ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

| ಗಣೇಶ್ ಉಕ್ಕಿನಡ್ಕ, ಬೆಂಗಳೂರು

ಕೆಪಿಎಲ್ ಟಿ20ಯ 7ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರರ ಅಲಭ್ಯತೆಯ ಸಾಧ್ಯತೆಯ ನಡುವೆಯೂ ದಾಖಲೆಯ ಮೊತ್ತದ ಬಿಡ್ಡಿಂಗ್ ಮೂಡಿಬಂದಿದ್ದು ಅನುಭವಿ ಆಟಗಾರರೇ ಗರಿಷ್ಠ ಮೊತ್ತ ಪಡೆದಿದ್ದಾರೆ. ವೇಗಿ ಅಭಿಮನ್ಯು ಮಿಥುನ್ ಕೆಪಿಎಲ್ ಇತಿಹಾಸದ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ(ಕೆಎಸ್​ಸಿಎ) ನಡೆದ ಹರಾಜು ಪ್ರಕ್ರಿಯೆಯಲ್ಲಿ 28 ವರ್ಷದ ಅಭಿಮನ್ಯು ಮಿಥುನ್​ರನ್ನು ಶಿವಮೊಗ್ಗ ಲಯನ್ಸ್ 8.30 ಲಕ್ಷ ರೂಪಾಯಿಗೆ ಖರೀದಿಸಿತು. ಅಭಿಮನ್ಯು ಕಳೆದ ಬಾರಿ 1 ಲಕ್ಷಕ್ಕೆ ಬಿಜಾಪುರ ಬುಲ್ಸ್ ಪರ ಆಡಿದ್ದರು. ಇನ್ನು ಇವರೊಂದಿಗೆ ಕಳೆದ ಆವೃತ್ತಿಗೆ ಅಲಭ್ಯರಾಗಿದ್ದ ರಾಬಿನ್ ಉತ್ತಪ್ಪ ಈ ಸಲ 7.90 ಲಕ್ಷ ರೂ.ಗೆ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಸೇರಿದರು. ಇನ್ನು ಕಳೆದ ವರ್ಷ ದಾಖಲೆ ಮೊತ್ತಕ್ಕೆ(7.20 ಲಕ್ಷ.ರೂ.)ಬಿಕರಿಯಾಗಿದ್ದ ಅನುಭವಿ ಬ್ಯಾಟ್ಸ್ ಮನ್ ಅಮಿತ್ ವರ್ಮ ಈ ಸಲ 7.60 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್ ತಂಡ ಕೂಡಿಕೊಂಡರು. ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ 5.85 ಲಕ್ಷಕ್ಕೆ ಮಾರಾಟವಾದ ನಿದೀಶ್ ಎಂ, ಬಿ ಪೂಲ್​ನಿಂದ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿಕೊಂಡರು. ಭಾರತ ಎ ತಂಡಕ್ಕೆ ನಿರಂತರವಾಗಿ ಆಯ್ಕೆಯಾಗುತ್ತಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮತ್ತು ಆರ್ ಸಮರ್ಥ್​ರನ್ನು ಯಾವುದೇ ತಂಡ ಖರೀದಿಸಲಿಲ್ಲ.

ಪ್ರದೀಪ್, ತಾಹಗೆ ಭರ್ಜರಿ ಮೊತ್ತ

ಸ್ಪೋಟಕ ಬ್ಯಾಟ್ಸ್​ಮನ್ ಮೊಹಮದ್ ತಾಹ(5 ಲಕ್ಷ) ಹುಬ್ಬಳ್ಳಿ ಸೇರಿದರೆ, ಕಳೆದ ಸಲ ಶಿವಮೊಗ್ಗ ಪರ ಆಡಿದ್ದ ಟಿ ಪ್ರದೀಪ್(6.5 ಲಕ್ಷ)ಬಳ್ಳಾರಿಗೆ ಭರ್ಜರಿ ಮೊತ್ತಕ್ಕೆ ಸೇಲಾದರು. ಹೆಚ್ಚಿನ ಫ್ರಾಂಚೈಸಿಗಳ ಗಮನ ಸೆಳೆದ ಎಂ ನಿದೇಶ್(5.85 ಲಕ್ಷ) ಬೆಳಗಾವಿ ಪ್ಯಾಂಥರ್ಸ್ ಹಾಗೂ ಜೊನಾಥನ್ ಆರ್(5.45ಲಕ್ಷ) ಕೂಡ ಶಿವಮೊಗ್ಗ ತಂಡಕ್ಕೆ ದೊಡ್ಡ ಮೊತ್ತಕ್ಕೆ ಪಾಲಾದರು. ಕೆಬಿ ಪವನ್(4.55 ಲಕ್ಷ) ಬೆಂಗಳೂರು ಬ್ಲಾಸ್ಟರ್ಸ್, ಅರ್ಜುನ್ ಹೊಯ್ಸಳ(3.10 ಲಕ್ಷ), ಶುಭಾಂಗ್ ಹೆಗ್ಡೆ(3.05 ಲಕ್ಷ) ಬೆಳಗಾವಿ ತಂಡಕ್ಕೆ ಉತ್ತಮ ಮೊತ್ತಕ್ಕೆ ಹರಾಜಾದರು.