ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಪ್ರೋತ್ಸಾಹ ಮುಖ್ಯ

ಕೆ.ಆರ್.ನಗರ: ಶಿಕ್ಷಣ ಇಲಾಖೆ ಜತೆ ಸ್ಥಳೀಯರು ಕೈಜೋಡಿಸಿದರೆ ಶಾಲೆಗಳ ಶೈಕ್ಷಣಿಕ ಪರಿಸರ ಮತ್ತು ಪ್ರಗತಿ ಉತ್ತಮವಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು ಹೇಳಿದರು.

ಪಟ್ಟಣದ ಆದಿಶಕ್ತಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಫಾಯಿ ಕರ್ಮಚಾರಿ ಯುವಕರ ಅಭಿವೃದ್ಧಿ ಸೇವಾ ಸಂಘದಿಂದ ನೀಡಲಾದ ನೋಟ್‌ಬುಕ್ ಸೇರಿದಂತೆ ವಿವಿಧ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಾಲಕರು ಮತ್ತು ಸಂಘ ಸಂಸ್ಥೆಗಳ ಪ್ರೋತ್ಸಾಹ ಮುಖ್ಯ ಎಂದರು.

ಶಾಲಾ ಮಕ್ಕಳಿಗೆ ಇಲಾಖೆ ವತಿಯಿಂದ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ನಿಗದಿತ ಸಮಯಕ್ಕೆ ಕೊಡಿಸಲು ಶ್ರಮಿಸಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಈ ಬಡಾವಣೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಮಾತನಾಡಿ, ಶಾಲೆಗಳಲ್ಲಿ ಕಲಿಯುತ್ತಿರುವ ಪೌರ ಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸಲು ನಮ್ಮ ಇಲಾಖೆಯಿಂದ 7 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪುರಸಭಾ ಮುಖ್ಯಾಧಿಕಾರಿ ಕೆ.ಶಿವಣ್ಣ, ಬಿಆರ್‌ಸಿ ರುದ್ರಪ್ಪ ಮಾತನಾಡಿದರು. ಪುರಸಭಾ ಆರೋಗ್ಯ ನಿರೀಕ್ಷಕ ರಮೇಶ್, ಡಾ.ಬಿ.ಆರ್.ಅಂಬೇಡ್ಕರ್ ಸಫಾಯಿ ಕರ್ಮಚಾರಿ ಯುವಕರ ಅಭಿವೃದ್ಧಿ ಸೇವಾ ಸಂಘದ ಉಪಾಧ್ಯಕ್ಷ ರಮೇಶ್, ಸಹಕಾರ್ಯದರ್ಶಿ ರಘು, ಖಜಾಂಚಿ ಮಹದೇವ್, ನಿರ್ದೇಶಕರಾದ ಎಂ.ಸುರೇಶ್, ಗಣೇಶ್, ಗೌರವಾಧ್ಯಕ್ಷ ರಾಮು, ಮುಖಂಡರಾದ ಮುರುಗೇಶ್, ಕೆ.ಆರ್.ಮಾಗಳಿ, ಮುಖ್ಯ ಶಿಕ್ಷಕಿ ಜಯಲಕ್ಷ್ಮೀ, ಸಹಶಿಕ್ಷಕಿ ಮಂಜುಳಾ ಹಾಜರಿದ್ದರು.

Leave a Reply

Your email address will not be published. Required fields are marked *