ನಾಲೆಗಳಿಗೆ ನೀರು ಹರಿಸಲು ಆಗ್ರಹ

ಕೆ.ಆರ್.ಪೇಟೆ: ಹೇಮಾವತಿ ಜಲಾಶಯದ ಮೂಲಕ ಕೆ.ಆರ್.ನಗರ ಮತ್ತು ಹೊಳೆನರಸೀಪುರ ತಾಲೂಕಿನ ನಾಲೆಗಳಿಗೆ ನೀರು ಹರಿಸುತ್ತಿರುವ ಮಾದರಿಯಲ್ಲಿ ತಾಲೂಕಿನ ನಾಲೆಗಳಿಗೆ ನೀರು ಹರಿಸದಿದ್ದರೆ ನೀರಾವರಿ ಇಲಾಖೆಯ ವಿಭಾಗೀಯ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ರೈತಸಂಘವು ಎಚ್ಚರಿಸಿದೆ.

ರೈತ ಮುಖಂಡ ಎಂ.ವಿ.ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ಪಟ್ಟಣದ ಹೇಮಾವತಿ ಜಲಾಶಯ ಯೋಜನೆಯ ಎಇ ಚೇರಿಗೆ ನಿಯೋಗದ ಮೂಲಕ ಆಗಮಿಸಿದ ರೈತಮುಖಂಡರು ಈ ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿರುವ ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಅಕ್ಕಿಹೆಬ್ಬಾಳು ನಾಲಾ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ತೆಂಗು, ಬಾಳೆ, ಅಡಿಕೆ ಮುಂತಾದ ಬೆಳೆಗಳು ಬೆಳೆದು ನಿಂತಿದೆ. ಜೂನ್ ತಿಂಗಳ ಅಂತ್ಯಕ್ಕೆ ಬಂದರೂ ನೀರಾವರಿ ಇಲಾಖೆ ಈ ನಾಲೆಗಳ ಮುಖಾಂತರ ನೀರು ಹರಿಸಿ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಕ್ರಮ ವಹಿಸಿಲ್ಲ ಎಂದು ಮುಖಂಡ ಎಂ.ವಿ.ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳ ಸಂರಕ್ಷಣೆಗೆ ನೀರು ಹರಿಸುವ ನೀರಾವರಿ ಇಲಾಖೆ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಬೆಳೆ ರಕ್ಷಣೆಗೆ ಮುಂದಾಗದೆ ಮಲತಾಯಿ ಧೋರಣೆ ಪ್ರದರ್ಶಿಸಿದೆ. ಹೇಮಾವತಿ ಬಯಲಿನ ರೈತರು ರೈತರಲ್ಲವೆ?. ಇವರಿಂದ ನೀರಿನ ತೆರಿಗೆ ಮತ್ತು ಕಂದಾಯ ವಸೂಲಾತಿ ಮಾಡುತ್ತಿಲ್ಲವೆ? ಎಂದು ಪ್ರಶ್ನಿಸಿದ ರಾಜೇಗೌಡ, ಹೇಮಾವತಿ ನದಿಗೆ ತಕ್ಷಣವೇ ಕನಿಷ್ಠ 1 ಸಾವಿರ ಕೂಸೆಕ್ ನೀರುಹರಿಸಿ ರೈತರ ಬೆಳೆ ರಕ್ಷಣೆಗೆ ಮುಂದಾಗಬೇಕು. ಮೂರು ದಿನಗಳಲ್ಲಿ ನೀರಾವರಿ ಇಲಾಖೆ ನೀರು ಹರಿಸುವ ನಿರ್ಧಾರ ಪ್ರಕಟಿಸದಿದ್ದರೆ ನೀರು ಬಿಡುವವರೆಗೂ ರೈತಸಂಘ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಇ ಬಾಲಕೃಷ್ಣ ಅವರು, ಈ ಕುರಿತು ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದು, ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನವಾಗುವವರೆಗೂ ನಾಲೆಗಳಲ್ಲಿ ನೀರು ಹರಿಸಲು ಸಾಧ್ಯವಿಲ್ಲ. ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರಸವೆ ನೀಡಿದರು.
ತಾಲೂಕಿನ ಹೊಸಹೊಳಲು ಕೆರೆ ಕಾಲುವೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಎಇಇ ಗುರುಪ್ರಸಾದ್ ತಾಲೂಕಿನ ಮತ್ತೀಕೆರೆ ಗ್ರಾಮದ ಸಿದ್ದೇಗೌಡ ಮತ್ತು ಜಯಂತಿ ಎನ್ನುವ ರೈತದಂಪತಿಯಿಂದ 1.2 ಲಕ್ಷ ರೂ.ಲಂಚ ಪಡೆದು ರೈತರನ್ನು ವಂಚಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಇಂಜಿನಿಯರ್ ಬಾಲಕೃಷ್ಣ ಅವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ರೈತರು ಲಿಖಿತ ದೂರು ನೀಡಿದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *