ಚಿಕ್ಕಮಗಳೂರಿನ ಜನರ ಭಾವನೆ ಕೆರಳಿಸುತ್ತಿದೆ ಬಿಜೆಪಿ

ಎನ್.ಆರ್.ಪುರ: ಬಿಜೆಪಿ ಮುಖಂಡರು ದೇಶದ ಜನರ ಭಾವನೆಗಳನ್ನು ಕೆರಳಿಸಿ, ಪ್ರಚೋದನಾಕಾರಿ ಪ್ರಚಾರ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ರೋಡ್ ಶೋ ನಡೆಸಿ ಮಾತನಾಡಿ, ದೇಶದ ಪ್ರಜಾಪ್ರಭುತ್ವ, ಸಂವಿಧಾನದಡಿ ಎಲ್ಲ ವ್ಯವಸ್ಥೆಗಳನೂ ಸುಸಜ್ಜಿತಗೊಳಿಸಿದ್ದು ಕಾಂಗ್ರೆಸ್. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಕಿತ್ತೊಗೆಯಲು ಈ ಬಾರಿ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಕಸ್ತೂರಿ ರಂಗನ್ ವರದಿ ಜಾರಿಯಾಗುವ ಸ್ಥಿತಿ ನಿರ್ವಣವಾದಾಗ ಕೇಂದ್ರ ಸರ್ಕಾರದ ಮೇಲೆ ವರದಿ ಜಾರಿ ಮಾಡದಂತೆ ಒತ್ತಡ ಹೇರಲಿಲ್ಲ ಎಂದು ದೂರಿದರು.

ಜಿಪಂ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಜಿಎಸ್​ಟಿಯಿಂದಾಗಿ ಸಾಮಾನ್ಯರಿಗೆ ಆರ್ಥಿಕ ಹೊರೆ ಬಿದ್ದಿದೆ. ಗೊಬ್ಬರದ ಬೆಲೆ ಗಗನಕ್ಕೇರಿದೆ. ರಬ್ಬರ್, ಕಾಳುಮೆಣಸು ಬೆಲೆ ಕುಸಿದು ಬೆಳೆಗಾರರು ಕಂಗಾಲಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ವಿರುದ್ಧವಾದ ಯೋಜನೆಗಳನ್ನು ಮಲೆನಾಡು ಭಾಗದಲ್ಲಿ ಜಾರಿಗೊಳಿಸುವ ಮೂಲಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಪಾದಿಸಿದರು.