2018ರ ಕೆಪಿಎಲ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ ಬಿಜಾಪುರ ಬುಲ್ಸ್

ಮೈಸೂರು: ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ್​ ಒಡೆಯರ್​ ಮೈದಾನದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್​ ಲೀಗ್​(KPL)ನ ಫೈನಲ್​ ಪಂದ್ಯದ ಹಣಾಹಣಿಯಲ್ಲಿ ಬಿಜಾಪುರ ಬುಲ್ಸ್​ ತಂಡ, ಬೆಂಗಳೂರು ಬ್ಲಾಸ್ಟರ್ಸ್​ ತಂಡದ ವಿರುದ್ಧ ಅಮೋಘ ಜಯ ದಾಖಲಿಸುವ ಮೂಲಕ 2018 ಕೆಪಿಎಲ್​ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ಎರಡು ಬಾರಿ ಕೆಪಿಎಲ್​ ಟ್ರೋಫಿಗೆ ಮುತ್ತಿಟ್ಟ ಕೀರ್ತಿಗೆ ಬಿಜಾಪುರ ಬುಲ್ಸ್​ ಪಾತ್ರವಾಗಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 101 ರನ್​ ಕಲೆಹಾಕಿತು. ತಂಡದ ಪರ ಕೆ.ಬಿ ಪವನ್​(22), ಮನೋಜ್​. ಎಸ್​. ಭಂಡಾಗೆ(18) ಹಾಗೂ ಅರ್ಷದೀಪ್​ ಸಿಂಗ್​ ಬ್ರಾರ್​(14) ರನ್​ ಗಳಿಸಿದ್ದನ್ನು ಬಿಟ್ಟರೆ, ಉಳಿದ ಯಾವೊಬ್ಬ ಆಟಗಾರನು ಎರಡಂಕಿಯನ್ನು ದಾಟಲಿಲ್ಲ. ತಂಡದ ನಾಯಕನಾಗಿ ಜವಬ್ದಾರಿಯುತ ಆಟವಾಡಬೇಕಿದ್ದ ರಾಬಿನ್​ ಉತ್ತಪ್ಪ ಕೇವಲ 9 ರನ್​ ಗಳಿಸಿ ನಿರಾಶೆ ಮೂಡಿಸಿದರು.

ಬಿಜಾಪುರ ಬುಲ್ಸ್​ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಕೆ.ಪಿ. ಅಪ್ಪಣ್ಣ ಪ್ರಮುಖ ಮೂರು ವಿಕೆಟ್​ ಕಬಳಿಸಿದರು. ಉಳಿದಂತೆ ಭಾವೇಶ್​ ಗುಲೇಚ ಹಾಗೂ ನವೀನ್​ ಎಂ.ಜಿ ತಲಾ ಎರಡು ವಿಕೆಟ್​ ಪಡೆದರೆ, ಕೆ.ಸಿ ಕರಿಯಪ್ಪ ಒಂದು ವಿಕೆಟ್​ ಪಡೆದರು.

ಬೆಂಗಳೂರು ಬ್ಲಾಸ್ಟರ್ಸ್​ ನೀಡಿದ 102ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಬಿಜಾಪುರ ಬುಲ್ಸ್​ 13.5 ಓವರ್​ಗಳಲ್ಲೇ 3 ವಿಕೆಟ್​ ನಷ್ಟಕ್ಕೆ 106 ರನ್​ ಗಳಿಸುವ ಮೂಲಕ ಸುಲಭ ಜಯ ದಾಖಲಿಸಿತು. ತಂಡದ ಪರ ನವೀನ್​ ಎಂ.ಜಿ (43), ಭರತ್​ ಚಿಪ್ಲಿ(19) ಹಾಗೂ ಮಿರ್​ ಕೌನೈನ್​ ಅಬ್ಬಾಸ್​(15*) ರನ್​ ಕಾಣಿಕೆ ನೀಡಿದರು.

ಬೆಂಗಳೂರು ಬ್ಲಾಸ್ಟರ್ಸ್​ ಪರ ವಿ. ಕೌಸಿಕ್​, ಶ್ರೇಯಸ್​ ಗೋಪಾಲ್​ ಹಾಗೂ ಮನೋಜ್​. ಎಸ್​. ಭಂಡಾಗೆ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್​)