ಸಮಗ್ರ ಬೇಸಾಯ ಪದ್ಧತಿ ಅನುಸರಿಸಿ

ಕೆ.ಆರ್.ನಗರ: ಪ್ರತಿಯೊಬ್ಬ ರೈತರು ಕೃಷಿಯಲ್ಲಿ ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾ ಕೀರ್ತಿ ಸಲಹೆ ನೀಡಿದರು.

ತಾಲೂಕಿನ ಚುಂಚನಕಟ್ಟೆ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೇಸಾಯದಲ್ಲಿ ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಗೊಬ್ಬರ ಬಳಸಿ ಲಾಭದಾಯಕ ಬೆಳೆೆ ಬೆಳೆಯುವಂತೆ ಕಿವಿ ಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಹೆಚ್ಚಿನ ಇಳುವರಿ ಆಸೆಗೆ ಬಿದ್ದು ಅತಿಯಾಗಿ ರಸಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಮತ್ತು ಉತ್ಪಾದನೆ ಸಾಮರ್ಥ್ಯ ಕಡಿಮೆಯಾಗುತ್ತಿದ್ದು, ಆಹಾರ ವಿಷಮಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಬೆಳೆ ಬೆಳೆಯುವ ಮುನ್ನ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಸಲಹೆ-ಸೂಚನೆ ಪಡೆದುಕೊಂಡರೆ ಬೆಳೆಗಳಿಗೆ ರೋಗರುಜಿನ ಹರಡುವುದು ಮತ್ತು ಆರ್ಥಿಕ ನಷ್ಟ ಅನುಭವಿಸುವುದು ತಪ್ಪುತ್ತದೆ. ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಹತ್ತು ಹಲವು ಹೊಸ ಕಾಯಿಲೆಗಳಿಗೆ ಮೂಲ ಕಾರಣ ಆಹಾರವಾಗುತ್ತಿದ್ದು, ಇದನ್ನು ತಪ್ಪಿಸಿ ಜನತೆಯ ಆರೋಗ್ಯ ಕಾಪಾಡುವ ದೃಷ್ಟಿಯಿಂದ ರೈತರು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು ಎಂದರು.

ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗರಾಜನ್ ಮಾತನಾಡಿ, ಕೃಷಿ ಇಲಾಖೆ ಸೇರಿದಂತೆ ರೈತರ ಅನುಕೂಲಕ್ಕಾಗಿ ವಿವಿಧ ಇಲಾಖೆಗಳಲ್ಲಿ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅರಿವು ಮೂಡಿಸಲು ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೃಷಿ ಭೂಮಿ ಹೊಂದಿರುವ ಪ್ರತಿ ರೈತರ ಕುಟುಂಬಕ್ಕೆ 3 ಸಮಾನ ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂ.ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಜೂ.28 ಅಂತಿಮ ದಿನವಾಗಿದೆ. ರೈತರು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ ಎಂದು ಮನವಿ ಮಾಡಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಸನ್ನದಿವಾಣ್, ತೋಟಗಾರಿಕೆ ಇಲಾಖೆಯ ಬಸವರಾಜು, ಮೀನುಗಾರಿಕೆ ಇಲಾಖೆಯ ಕ್ಷೇತ್ರಪಾಲಕ ಚಂದ್ರಶೇಖರ್, ರೇಷ್ಮೆ ಇಲಾಖೆಯ ಶಶಿಧರ್, ಕೃಷಿ ಅಧಿಕಾರಿಗಳಾದ ಪ್ರವೀಣ್, ವೆಂಕಟೇಶ್, ಬುಜಂಗಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಅನಿತಾ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರ್, ಎಪಿಎಂಸಿ ಮಾಜಿ ಸದಸ್ಯ ಕೆ.ಮಹದೇವ್, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವೀಂದ್ರ, ಪ್ರಗತಿಪರ ರೈತರಾದ ಬೆಣಗನಹಳ್ಳಿ ಪ್ರಸನ್ನ, ಗೋಪಾಲ್ ಗೌಡ ಸೇರಿಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *