ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಪಾವತಿಸಲು 200 ಕೋಟಿ ರೂ., ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಯೋಜನೆಯಡಿ ಕಳೆದ 2 ವರ್ಷಗಳ ವಿದ್ಯುತ್ ಖರೀದಿ ಬಾಕಿ ಮೊತ್ತವನ್ನು ಎಸ್ಕಾಂಗಳಿಗೆ 4 ಸಾವಿರ ಕೋಟಿ ರೂ., ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ವೆಚ್ಚ 43 ಕೋಟಿ ರೂ. ಸೇರಿದಂತೆ 2024-25ನೇ ಸಾಲಿಗೆ 13,823.47 ಕೋಟಿ ರೂ.ಗಳ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆಯಾಗಿದೆ.
ಈ ಪೈಕಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 13,751.49 ಕೋಟಿ ರೂ. ವೆಚ್ಚವಾಗಲಿದ್ದು, 71.98 ಕೋಟಿ ರೂ. ಮಾತ್ರ ವೆಚ್ಚವಾಗಿರಲಿದೆ. ಹಾಲು ಉತ್ಪಾದಕರಿಗೆ ಉತ್ತೇಜನ ಯೋಜನೆಯಡಿ ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಪಾವತಿಸಲು 165 ಕೋಟಿ ರೂ., ಪರಿಶಿಷ್ಟ ಜಾತಿ ಉಪಯೋಜನೆಯಡಿ 15 ಕೋಟಿ ರೂ. ಹಾಗೂ ಗಿರಿಜನ ಉಪಯೋಜನೆಯಡಿ 20 ಕೋಟಿ ರೂ. ಸೇರಿ ಒಟ್ಟಾರೆ ಹಾಲು ಉತ್ಪಾದಕರ ಪ್ರೋತ್ಸಾಹ ಧನ ಪಾವತಿಸಲು 200 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದ ಸಾಮಾನ್ಯ ವೆಚ್ಚಕ್ಕೆ 2 ಕೋಟಿ ರೂ., ಅಧ್ಯಕ್ಷರು, ಸದಸ್ಯರ ವೇತನಕ್ಕೆ 27 ಲಕ್ಷ ರೂ., ರಹಸ್ಯ ಸೇವಾ ವೆಚ್ಚಕ್ಕೆ 20 ಕೋಟಿ ರೂ. ಹಾಗೂ ಪರೀಕ್ಷಾ ವೆಚ್ಚಕ್ಕೆ 43 ಕೋಟಿ ರೂ. ಸೇರಿ ಕೆಪಿಎಸ್‌ಸಿಗೆ 65.27 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ.
ರಾಜ್ಯಪಾಲರು, ಸಿಎಂ ಹೆಲಿಕಾಪ್ಟರ್ ಪ್ರವಾಸ ವೆಚ್ಚ ಭರಿಸಲು 2 ಕೋಟಿ ರೂ., ಉಪಲೋಕಾಯುಕ್ತ-1 ವಾಹನ ಖರೀದಿಗೆ 29.75 ಲಕ್ಷ ರೂ., ರಾಜ್ಯಪಾಲರ ಕಚೇರಿಗೆ ವಾಹನ ಖರೀದಿಗೆ 10 ಲಕ್ಷ ರೂ., 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ 5 ಕೊಟಿ ರೂ., ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧೀನದಲ್ಲಿ ಮಾಧ್ಯಮ ಕೋಶ ಸ್ಥಾಪನೆಗೆ 15 ಲಕ್ಷ ರೂ., ಜಾಹೀರಾತು ವೆಚ್ಚಗಳ ಬಾಕಿ ಪಾವತಿಗೆ 87 ಕೋಟಿ ರೂ., ಗೃಹಲಕ್ಷ್ಮೀ ಪ್ರಚಾರ ಕಾರ್ಯಕ್ಕೆ 18.55 ಕೋಟಿ ರೂ., ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಇಂದಿರಾ ಕ್ಯಾಂಟೀನ್ ಆಹಾರ ಸರಬರಾಜಿನ ಬಾಕಿ ಬಿಲ್ ಪಾವತಿಸಲು 20 ಕೋಟಿ ರೂ. ಮೀಸಲಿಟ್ಟಿದೆ.
ಪೂರಕ ಅಂದಾಜುಗಳ ಮುಖ್ಯಾಂಶಗಳು
*ಇವಿಎಂ, ವಿವಿಪ್ಯಾಟ್ ಯಂತ್ರಗಳ ಶೇಖರಣೆ ಗೋದಾಮು ನಿರ್ಮಾಣಕ್ಕೆ 2.50 ಕೋಟಿ ರೂ.
*ವನ್ಯಪ್ರಾಣಿಗಳಿಂದ ಉಂಟಾಗುವ ಹಾನಿ ಪ್ರಕರಣಗಳಿಗೆ ಪರಿಹಾರಕ್ಕೆ 15 ಕೋಟಿ ರೂ.
*ತುಮಕೂರಿನ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ 33 ಲಕ್ಷ ರೂ.
*ಶ್ರೀಬೀರೇಶ್ವರ ಶ್ರೀರಾಮಮಂದಿರ ಟ್ರಸ್ಟ್‌ನ ಸಮುದಾಯ ಭವನಕ್ಕೆ 55 ಲಕ್ಷ ರೂ.
*ಬೀದರ್‌ನ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ಬಾಕಿ ಬಿಲ್‌ಗೆ 25 ಕೋಟಿ ರೂ.
*ಕರ್ನಾಟಕ-50ರ ಸಂಭ್ರಮದ ಕಾರ್ಯಕ್ರಮಕ್ಕೆ 50 ಲಕ್ಷ ರೂ.,
*ವೇದಾಂತ ಭಾರತಿ ಸಂಸ್ಥೆಯಿಂದ ನಡೆದ ನಮಃ ಶಿವಾಯ ಕಾರ್ಯಕ್ರಮಕ್ಕೆ 2 ಕೋಟಿ ರೂ.,
*ಬೆಳಗಾವಿ ಅಧಿವೇಶನದ ವೆಚ್ಚ ಭರಿಸಲು 7.20 ಕೋಟಿ ರೂ.
*ಬೆಂಗಳೂರು ಮೆಟ್ರೋ ರೈಲು ಯೋಜನೆಯ ಸಾಲದ ಮರುಪಾವತಿಗೆ 500 ಕೋಟಿ ರೂ.
*ಬೆಂಗಳೂರು ಜಿಲ್ಲಾ ಹಾಪ್‌ಕಾಮ್ಸ್‌ಗೆ ದುಡಿಯುವ ಬಂಡವಾಳಕ್ಕಾಗಿ 15 ಕೋಟಿ ರೂ. ಸಾಲ,
*ಹಕ್ಕಿಜ್ವರ ನಿಯಂತ್ರಣಕ್ಕೆ ರಾಸಾಯನಿಕ ಮತ್ತು ಪರಿಕರಗಳ ಖರೀದಿಗೆ 1 ಕೋಟಿ ರೂ.
*ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮತ್ಸೃ ಮೇಳದ ಬಾಕಿ ಬಿಲ್ 4 ಕೋಟಿ ರೂ.
*ರಾಜ್ಯ ನಿವೃತ್ತಿ ಸರ್ಕಾರಿ ನೌಕರರ ನಿವೃತ್ತಿ ಸೌಲಭ್ಯಗಳ ವಿಳಂಬಕ್ಕೆ ಬಡ್ಡಿ ಪಾವತಿಗೆ 50 ಲಕ್ಷ ರೂ.
*2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ಪಾವತಿಸಲು 39.81 ಕೋಟಿ ರೂ.