More

    ಕೆಪಿಎಲ್ ಫಿಕ್ಸಿಂಗ್ | ಅಂತಾರಾಷ್ಟ್ರೀಯ ಬುಕ್ಕಿಗೆ ಡ್ರಿಲ್; ಕೆಐಎಗೆ ಬಂದಿಳಿದ ಬೆನ್ನಲ್ಲೇ ಜತಿನ್ ಸಿಸಿಬಿ ವಶಕ್ಕೆ

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್-ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿ ಅಡಗಿದ್ದ ಅಂತಾರಾಷ್ಟ್ರೀಯ ಬುಕ್ಕಿ ಜತಿನ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. 2018ರಲ್ಲಿ ನಡೆದಿದ್ದ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಸಂಬಂಧ ಸಿಸಿಬಿ ತನಿಖೆ ಕೈಗೊಂಡು ಜೆ.ಪಿ. ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಕೆಲವೇ ದಿನಕ್ಕೆ ರಾಜಸ್ಥಾನ ಮೂಲದ ಬುಕ್ಕಿ ಭವೇಶ್ ಬಫ್ನಾ ಮತ್ತು ದೆಹಲಿ ಮೂಲದ ಬುಕ್ಕಿ ಸನ್ಯಂ ಎಂಬಾತನನ್ನು ಬಂಧಿಸಲಾಗಿತ್ತು. ಬಂಧನ ಭೀತಿಯಿಂದ ಬುಕ್ಕಿ ಜತಿನ್, ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಬಂಧನಕ್ಕೆ ಲುಕ್​ಔಟ್ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಕಳೆದ ವಾರ ನಿರೀಕ್ಷಣಾ ಜಾಮೀನು ಪಡೆದಿದ್ದ ಜತಿನ್, 2 ದಿನಗಳ ಹಿಂದೆ ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದಾಗ ಮಾಹಿತಿ ಲಭ್ಯವಾಗಿ ವಶಕ್ಕೆ ಪಡೆಯಲಾಗಿತ್ತು.

    ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಮತ್ತೆ ನೋಟಿಸ್ ಕೊಡಲಾಗಿತ್ತು. ಅದಕ್ಕಾಗಿ ಸೋಮವಾರ ಸಹ ವಿಚಾರಣೆಗೆ ಹಾಜರಾಗಿದ್ದು, ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    3 ತಿಂಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಬುಕ್ಕಿಗಳಾದ ಭವೇಶ್ ಬಫ್ನಾ, ಜತಿನ್ ಮತ್ತು ಸನ್ಯಂ ಸ್ನೇಹಿತರು. 2016ರಿಂದ ಜವಾನ್ ಕ್ರಿಕೆಟ್ ಕ್ಲಬ್ ಪ್ರತಿನಿಧಿಸಿದ್ದ ಭವೇಶ್ ಗುಲೇಚಾ ಮತ್ತು ಬುಕ್ಕಿ ಭವೇಶ್ ಬಫ್ನಾ ಬಾಲ್ಯ ಸ್ನೇಹಿತರು. ಕೆಪಿಎಲ್​ನಲ್ಲಿ ಬಿಜಾಪುರ ಬುಲ್ಸ್ ತಂಡದಲ್ಲಿ ಭವೇಶ್ ಬಫ್ನಾ ‘ಡ್ರಮ್ಮರ್’ ಆಗಿದ್ದ. ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ ಭವೇಶ್ ಗುಲೇಚಾ ಬೌಲರ್ ಆಗಿದ್ದರು. ಮಾಹಿತಿ ತಿಳಿದ ಜತಿನ್, ಸ್ನೇಹಿತ ಭವೇಶ್ ಬಫ್ನಾ ಮೂಲದ ಬೌಲರ್ ಭವೇಶ್ ಗುಲೇಚಾನನ್ನು ಮ್ಯಾಚ್ ಫಿಕ್ಸಿಂಗ್​ಗೆ ಸೆಳೆಯಲು ಯತ್ನಿಸಿದ್ದ. 2019ರ ಜುಲೈನಲ್ಲಿ ಜೆ.ಪಿ.ನಗರದ ಡಾ.ಶಿಷಷಾ ಕೆಫೆಯಲ್ಲಿ ಬೌಲರ್ ಭವೇಶ್ ಗುಲೇಚಾರನ್ನು ಭೇಟಿ ಮಾಡಿ ಕೆಪಿಎಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ವಿಚಾರವನ್ನು ಬುಕ್ಕಿ ಬಫ್ನಾ ಪ್ರಸ್ತಾಪಿಸಿದ್ದ.

    ಇದಾದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ತಾಜ್ ಹೋಟೆಲ್​ಗೆ ಭವೇಶ್ ಗುಲೇಚಾನನ್ನು ಕರೆಸಿ ಬುಕ್ಕಿಗಳಾದ ಸನ್ಯಂ ಮತ್ತು ಜತಿನ್​ನನ್ನು ಪರಿಚಯಿಸಿದ್ದ. ಇದ್ಯಾವುದಕ್ಕೂ ಒಪ್ಪಿಕೊಳ್ಳದ ಬೌಲರ್ ಭವೇಶ್ ಗುಲೇಚಾ, 2019ರ ಸೆ.30ರಂದು ಜೆ.ಪಿ.ನಗರ ಠಾಣೆಗೆ ಮ್ಯಾಚ್ ಫಿಕ್ಸಿಂಗ್ ಸಂಬಂಧ ದೂರು ನೀಡಿದ್ದರು. ಇದರ ತನಿಖೆ ಕೈಗೊಂಡು ಸಿಸಿಬಿ ಪೊಲೀಸರು ಬಫ್ನಾ, ಸನ್ಯಂ, ಜತಿನ್​ನನ್ನು ಬಂಧಿಸಿದ್ದಾರೆ.

    ಓವರ್​ಗೆ 10 ರನ್ ಕೊಟ್ಟರೆ 2 ಲಕ್ಷ ರೂ.!: ಮ್ಯಾಚ್ ಫಿಕ್ಸಿಂಗ್​ಗೆ ಒಪ್ಪಿಕೊಳ್ಳುವಂತೆ ಗುಲೇಚಾಗೆ ಒತ್ತಾಯಿಸಿದ್ದ ಬುಕ್ಕಿಗಳು 1 ಓವರ್​ಗೆ 10 ರನ್ ಕೊಟ್ಟರೇ 2 ಲಕ್ಷ ರೂ. ಕೊಡುವುದಾಗಿ ಆಮಿಷವೊಡ್ಡಿದ್ದರು. ಅಧಿಕ ರನ್ ನೀಡಿದರೆ ದೊಡ್ಡ ಮೊತ್ತದ ಹಣ ಕೊಡುವುದಾಗಿ ಬೌಲರ್ ಭವೇಶ್ ಗುಲೇಚಾಗೆ ಭರವಸೆ ನೀಡಿದ್ದರು. ಜತೆಗೆ ಐಪಿಎಲ್​ನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದರು ಎಂದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಐಪಿಎಲ್ ಲಿಂಕ್ ಸಿಗುತ್ತಾ?: ವಿಚಾರಣೆಗೆ ಹಾಜರಾಗಿರುವ ಅಂತಾರಾಷ್ಟ್ರೀಯ ಬುಕ್ಕಿ ಜತಿನ್, ಐಪಿಎಲ್ ಕ್ರಿಕೆಟ್ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ದಂಧೆಗೆ ಸೆಳೆದಿದ್ದನಾ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜತಿನ್, ಅಂತಾರಾಷ್ಟ್ರೀಯ ಬುಕ್ಕಿಗಳು ಮತ್ತು ಆಟಗಾರರ ಸಂಪರ್ಕ ಇರುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಹನಿಟ್ರಾ್ಯಪ್ ಮೂಲಕ ಆಟಗಾರರನ್ನು ಅಕ್ರಮ ಆಟಕ್ಕೆ ಸೆಳೆದಿರುವ ಬಗ್ಗೆಯೂ ಸಿಸಿಬಿ ವಿಚಾರಣೆ ಮುಂದುವರೆಸಿದೆ.

    ಅಂತಾರಾಷ್ಟ್ರೀಯ ಬುಕ್ಕಿ ಜತಿನ್, ವಿಚಾರಣೆ ನಡೆಸಲಾಗುತ್ತಿದೆ. ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಮತ್ತು ಹನಿಟ್ರಾ್ಯಪ್ ಸಂಬಂಧ ಸಾಕಷ್ಟು ಮಾಹಿತಿ ಲಭ್ಯವಾಗಬೇಕಿದೆ.

    | ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತ (ಸಿಸಿಬಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts