ಕೆಪಿಎಸ್​ಸಿ ಪಟ್ಟಿಗಾಗಿ ಪಟ್ಟು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ವು ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸಿದರು.

ಮಂಗಳವಾರ ಬೆಳಗ್ಗೆ ಕೆಪಿಎಸ್​ಸಿ ಕಚೇರಿ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿದ ಕೆಪಿಎಸ್​ಸಿ ಉದ್ಯೋಗಾಕಾಂಕ್ಷಿಗಳು, ನೇಮಕಾತಿ ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಇಲಾಖೆಯು 2017ರಲ್ಲಿ ಅಧಿಸೂಚನೆ ಹೊರಡಿಸಿತ್ತು. 2017 ಡಿಸೆಂಬರ್​ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ನೇಮಕಾತಿ ಪ್ರಕ್ರಿಯೆ ಮುಗಿದು ಕೆಲ ತಿಂಗಳು ಕಳೆದರೂ ಇದಕ್ಕೆ ಸಂಬಂಧಿಸಿದ ಕೆಪಿಎಸ್​ಸಿಯ ಅಧಿಕಾರಿಗಳು ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಲಿಲ್ಲ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಕೆಪಿಎಸ್​ಸಿ ನೇಮಕಾತಿ ಪ್ರಕ್ರಿಯೆಗೆ ವಯೋಮಿತಿ ನಿಗದಿಪಡಿಸಲಾಗಿದ್ದು, ಅಧಿಸೂಚನೆ ಹೊರಡಿಸಿ ಆಯ್ಕೆ ಪ್ರಕ್ರಿಯೆ ಮುಗಿಸುವುದಕ್ಕೆ 2 ವರ್ಷ ಅವಧಿ ತೆಗೆದುಕೊಂಡರೆ ವಯಸ್ಸಿನ ಸಮಸ್ಯೆ ಎದುರಾಗುತ್ತದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಇದಾದ ಬಳಿಕ ಶಾಸಕ ಸುರೇಶ್ ಕುಮಾರ್ ಕೆಪಿಎಸ್​ಸಿ ಕಚೇರಿಯೊಳಗೆ ತೆರಳಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ರ್ಚಚಿಸಿದರು. ಆದಷ್ಟು ಬೇಗ ಕೆಪಿಎಸ್​ಸಿ ನೇಮಕಾತಿ ಪಟ್ಟಿ ಪ್ರಕಟಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಶೀಘ್ರ ಪಟ್ಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಅಧಿವೇಶನದಲ್ಲೂ ಪ್ರಸ್ತಾಪಿಸುವೆ

ಅಬಕಾರಿ ಗಾರ್ಡ್ಸ್, ಬೆರಳಚ್ಚುಗಾರರು, ಆರೋಗ್ಯ ನಿರೀಕ್ಷಕರು ಮತ್ತು ತಾಂತ್ರಿಕೇತರ ಹುದ್ದೆಗಳ ಪಟ್ಟಿಯನ್ನು 1 ವಾರ ಅಥವಾ 15 ದಿನದೊಳಗೆ ಪ್ರಕಟಿಸಲು ಒಪ್ಪಿದ್ದಾರೆ. ಡಿ.10ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಹೇಳಿದಂತೆ ಪಟ್ಟಿ ಬಿಡುಗಡೆ ಮಾಡದಿದ್ದರೆ ಡಿ.26ರಂದು ಮತ್ತೆ ಆಯೋಗಕ್ಕೆ ಬಂದು ವಿಚಾರಿಸುವುದಾಗಿ ಶಾಸಕ ಸುರೇಶ್ ಕುಮಾರ್ ತಿಳಿಸಿದರು.


ಅತಿಥಿ ಉಪನ್ಯಾಸಕರಿಗೆ – 25 ಸಾವಿರ ರೂ. ವೇತನ

ಬೆಂಗಳೂರು: ರಾಜ್ಯ ಪದವಿ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಅತಿಥಿ ಉಪನ್ಯಾಸಕರಿಗೆ ಯುಜಿಸಿ ವೇತನ ಮತ್ತು ಸೇವಾ ಭದ್ರತೆ ಒದಗಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕುಂದು-ಕೊರತೆಗಳು ಮತ್ತು ಇಲಾಖೆಯ ಆಡಳಿತಾತ್ಮಕ ವಿಷಯಗಳ ಬಗ್ಗೆ ರ್ಚಚಿಸಲು ಉನ್ನತ ಶಿಕ್ಷಣ ಪರಿಷತ್​ನಲ್ಲಿ ಮಂಗಳವಾರ ಕರೆದಿದ್ದ ವಿಧಾನ ಪರಿಷತ್ ಸದಸ್ಯರೊಂದಿಗಿನ ಸಭೆಯಲ್ಲಿ ಈ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದು, ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ 25 ಸಾವಿರ ರೂ. ನೀಡುತ್ತಿದೆ. ಉಳಿದ ವಿವಿಗಳು 11 ರಿಂದ 14 ಸಾವಿರ ರೂ. ನೀಡುತ್ತಿವೆ. ಸೇವಾ ಭದ್ರತೆ ಸಹ ಇಲ್ಲ ಎಂದು ಮೇಲ್ಮನೆ ಸದಸ್ಯರು ಪ್ರಸ್ತಾಪಿಸಿದರು. ಸಚಿವರು ಪ್ರತಿಕ್ರಿಯಿಸಿ, ಸೇವಾ ಹಿರಿತನ ಪರಿಗಣನೆ, ಕನಿಷ್ಠ 25 ಸಾವಿರ ರೂ. ವೇತನ ನೀಡುವುದರ ಬಗ್ಗೆ ಇಲಾಖೆಯಿಂದ ಪ್ರಸ್ತಾವನೆ ಪಡೆದು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ.