ಅಕ್ರಮ ಮದ್ಯ ನಾಶಪಡಿಸಿದ ಅಧಿಕಾರಿಗಳು

ಕೆ.ಆರ್.ಪೇಟೆ: ಮದ್ಯ ಅಕ್ರಮ ಮಾರಾಟಗಾರರು ಮತ್ತು ಸಾಗಣೆದಾರರ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಮದ್ಯವನ್ನು ತಾಲೂಕು ಅಬ ಕಾರಿ ವಲಯ ಅಧಿಕಾರಿಗಳು ನಾಶಪಡಿಸಿದ್ದಾರೆ.

ತಾಲೂಕಿನಲ್ಲಿ 2011ರಿಂದ 2018ರವರೆಗೆ 267 ಪ್ರಕರಣಗಳನ್ನು ದಾಖಲಿಸಿ ವಿವಿಧ ಬ್ರಾಂಡ್‌ನ 764 ಲೀಟರ್ ಮದ್ಯ, 20.330 ಲೀಟರ್ ಬಿಯರ್ ಅನ್ನು ವಶಕ್ಕೆ ಪಡೆದಿದ್ದರು. 207 ಪ್ರಕರಣದಲ್ಲಿ ಆರೋಪಿಗಳಿಗೆ ದಂಡ ಹಾಕಿ ಸುಮಾರು 4.20 ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ಕಟ್ಟಿದ್ದಾರೆ. ಉಳಿದ 60 ಪ್ರಕರಣಗಳು ಘೋರ ಪ್ರಕರಣಗಳಾಗಿದ್ದು, ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಅಬಕಾರಿ ಉಪ ಅಧೀಕ್ಷಕ ಕೆ.ವಿ.ದಿವಾಕರ್ ನೇತೃತ್ವದಲ್ಲಿ ತಾಲೂಕಿನ ತೇಗನಹಳ್ಳಿ ಬಳಿ ಇರುವ ಅರಣ್ಯ ಜಾಗದಲ್ಲಿ ಮದ್ಯವನ್ನು ನಾಶ ಮಾಡಲಾಯಿತು. ತಾಲೂಕು ಅಬಕಾರಿ ವಲಯ ಸಬ್‌ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ, ಪಟ್ಟಣ ಠಾಣೆ ಎಎಸ್‌ಐ ರಾಮಚಂದ್ರನಾಯಕ್, ಕಂದಾಯ ಇಲಾಖೆಯ ಶಿರಸ್ತೇದಾರ್ ಮಹದೇವಗೌಡ, ಪಾಂಡವಪುರದ ಕೆಎಸ್‌ಬಿಸಿಎಲ್ ಮ್ಯಾನೇಜರ್ ಎಂ.ಸಿ.ರಮೇಶ್ ಮೊದಲಾದವರು ಹಾಜರಿದ್ದರು.