ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ

ಬೆಂಗಳೂರು: ಸ್ವಾತಂತ್ರೊ್ಯೕತ್ಸವ ದಿನದಂದೇ ಆರಂಭಗೊಳ್ಳಲಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ರಿಟೇನ್ ಆಟಗಾರರನ್ನು ಹೊರತುಪಡಿಸಿ ಲಿಲಾವು ಪಟ್ಟಿಯಲ್ಲಿ ಒಟ್ಟು 241 ಆಟಗಾರರಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಸೌರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದರೂ, ರಾಜ್ಯದ ಅನುಭವಿ ಬ್ಯಾಟ್ಸ್​ಮನ್ ರಾಬಿನ್ ಉತ್ತಪ್ಪ ಈ ಬಾರಿ ಹೆಚ್ಚಿನ ಬೇಡಿಕೆ ಪಡೆಯುವ ನಿರೀಕ್ಷೆ ಇದೆ. ರಾಷ್ಟ್ರೀಯ ತಂಡದಲ್ಲಿರುವ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಹರಾಜಿಗೆ ಅಲಭ್ಯರಾಗಿದ್ದರೆ, ಯುವ ಆಟಗಾರರ ಖರೀದಿಗೆ 7 ಫ್ರಾಂಚೈಸಿಗಳ ನಡುವೆ ಹೆಚ್ಚಿನ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಬೆಳಗ್ಗೆ 10 ಗಂಟೆಗೆ ಶುರುವಾಗಲಿರುವ ಹರಾಜು ಪ್ರಕ್ರಿಯೆ ಸ್ಟಾರ್​ಸ್ಪೋರ್ಟ್ಸ್ ಚಾನಲ್​ನಲ್ಲಿ ನೇರಪ್ರಸಾರ ಕಾಣಲಿದೆ. ಪ್ರತಿ ಫ್ರಾಂಚೈಸಿ ಆಟಗಾರರ ಖರೀದಿಗೆ ಗರಿಷ್ಠ 30 ಲಕ್ಷ ರೂ. ವ್ಯಯ ಮಾಡಬಹುದಾಗಿದೆ. ರಿಟೇನ್ ಆಟಗಾರರಿಗೆ ವ್ಯಯಿಸಿರುವ ಮೊತ್ತವನ್ನು ಕಳೆದು ಬಳ್ಳಾರಿ ಟಸ್ಕರ್ಸ್ (25 ಲಕ್ಷ ರೂ.) ಸದ್ಯ ಗರಿಷ್ಠ ಹಣ ಉಳಿಸಿಕೊಂಡಿದೆ. ಪ್ರತಿ ಫ್ರಾಂಚೈಸಿ ಹರಾಜಿನಲ್ಲಿ ಕನಿಷ್ಠ 15ರಿಂದ ಗರಿಷ್ಠ 18 ಆಟಗಾರರನ್ನು ಹೊಂದಿರಬೇಕಿದೆ. ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ ಬುಲ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು ಮತ್ತು ಶಿವಮೊಗ್ಗ ಲಯನ್ಸ್ ಹರಾಜಿನಲ್ಲಿ ಕ್ರಿಕೆಟಿಗರಿಗೆ ಬಲೆ ಬೀಸಲಿರುವ ಫ್ರಾಂಚೈಸಿಗಳು.

ಬೆಳಗಾವಿ ತಂಡ ರಿಟೇನ್ ಮಾಡಿಕೊಂಡಿರುವ ಟೀಮ್ ಇಂಡಿಯಾ ಬ್ಯಾಟ್ಸ್ ಮನ್ ಮನೀಷ್ ಪಾಂಡೆ ಈ ಬಾರಿಯೂ ಕಳೆದ ಆವೃತ್ತಿಯ ಮೊತ್ತ 1.6 ಲಕ್ಷ ರೂ. ಪಡೆಯಲಿದ್ದಾರೆ. ಇನ್ನು ವಿನಯ್ಕುಮಾರ್ (ಹುಬ್ಬಳ್ಳಿ ಟೈಗರ್ಸ್) 3.6 ಲಕ್ಷ ರೂ, ಆಲ್ರೌಂಡರ್ ಸ್ಟುವರ್ಟ್ ಬಿನ್ನಿ (ಬೆಳಗಾವಿ ಪ್ಯಾಂಥರ್ಸ್) 1.1 ಲಕ್ಷ ರೂ, ಜೆ. ಸುಚಿತ್ (ಮೈಸೂರು ವಾರಿಯರ್ಸ್) 2.5 ಲಕ್ಷ ರೂ, ಅಭಿಷೇಕ್ ರೆಡ್ಡಿ (ಹುಬ್ಬಳ್ಳಿ ಟೈಗರ್ಸ್) 2 ಲಕ್ಷ ರೂಪಾಯಿಯೊಂದಿಗೆ ಈ ಬಾರಿ ರಿಟೇನ್ ಆಗಿರುವ ಪ್ರಮುಖರು.

ಮಯಾಂಕ್, ಕೆ. ಗೌತಮ್ ಖರೀದಿಗೆ ಪೈಪೋಟಿ ಅನುಮಾನ

ಕೆಪಿಎಲ್ ಸಮಯದಲ್ಲಿಯೇ ಆಗಸ್ಟ್ 17ರಿಂದ ಭಾರತ ಎ ತಂಡ ವಿಜಯವಾಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಎ ತಂಡಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿ ಆಡಲಿದ್ದರೆ, ಅದೇ ದಿನದಿಂದ ದುಲೀಪ್ ಟ್ರೋಫಿಯೊಂದಿಗೆ ದೇಶೀಯ ಕ್ರಿಕೆಟ್ ಋತುವಿಗೂ ಚಾಲನೆ ಸಿಗಲಿದೆ. ರಾಜ್ಯದ ಪ್ರಮುಖ ಯುವತಾರೆಯರಾದ ಮಯಾಂಕ್ ಅಗರ್ವಾಲ್, ಆಲ್ರೌಂಡರ್ ಕೆ ಗೌತಮ್ ಆರ್. ಸಮರ್ಥ್, ಶ್ರೇಯಸ್ ಗೋಪಾಲ್ ಮತ್ತು ವೇಗಿ ಪ್ರಸಿದ್ಧಕೃಷ್ಣ ಈ ಟೂರ್ನಿಯಲ್ಲಿ ಆಡಲಿರುವ ಭಾರತ ಎ ಅಥವಾ ದಕ್ಷಿಣ ವಲಯ ತಂಡಗಳಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಇದರಿಂದ ಅವರು ಕೆಪಿಎಲ್​ಗೆ ಅಲಭ್ಯರಾಗುವ ಭೀತಿಯೂ ಇದೆ. ಇದರಿಂದ ಹರಾಜಿನಲ್ಲಿ ಈ ಆಟಗಾರರ ಖರೀದಿಗೆ ಫ್ರಾಂಚೈಸಿಗಳ ನಡುವೆ ಹೆಚ್ಚಿನ ಪೈಪೋಟಿ ನಡೆಯದಿರುವ ಸಾಧ್ಯತೆ ಇದೆ.

ಮೈಸೂರಿಗೆ ವೆಂಕಿ ಮೆಂಟರ್

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮೈಸೂರು ವಾರಿಯರ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.

ಶುಭಾಂಗ್, ತಾಹಗೆ ಭರ್ಜರಿ ಬೇಡಿಕೆ ಸಾಧ್ಯತೆ

ಕಳೆದ ಆವೃತ್ತಿಯಲ್ಲಿ ಭರ್ಜರಿ ನಿರ್ವಹಣೆ ತೋರಿ ಗಮನ ಸೆಳೆದಿದ್ದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಶುಭಾಂಗ್ ಹೆಗ್ಡೆ, ಸ್ಪೋಟಕ ಬ್ಯಾಟ್ಸ್​ಮನ್ ಮೊಹಮದ್ ತಾಹ ಭರ್ಜರಿ ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆಯಿದೆ. ಶುಭಾಂಗ್ ಕಳೆದ ಬಾರಿ ಬೆಳಗಾವಿ ಪ್ಯಾಂಥರ್ಸ್​ಗೆ 2.7 ಲಕ್ಷ ರೂ. ಹಾಗೂ ತಾಹ ಬಿಜಾಪುರ ಬುಲ್ಸ್ ತಂಡಕ್ಕೆ 5 ಲಕ್ಷಕ್ಕೆ ಸೇಲಾಗಿದ್ದರು. ಇವರೊಂದಿಗೆ ಟಿ. ಪ್ರದೀಪ್ ಮೇಲೆ ಕೂಡ ದೊಡ್ಡ ಮೊತ್ತದ ನಿರೀಕ್ಷೆ ಇದೆ. ಅಲ್ಲದೆ ಈ ಬಾರಿ ಹೊಸ ಆಟಗಾರರು ಆಯ್ಕೆಯಾಗಬಹುದು. ಹಾಲಿ ಕೆ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿರುವ ಮಂಜುನಾಥ್ ಎಸ್​ಪಿ, ಕೆವಿ ಸಿದ್ಧಾರ್ಥ್, ನಿಯಾಜ್ ನಿಜರ್​ರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ಶಿವಮೊಗ್ಗ ಹೆಸರು ಬದಲು

ಕಳೆದ 3 ಆವೃತ್ತಿಗಳಲ್ಲಿ ‘ನಮ್ಮ ಶಿವಮೊಗ್ಗ’ ಹೆಸರಿನಲ್ಲಿ ಆಡಿದ್ದ ಮಲೆನಾಡಿನ ತಂಡ ಈ ಬಾರಿ ಹೆಸರು ಬದಲಾವಣೆ ಮಾಡಿಕೊಂಡಿದೆ. ಶಿವಮೊಗ್ಗ ಲಯನ್ಸ್ ಹೆಸರಿನಲ್ಲಿ ಈ ಬಾರಿ ತಂಡ ಕಣಕ್ಕಿಳಿಯಲಿದೆ.