ಅಭಿವೃದ್ಧಿ ಕೆಲಸಗಳಲ್ಲಿ ತಾರತಮ್ಯ ಎಸಗದಿರಿ

ಕೆ.ಆರ್.ನಗರ: ಜನಮತ ಪಡೆದು ಆಯ್ಕೆಯಾಗಿರುವ ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸಗಳಲ್ಲಿ ತಾರತಮ್ಯ ಎಸಗದೆ ನಿಷ್ಪಕ್ಷಪಾತವಾಗಿ ಸೇವೆ ಮಾಡಬೇಕು ಎಂದು ಹಾಲುಮತ ಮಹಾಸಭಾದ ನಗರಾಧ್ಯಕ್ಷ ನವೀನ್‌ಹೇಳಿದರು.

ಪಟ್ಟಣದ ಶ್ರೀ ಕಾಗಿನೆಲೆ ಕನಕ ಗುರುಪೀಠದಲ್ಲಿ ಹಾಲುಮತ ಮಹಾಸಭಾದಿಂದ ಆಯೋಜಿಸಿದ್ದ ಹಾಲುಮತ ಸಮುದಾಯದ ನಾಲ್ವರು ಪುರಸಭಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷದ ಪರವಾಗಿ ಕೆಲಸ ನಿರ್ವಹಿಸಬೇಕು. ಚುನಾಯಿತರಾದ ನಂತರ ಎಲ್ಲ ಮತದಾರರನ್ನು ಸಮಾನ ದೃಷ್ಟಿಯಿಂದ ಕಾಣುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಮತದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಚುನಾಯಿಸಿರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವ ಜತೆಗೆ ಅವರ ಬೇಡಿಕೆಗಳ ಈಡೇರಿಕೆಗೆ ಧ್ವನಿಯಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಸಿಕ್ಕಂತಾಗುತ್ತದೆ. ಅದನ್ನು ಬಿಟ್ಟು ಜಾತಿ, ಧರ್ಮ ಹಾಗೂ ಪಕ್ಷಗಳನ್ನು ನೋಡಿ ಕೆಲಸ ಮಾಡಲು ಹೊರಟರೆ ಆ ಸ್ಥಾನಕ್ಕೆ ಚ್ಯುತಿ ತಂದಂತಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಾಲುಮತ ಸಮುದಾಯದ ಕೋಳಿಪ್ರಕಾಶ್, ನಟರಾಜ್, ಪಲ್ಲವಿ ಆನಂದ ಹಾಗೂ ಅಶ್ವಿನಿ ಪುಟ್ಟರಾಜು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಹಾಲುಮತಾ ಮಹಾಸಭಾದ ಜಿಲ್ಲಾ ಸಂಚಾಲಕ ಹೇಮಂತ್, ತಾಲೂಕು ಅಧ್ಯಕ್ಷ ಎಚ್.ಕೆ.ಹರೀಶ್, ಸಂಚಾಲಕ ಆರ್.ಆರ್.ಗೌಡ, ಪುಟ್ಟರಾಜು, ಸೂರ್ಯಪುತ್ರ ಸೇವಾ ಆಡಳಿತ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ, ಮಲ್ಲಿಕಾರ್ಜುನ, ಶ್ರೀಧರ ಹಾಜರಿದ್ದರು.

Leave a Reply

Your email address will not be published. Required fields are marked *