ಮೀಸಲಾತಿ ಯಥಾಸ್ಥಿತಿ

>

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಮೂಲಕ ನಡೆಯುವ ನೇಮಕಾತಿಗಳಲ್ಲಿ ಮೀಸಲಾತಿ ಕುರಿತ ಗೊಂದಲಕ್ಕೆ ತೆರೆ ಎಳೆದಿರುವ ಸರ್ಕಾರ, ಹಳೇ ನಿಯಮವನ್ನೇ ಮುಂದುವರಿಸಲು ನಿರ್ಧರಿಸಿದೆ. ಇದರಿಂದಾಗಿ ಫಲಾನುಭವಿಗಳು ಕೆಪಿಎಸ್​ಸಿ ನೇಮಕಾತಿಯ ಯಾವುದೇ ಹಂತದಲ್ಲಿ ಸಾಮಾನ್ಯ ವರ್ಗ ಅಥವಾ ಮೀಸಲು ವರ್ಗದಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದೆ.

ಸಿಎಂ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ‘ಕೆಪಿಎಸ್​ಸಿ ನೇಮಕಾತಿ ಈಗಿನ ರೀತಿಯಲ್ಲೇ ಮುಂದುವರಿಯಲಿದೆ. ಮೀಸಲಾತಿ ಪಡೆಯುತ್ತಿರುವ ಸಮುದಾಯದ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಅಗತ್ಯ ನಿಯಮ ಅಥವಾ ಕಾನೂನು ಬದಲಾವಣೆಗೆ ಸಿದ್ಧ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಮೀಸಲು ಕುರಿತಂತೆ ವಿವಿಧ ನ್ಯಾಯಾಲಯಗಳು ಭಿನ್ನ ತೀರ್ಪು ನೀಡಿದ್ದು, ಯಾವ ನಿಯಮ ಅನುಸರಿಸಬೇಕು ಎಂಬ ಕೆಪಿಎಸ್​ಸಿ ಪತ್ರಕ್ಕೆ ಸರ್ಕಾರ ನ. 3ರಂದು ನೀಡಿದ್ದ ಪ್ರತಿಕ್ರಿಯೆ ಬಳಿಕ ವಿವಾದ ಸೃಷ್ಟಿಯಾಗಿತ್ತು.

ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ

ಸರ್ಕಾರದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿಗಳಲ್ಲಿಯೂ ಮೀಸಲಾತಿ ನೀತಿಯನ್ನು ಅಳವಡಿಸಿಕೊಳ್ಳಲು ಸಂಪುಟ ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ರೂಪಿಸಿದ್ದ ಕರ್ನಾಟಕ ಅನುಸೂಚಿತ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ ವಿಧೇಯಕ 2017ನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು

  • ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ 65 ಎಕರೆ ಜಾಗ
  • ಪಿಪಿಪಿ ಮಾದರಿಯಲ್ಲಿ ಹೆಚ್ಚುವರಿ 57 ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ
  • ಬಡವರಿಗೆ ಅಂಗಾಂಗ ಕಸಿ ಸಹಾಯಕ್ಕೆ 30 ಕೋಟಿ ರೂ. ನಿಗದಿ
  • 2019ನೇ ಸಾಲಿನ ರಜೆಗಳಿಗೆ ಒಪ್ಪಿಗೆ
  • ರಜೆಗಳಲ್ಲಿ ಬದಲಾವಣೆಗಾಗಿ ಸಂಪುಟ ಉಪ ಸಮಿತಿ ರಚನೆ
  • ಗಣಿ ಬಾಧಿತ ಪ್ರದೇಶದಲ್ಲಿ 10 ವರ್ಷಕ್ಕೆ ಪುನರ್ವಸತಿ ಪ್ರಸ್ತಾವನೆ ಕೇಂದ್ರಕ್ಕೆ

 

ಈಗಿನ ಪದ್ಧತಿ ಏನು?

ಕೆಪಿಎಸ್​ಸಿ ನೇಮಕಾತಿ ವೇಳೆ ಅಭ್ಯರ್ಥಿಗಳು ತಮ್ಮ ವರ್ಗ ನಮೂದಿಸಬೇಕು. ಎಸ್​ಸಿ, ಎಸ್​ಟಿ, ಒಬಿಸಿ ಸೇರಿ ವಿವಿಧ ಮೀಸಲು ವರ್ಗಗಳಿಗೆ ಶೇ. 50 ಮೀಸಲಾತಿ ನೀಡಲಾಗುತ್ತದೆ. ಪ್ರಾಥಮಿಕ ಪರೀಕ್ಷೆ ನಂತರದಲ್ಲಿ ತಮಗೆ ಹೆಚ್ಚು ಅಂಕ ದೊರೆತರೆ ಸಂದರ್ಶನದ ವೇಳೆಗೆ ಸಾಮಾನ್ಯ ವರ್ಗ ಎಂದು ಬದಲಿಸಬಹುದು.

ಮೀಸಲಾತಿ ಪರಿಣಾಮ ಏನು?

ಮೀಸಲಾತಿ ಸಮುದಾಯದ ಅಭ್ಯರ್ಥಿ ಸಾಮಾನ್ಯ ವರ್ಗದಲ್ಲಿ ಹುದ್ದೆ ಪಡೆಯುವುದರಿಂದ, ಮೂಲ ಖೋಟಾ ಅಡಿ ಇನ್ನೊಬ್ಬ ಮೀಸಲು ಅಭ್ಯರ್ಥಿ ಹುದ್ದೆ ಪಡೆಯುತ್ತಾನೆ. ಆಗ ಒಟ್ಟು ಮೀಸಲಾತಿ ಶೇ.50 ಮೀರುತ್ತದೆ. ಅರ್ಜಿ ಸಲ್ಲಿಕೆ ವೇಳೆ ಸಾಮಾನ್ಯ ಎಂದು ನಮೂದಿಸಿದ ಮೀಸಲು ವರ್ಗದ ಅಭ್ಯರ್ಥಿ ತನಗೆ ಕಡಿಮೆ ಅಂಕ ಲಭಿಸಿದರೆ ಅಂತಿಮ ಹಂತದಲ್ಲಿ ಮೀಸಲು ವರ್ಗಕ್ಕೆ ಬದಲಾಯಿಸಿಕೊಂಡು ಕೆಲಸ ಪಡೆಯಬಹುದು.

ರೋಹಟಗಿ ಅಭಿಪ್ರಾಯ

ಮೀಸಲು ಮುಂಬಡ್ತಿ ಕಾಯ್ದೆ ಜಾರಿ ಕುರಿತು ಸುಪ್ರೀಂಕೋರ್ಟ್​ನಲ್ಲಿ ರಾಜ್ಯದ ಪರ ವಕೀಲ ಮುಕುಲ್ ರೋಹಟಗಿ ಅವರಿಂದ ಅಭಿಪ್ರಾಯ ಪಡೆಯಲು ಸಂಪುಟ ಒಪ್ಪಿದೆ. ಇತ್ತೀಚೆಗೆ ವಾಟ್ಸ್​ಆಪ್ ಮೂಲಕ ರೋಹಟಗಿ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಅದನ್ನು ಅಧಿಕೃತ ದಾಖಲೆ ಎಂದು ಪರಿಗಣಿಸಲು ಆಗುವುದಿಲ್ಲ. ಕಾನೂನಾತ್ಮಕ ರೀತಿಯಲ್ಲಿ ಅಭಿಪ್ರಾಯ ಪಡೆಯಬೇಕು. ನಂತರ ಈ ಕುರಿತು ತಿರ್ವನಿಸೋಣ ಎಂದು ನಿರ್ಧಾರವಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಈ ಪದ್ಧತಿಯ ಸಮಸ್ಯೆಯೇನು?

ಮೀಸಲು ವರ್ಗದ ಅಭ್ಯರ್ಥಿ ಯಾವುದೇ ಹಂತದಲ್ಲಿ ವರ್ಗವನ್ನು ಬದಲಾಯಿಸಿಕೊಳ್ಳುವುದರಿಂದ ಒಟ್ಟಾರೆ ವ್ಯವಸ್ಥೆಯಲ್ಲಿ ಅವ್ಯವಸ್ಥೆಯಾಗುತ್ತದೆ ಎಂಬುದು ಕೆಪಿಎಸ್​ಸಿ ಅಧಿಕಾರಿಗಳ ವಾದ. ಸಾಮಾನ್ಯ ವರ್ಗಕ್ಕೆ ಒಟ್ಟಾರೆ ಶೇ.50 ಮೀಸಲಿದೆ. ಇಲ್ಲಿ ಮೆರಿಟ್ ಮಾತ್ರ ಮಾನದಂಡ. ಆದರೆ ಎಸ್​ಸಿ/ಎಸ್​ಟಿ, ಒಬಿಸಿ ಸೇರಿ ಇತರೆ ಮೀಸಲು ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿಕೊಂಡರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ವಂಚಿತರಾಗುತ್ತಾರೆ ಎಂಬ ವಾದವಿದೆ.

ವಿವಾದ ಆರಂಭ…: ಕೆಪಿಎಸ್​ಸಿ ನೇಮಕಾತಿ ಕುರಿತು ಕಾಲಕಾಲಕ್ಕೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಪ್ರಕರಣಕ್ಕೆ ಅನುಗುಣವಾಗಿ ತೀರ್ಪು ನೀಡಿವೆ. 1998, 1999 ಹಾಗೂ 2004ನೇ ಬ್ಯಾಚ್​ನ ಗೆಜೆಟೆಡ್ ಪ್ರೊಬೆಷನರಿ ನೇಮಕದ ಕುರಿತು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, 2016ರ ಜೂ.21ಕ್ಕೆ ತೀರ್ಪು ನೀಡಿತ್ತು. ಈ ಸಂಬಂಧ ಕೆಪಿಎಸ್​ಸಿ ಕೂಡ 1994ರಲ್ಲಿ (ಡಿಪಿಎಆರ್ 2 ಎಸ್​ಬಿಸಿ 94) ನಿಯಮ ಮಾಡಿಕೊಂಡಿತ್ತು. ನೇಮಕದಲ್ಲಿ ಆಗಿನ ಕೆಪಿಎಸ್​ಸಿ ಅನುಸರಿಸಿದ್ದ ನೇಮಕಾತಿ ಕುರಿತು ಆಕ್ಷೇಪಿಸಿದ್ದ ನ್ಯಾಯಾಲಯ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಮೀಸಲು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದು ಅಸಾಂವಿಧಾನಿಕ. ಮೀಸಲು ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿ ಎಂದು ತಿಳಿಸಿತ್ತು. ಈ ಆದೇಶವನ್ನು 2018ರ ಏ.12ರ ಆದೇಶದಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.

ಕೇಂದ್ರ ಲೋಕಸೇವಾ ಆಯೋಗದ ರೀತಿಯಲ್ಲಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಮುಂದಾಗಿದ್ದ ಕೆಪಿಎಸ್​ಸಿ, ಇದೀಗ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಮಾನದಂಡ ಅನುಸರಿಸಬೇಕು ಎಂಬ ಸ್ಪಷ್ಟನೆ ಕೋರಿ ಅಕ್ಟೋಬರ್​ನಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಕುರಿತು ನ.3ಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಸರ್ಕಾರ, ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ತಿಳಿಸಿತ್ತು.

ಸರ್ಕಾರದ ಈ ನಿರ್ಧಾರದಿಂದ ಎಸ್​ಸಿ/ಎಸ್​ಟಿ ಹಾಗೂ ಹಿಂದುಳಿದ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಹುದ್ದೆ ಪಡೆಯುವಲ್ಲಿ ವಂಚಿತರಾಗುತ್ತಾರೆ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಚಿವರಾದ ಪುಟ್ಟರಂಗಶೆಟ್ಟಿ, ಪ್ರಿಯಾಂಕ್ ಖರ್ಗೆ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದ್ದರು.

ಕಾಂಗ್ರೆಸ್ ನಾಯಕರ ಒತ್ತಡ

ಪ್ರತ್ಯೇಕ ಮೀಸಲು ಪಟ್ಟಿ ಸಿದ್ಧಪಡಿಸಲು ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ನೀಡಿದ್ದ ಸೂಚನೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸುಪ್ರೀಂಕೋರ್ಟ್ ನೀಡಿದ್ದು 1998, 1999 ಹಾಗೂ 2004ರ ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಅನ್ವಯಿಸಿದ್ದು. ಅದನ್ನು ಸರ್ಕಾರ ಅನುಸರಿಸಲು ಮುಂದಾಗಬಾರದು. ಈ ಪ್ರಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಎಷ್ಟೇ ಮೆರಿಟ್ ಗಳಿಸಿದರೂ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸುವುದಿಲ್ಲ. ಆಯಾ ಮೀಸಲಾತಿ ವರ್ಗಗಳಲ್ಲೆ ಅವರನ್ನು ಪರಿಗಣಿಸುವಂತಾಗಿದೆ. ಇದು ಆ ವರ್ಗಗಳ ಅಭ್ಯರ್ಥಿಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಕ್ರಮ’ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದರು.

ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಪುಟ್ಟರಂಗಶೆಟ್ಟಿ ಸರ್ಕಾರಕ್ಕೆ ನಾಲ್ಕು ಪುಟದ ಪತ್ರ ಬರೆದು, ರಾಜ್ಯದಲ್ಲಿ ಸದ್ಯ ನೇರನೇಮಕಾತಿಯಲ್ಲಿ ಮೀಸಲು ಪಡೆಯಲು ಅರ್ಹ ಸಮುದಾಯಗಳ ಸಂಖ್ಯೆ ಶೇ.93ರಷ್ಟಿದೆ. ನ್ಯಾಯಾಲಯ ತೀರ್ಪನ್ನು ಅನ್ವಯಿಸುತ್ತಿರುವ ಕೆಪಿಎಸ್​ಸಿ, ಈ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸುತ್ತಿದೆ. ಇದರಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದಿದ್ದರು.