ಲವ್ ಮೊಕ್ಟೇಲ್​ಗಾಗಿ ಮಿಲನಾ ಕೂದಲಿಗೆ ಕತ್ತರಿ

ಬೆಂಗಳೂರು: ಮೊದಲೆಲ್ಲ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ‘ಡಾರ್ಲಿಂಗ್’ ಕೃಷ್ಣ, ‘ಚಾರ್ಲಿ’, ‘ಮುಂಬೈ’, ‘ಹುಚ್ಚ-2’ ಸೇರಿ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಇದೀಗ ಫಾರ್ ಎ ಚೇಂಜ್, ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ ನಾಯಕನಾಗಿಯೂ ನಟಿಸುತ್ತಿದ್ದಾರೆ. ಈ ಹಿಂದೆ ‘ಚಾರ್ಲಿ’ ಚಿತ್ರದಲ್ಲಿ ಕೃಷ್ಣನಿಗೆ ಜೋಡಿಯಾಗಿದ್ದ ಮಿಲನಾ ನಾಗರಾಜ್, ಇಲ್ಲಿಯೂ ನಾಯಕಿಯಾಗಿ ಮುಂದುವರಿದಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು ‘ಲವ್ ಮೊಕ್ಟೇಲ್’. ಯುವಕರನ್ನೇ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಕೃಷ್ಣ ಕಥೆ ಹೆಣೆದಿದ್ದಾರೆ. ಕಥೆ ಕೇಳಿಯೇ ಇಷ್ಟಪಟ್ಟಿರುವ ಮಿಲನಾ, ತುಂಬು ಖುಷಿಯಲ್ಲಿಯೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ‘ಸದ್ಯದ ಟ್ರೆಂಡ್ ಏನಿದೆ ಎಂಬುದನ್ನು ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಯುವ ಜನತೆಗೆ ಸಂಬಂಧಿಸಿದ ಸಿನಿಮಾ ಆಗಿರುವುದರಿಂದ ತುಂಬ ಕಲರ್​ಫುಲ್ ಆಗಿ ಮೂಡಿಬರುತ್ತಿದೆ.

ಚಿತ್ರದ ಶೀರ್ಷಿಕೆಗೂ ಕಥೆಗೂ ಸಾಮ್ಯ ಇರುವುದರಿಂದ ಅದನ್ನೇ ಆಯ್ದುಕೊಂಡಿದ್ದಾರೆ. ಆದರೆ, ಆ ಗುಟ್ಟನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಎಂದು ಟೈಟಲ್ ಅರ್ಥವನ್ನು ಗುಟ್ಟಾಗಿಡುತ್ತಾರೆ ಮಿಲನಾ. ವಿಶೇಷ ಎಂಬಂತೆ ‘ಲವ್ ಮೊಕ್ಟೇಲ್’ ಚಿತ್ರದಲ್ಲಿ ಐಟಿ ಕಂಪನಿಯ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿರುವ ಮಿಲನಾ, ಪಾತ್ರಕ್ಕಾಗಿ ಕೂದಲಿಗೆ ಕತ್ತರಿ ಹಾಕಿದ್ದಾರೆ! ‘ನಿರ್ದೇಶಕರೇ ಪಾತ್ರಕ್ಕಾಗಿ ಮೇಕ್ ಓವರ್ ಮಾಡಿಸಿದ್ದಾರೆ. ಶಾರ್ಟ್ ಹೇರ್​ನಲ್ಲಿಯೇ ಕಾಣಿಸಿಕೊಳ್ಳಬೇಕು ಎಂದಿದ್ದರು. ಅದರಂತೆ ಕೂದಲಿಗೆ ಕತ್ತರಿ ಹಾಕಿಸಿದ್ದೇನೆ. ಹೊಸ ಲುಕ್ ನನಗೂ ಇಷ್ಟವಾಗಿದೆ’ ಎನ್ನುತ್ತಾರೆ. ಅಪ್ಪ ಅಮ್ಮನನ್ನು ಕಳೆದುಕೊಂಡ ಅನಾಥೆಯಾಗಿ ಮಿಲನಾ ಪಾತ್ರ ಸಾಗಲಿದ್ದು, ಆ ಅನಾಥೆ ಭಾವ ಬದಿಗಿಟ್ಟು ಸ್ವತಂತ್ರವಾಗಿ ಬದುಕುವ ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೇ. 50 ಶೂಟಿಂಗ್ ಮುಗಿದಿದ್ದು, ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ಮಾಡಲಾಗಿದೆಯಂತೆ. ಇನ್ನುಳಿದಂತೆ ಕಾಲಿವುಡ್​ನಲ್ಲಿ ನಿರ್ವಣವಾಗುತ್ತಿರುವ ‘ವೆಲೈ ಇಲ್ಲ ವಿವಸಾಯಿ’ ಸಿನಿಮಾದಲ್ಲೂ ಹಳ್ಳಿ ಹುಡುಗಿಯಾಗಿ ಮಿಲನಾ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲೂ ಕೆಲ ಕಥೆಗಳನ್ನೂ ಇಷ್ಟಪಟ್ಟಿದ್ದು, ಶೀಘ್ರದಲ್ಲಿಯೇ ಅಂತಿಮ ಮಾಡಲಿದ್ದಾರಂತೆ.

ಕಥೆ ಕೇಳಿಯೇ ತುಂಬ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡಿದ್ದೇನೆ. ಶಾರ್ಟ್ ಹೇರ್​ನಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಶೂಟಿಂಗ್ ಮುಗಿದ ಬಳಿಕ, ತಮಿಳಿನ ಸಿನಿಮಾಕ್ಕಾಗಿ ಮತ್ತೆ ಉದ್ದ ಕೂದಲು ಬಿಡಬೇಕಿದೆ.

| ಮಿಲನಾ ನಾಗರಾಜ್ ನಟಿ

Leave a Reply

Your email address will not be published. Required fields are marked *