ಇಂದಿನಿಂದ ಹುಬ್ಬಳ್ಳಿಯಲ್ಲಿ ಕೆಪಿಎಲ್ ಸಂಭ್ರಮ

| ಸಂತೋಷ ವೈದ್ಯ

ಹುಬ್ಬಳ್ಳಿ: ಮೂರು ದಿನಗಳ ಅಲ್ಪ ಅವಧಿಯ ಬೆಂಗಳೂರು ಚರಣವನ್ನು ಪೂರ್ಣಗೊಳಿಸಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಹುಬ್ಬಳ್ಳಿ ಚರಣ ಭಾನುವಾರ ಆರಂಭಗೊಳ್ಳಲಿದ್ದು, ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನ ಚುಟುಕು ಕ್ರಿಕೆಟ್ ಸಂಭ್ರಮಕ್ಕೆ ಸಜ್ಜಾಗಿದೆ.

ಮೊದಲ ದಿನ ವಿನಯ್ಕುಮಾರ್ ಸಾರಥ್ಯದ ಆತಿಥೇಯ ಹುಬ್ಬಳ್ಳಿ ಟೈಗರ್ಸ್ ಹಾಗೂ ಧಾರವಾಡದ ಪ್ರತಿಭೆ ಅನಿರುದ್ಧ ಜೋಶಿ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡಗಳು ಸೆಣಸಲಿವೆ. ಈಗಾಗಲೆ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಶಿವಮೊಗ್ಗ ತಂಡಕ್ಕೆ ಟೂರ್ನಿಯ ಮೊದಲ ಪಂದ್ಯವಿದು. ಉಭಯ ತಂಡಗಳ ಆಟಗಾರರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿದ್ದು, ಶನಿವಾರ ಗೋಕುಲ ರಸ್ತೆಯ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದರು. ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿದ ಮಳೆಯ ನಡುವೆಯೂ ಆಯೋಜಕರು ಮೈದಾನವನ್ನು ಸಿದ್ಧಗೊಳಿಸಿದ್ದಾರೆ. ಶನಿವಾರ ನಗರದಲ್ಲಿ ಮಳೆ ಬಿಡುವು ನೀಡಿದ್ದು ಕೊನೆಯ ಹಂತದ ಸಿದ್ಧತೆಗಳಿಗೆ ಅನುಕೂಲವಾಗಿದೆ.

ಹುಬ್ಬಳ್ಳಿಯಲ್ಲಿ 5ನೇ ಬಾರಿ ಕೆಪಿಎಲ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್​ಸಿಎ) ಪ್ರತಿಷ್ಠಿತ ಕೆಪಿಎಲ್ ಟೂರ್ನಿಗೆ ಹುಬ್ಬಳ್ಳಿ ಸತತ 5ನೇ ಬಾರಿ ಆತಿಥ್ಯ ವಹಿಸುತ್ತಿದೆ. ಇದರಲ್ಲಿ 3 ಬಾರಿ ಫೈನಲ್ ಪಂದ್ಯ ಇಲ್ಲಿಯೇ ನಡೆದಿರುವುದು ವಿಶೇಷ. 2016ರಲ್ಲಿ ಪೂರ್ಣ ಕೆಪಿಎಲ್​ಗೆ ಹುಬ್ಬಳ್ಳಿ ಆತಿಥ್ಯ ವಹಿಸಿತ್ತು. 2014ರಲ್ಲಿ ಮೊದಲ ಬಾರಿ ಇಲ್ಲಿ ಕೆಪಿಎಲ್ ಪಂದ್ಯ ನಡೆದಿತ್ತು.