ಐಟಿ, ಇ.ಡಿ., ಸಿಬಿಐ ಅನ್ನು ಬಿಜೆಪಿ ಸೀಳುನಾಯಿಗಳನ್ನಾಗಿ ಮಾಡಿಕೊಂಡಿದೆ: ಕೃಷ್ಣ ಬೈರೇಗೌಡ

ಬೆಂಗಳೂರು: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ಅನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಸಂಸ್ಥೆಗಳ ಮೂಲಕ ಕರ್ನಾಟಕದ ಹೆಮ್ಮೆಯ ಪುತ್ರ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ವಿಶ್ವ ಒಕ್ಕಲಿಗರ ಒಕ್ಕೂಟ ಬುಧವಾರ ರಾಜಭವನ ಚಲೋ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷ್ಣಾ ಬೈರೇಗೌಡ ಮಾತನಾಡಿದರು.

ಇಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೃಷ್ಣಾ ಬೈರೇಗೌಡ, ‘ಐಟಿ ಮತ್ತು ಇ.ಡಿ.ಯನ್ನು ಕೇಂದ್ರ ಸರ್ಕಾರ ಬಳಸಿಕೊಂಡು ಹೇಡಿಗಳಂತೆ ರಾಜಕೀಯ ಮಾಡುತ್ತಿದೆ. ಇವರಿಗೆ ಧೈರ್ಯವಿದ್ದರೆ ಜನರ ನಡುವೆ ರಾಜಕೀಯ ಮಾಡಲಿ. ವಿಜಯ್​ ಮಲ್ಯ ದೇಶ ಬಿಟ್ಟು ಹೋದಾಗ ಐಟಿ ಮತ್ತು ಇ.ಡಿ. ಎಲ್ಲಿ ಹೋಗಿದ್ದರು. ಕೇಂದ್ರ ಸರ್ಕಾರ ಐಟಿ, ಇ.ಡಿ., ಸಿಬಿಐ ಅನ್ನು ಬಿಜೆಪಿ ಸೀಳುನಾಯಿಗಳನ್ನಾಗಿ ಮಾಡಿಕೊಂಡಿದೆ. ಪಾಕಿಸ್ತಾನದಲ್ಲೂ ಇದೇ ರೀತಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಪಾಕ್ ಮಾದರಿ ಅನುಸರಿಸುತ್ತಿದೆ. ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್​ರದ್ದು ಆತ್ಮಹತ್ಯೆ ಅಲ್ಲ, ಕುಮ್ಮಕ್ಕಿನ ಸಾವು’ ಎಂದು ಆರೋಪಿಸಿದರು.

ರ‍್ಯಾಲಿ ಆರಂಭ

12 ಜಿಲ್ಲೆಗಳಿಂದ ಒಕ್ಕಲಿಗರು ಆಗಮಿಸಿದ್ದು, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ ಸೇರಿ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಹಲವು ಮುಖಂಡರು ಭಾಗವಹಿಸಿದ್ದಾರೆ. ರ‍್ಯಾಲಿ ನ್ಯಾಷನಲ್​ ಕಾಲೇಜು ಮೈದಾನದಿಂದ ಹೊರಟಿದ್ದು, ಫ್ರೀಡಂ ಪಾರ್ಕ್​ ತಲುಪಿದೆ.

Leave a Reply

Your email address will not be published. Required fields are marked *