ಮೋದಿ ಹೆಲಿಕಾಪ್ಟರ್​ನಿಂದ ಕಪ್ಪು ಬಾಕ್ಸ್​ ಸಾಗಣೆ: ತನಿಖೆಗೆ ಆಗ್ರಹಿಸಿ ಚುನಾವಣೆ ಆಯೋಗಕ್ಕೆ ಕೆಪಿಸಿಸಿ ಪತ್ರ

ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್​ನಿಂದ ಅನುಮಾನಾಸ್ಪದವಾಗಿ ಕಪ್ಪು ಬಣ್ಣದ ಬಾಕ್ಸ್​ ಸಾಗಿಸಲಾಗಿದೆ. ಇದರಲ್ಲಿ ಏನಿತ್ತು ಎಂಬುದರ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಪತ್ರ ಬರೆದಿದೆ.

ಮೋದಿ ಅವರು ಏಪ್ರಿಲ್​ 9 ರಂದು ಚಿತ್ರದುರ್ಗದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಆಗಮಿಸಿದ್ದ ಹೆಲಿಕಾಪ್ಟರ್​ನಿಂದ ಕಪ್ಪು ಬಣ್ಣದ ಬಾಕ್ಸ್​ವೊಂದನ್ನು ಇನೋವಾ ಕಾರಿಗೆ ಸಾಗಿಸಲಾಗಿತ್ತು. ಪ್ರಧಾನಿ ಭದ್ರತಾ ವಾಹನಗಳ ಭಾಗವಾಗಿಲ್ಲದ ಖಾಸಗಿ ಇನೋವಾ ಕಾರಿಗೆ ಸಾದಾ ಬಟ್ಟೆಯಲ್ಲಿದ್ದ ಕೆಲವು ವ್ಯಕ್ತಿಗಳು ಬಾಕ್ಸ್​ ಸಾಗಿಸಿದ್ದರು. ಈ ಬಾಕ್ಸ್​ ಅನ್ನು ಇನೋವಾ ಕಾರಿಗೆ ಸಾಗಿಸಿದ್ದೇಕೆ? ಇದರಲ್ಲಿ ಏನಿತ್ತು? ಅದು ಯಾರ ಕಾರು? ಬಾಕ್ಸ್​ ಹೊತ್ತ ಕಾರು ಎಲ್ಲಿಗೆ ಹೋಯಿತು? ಎಂಬ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಕೆಪಿಸಿಸಿ ತನ್ನ ಪತ್ರದಲ್ಲಿ ಆಗ್ರಹಿಸಿದೆ.

ಜತೆಗೆ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ತೆರಳಿದ್ದಾಗ ಅರುಣಾಚಲ ಪ್ರದೇಶ ಸಿಎಂ ಬೆಂಗಾವಲು ಕಾರುಗಳಲ್ಲಿ ಕೋಟ್ಯಂತರ ರೂ. ಪತ್ತೆಯಾಗಿತ್ತು. ಚುನಾವಣಾ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದರು. ಇದು ಮೋದಿ ಅವರು ತಾವು ಹೋದಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಹಣ ತಲುಪಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈಗ ಕಪ್ಪು ಬಾಕ್ಸ್​ ಸಾಗಾಟ ಸಹ ಇಂತಹುದೇ ಒಂದು ಅನುಮಾನಕ್ಕೆ ಕಾರಣವಾಗಿದೆ ಎಂದು ಕೆಪಿಸಿಸಿ ತಿಳಿಸಿದೆ.

ಭಾನುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್​ ವಕ್ತಾರ ಆನಂದ್​ ಶರ್ಮಾ ಅವರು ಘಟನೆ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)