧೆ: ದೇವಾಲಯ ಆವರಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಯುವಕರಿಗಾಗಿ ಏರ್ಪಡಿಸಲಾಗಿದ್ದ ತೂಗುವ ಮೊಸರು ತುಂಬಿದ ಮಡಕೆ ಒಡೆಯುವ ಸ್ಪರ್ಧೆ ಗಮನ ಸೆಳೆಯಿತು. ಯುವಕರ ತಂಡಗಳು ಉತ್ಸಾಹದಿಂದ ಪಾಲ್ಗೊಂಡವು. ಒಬ್ಬರ ಮೇಲೋಬ್ಬರು ನಿಂತು ಮಡಕೆ ಒಡೆಯುವ ದೃಶ್ಯವನ್ನು ವೀಕ್ಷಿಸಲು ಜನಸ್ತೋಮ ನೆರೆದಿತ್ತು. ಕೇಕೆ, ಶಿಳ್ಳೆ, ಚಪ್ಪಾಳೆ ಮೂಲಕ ಯುವಕರನ್ನು ಹುರಿದುಂಬಿಸಿದರು. ಇನ್ನು ಯುವಕರು ಬಣ್ಣದೋಕಳಿ ಆಚರಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಮಿಂದೆದ್ದರು.
ಕತ್ವಾಡಿಪುರ ಹೊರವಲಯದಲ್ಲಿರುವ ಮುಜುರಾಯಿ ಇಲಾಖೆಗೆ ಸೇರಿದ ವೇಣುಗೋಪಾಲಸ್ವಾಮಿ ದೇವಾಲಯ ಕಳೆದ ನಾಲ್ಕು ವರ್ಷಗಳ ಹಿಂದೆ ಪಾಳುಗುಡಿಯಾಗಿತ್ತು. ಯಾವ ದೇವರ ವಿಗ್ರಹವಿದೆ ಎಂಬುದು ಗ್ರಾಮಸ್ಥರಿಗೂ ಅಷ್ಟಾಗಿ ತಿಳಿದಿರಲಿಲ್ಲ. ದೇವಾಲಯದ ಗೋಡೆ ಮಧ್ಯಭಾಗದಲ್ಲೇ ಮರಗಿಡಗಳು ಬೆಳೆದು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜನ್ಮದಿನದ ಸ್ಮರಣಾರ್ಥ ಮೇ 28, 2016ರಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಈ ದೇಗುಲ ಆವರಣದಲ್ಲಿ ಶ್ರಮದಾನಕ್ಕೆ ಮುಂದಾಗಿದ್ದರು. ದೇಗುಲಕ್ಕೆ ಹೊಸ ಸ್ವರೂಪ ಕೊಡುವ ಕಾಯಕ್ಕೆ ಮುಂದಾದ ಯುವ ಬ್ರಿಗೇಡ್ ಶ್ರಮಕ್ಕೆ ಕತ್ವಾಡಿಪುರ ಗ್ರಾಮಸ್ಥರು ಕೈಜೋಡಿಸಿದ ಪರಿಣಾಮ 2016ರಲ್ಲಿ ಮರು ಕಳಶ ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಯುವ ಬ್ರಿಗೇಡ್ ವಿಭಾಗೀಯ ಸಂಚಾಲಕ ಎಸ್.ಚಂದ್ರಶೇಖರ್ ತಿಳಿಸಿದರು. 

Leave a Reply

Your email address will not be published. Required fields are marked *