ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ ನಿಧನ

ಶಿವಮೊಗ್ಗ: ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಕೆ.ಕರಿಯಣ್ಣ ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ಅನಾರೋಗ್ಯ ಉಂಟಾಗಿತ್ತು.

ಕರಿಯಣ್ಣ ಅವರ ತಂದೆ ಮೂಲತಃ ತುಮಕೂರಿನವರು. ಬಹಳ ಹಿಂದೆಯೇ ಶಿವಮೊಗ್ಗಕ್ಕೆ ಬಂದು ನೆಲೆ ಕಂಡುಕೊಂಡಿದ್ದರು. ಐದು ದಶಕಗಳ ಹಿಂದೆ ಕರಿಯಣ್ಣ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡು ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. ಲೆಕ್ಕಪರಿಶೋಧಕ ಇಲಾಖೆ ಗುಮಾಸ್ತರಾಗಿದ್ದ ಕರಿಯಣ್ಣ ಅವರನ್ನು ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಚ್.ಶ್ರೀನಿವಾಸ್ ಗುರುತಿಸಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ನಾಯಕನನ್ನಾಗಿ ಬೆಳೆಸಿದರು. ಕರಿಯಣ್ಣ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದ್ದರು.

ಶಿವಮೊಗ್ಗ ನಗರಸಭೆ ಸದಸ್ಯರಾಗಿ ಅಂದಿನ ಶಿವಮೊಗ್ಗ ನಗರ ಯೋಜನಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕರಿಯಣ್ಣ ಪ್ರಸ್ತುತ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದರು. ಸಹಕಾರ ಕ್ಷೇತ್ರ ಸೇರಿ ವಿವಿಧ ಸಂಘ ಸಂಸ್ಥೆಗಳಲ್ಲಿ ದಶಕಗಳ ಕಾಲ ತೊಡಗಿಸಿಕೊಂಡಿದ್ದರು. ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ರಾಜ್ಯ ಸಹಕಾರ ಮಹಾಮಂಡಲದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ರಾಜಕೀಯದ ಏಳು ಬೀಳು: ಹೊಳೆಹೊನ್ನೂರು ಮೀಸಲು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದ ಕರಿಯಣ್ಣ, ಕ್ಷೇತ್ರ ಪುನರ್​ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರವನ್ನು ರಾಜಕೀಯ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. 1985ರಿಂದ 2013ರವರೆಗೆ ಒಟ್ಟು 7 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರಿಯಣ್ಣ ಎರಡು ಬಾರಿ ಮಾತ್ರ ಜಯಗಳಿಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ ತಮ್ಮ ಪುತ್ರ ಡಾ. ಶ್ರೀನಿವಾಸ್ ಅವರಿಗೆ ಬಿ ಫಾರಂ ಕೊಡಿಸುವಲ್ಲಿ ಯಶಸ್ವಿಯಾಗಿದರೂ ಗೆಲುವು ಸಿಗಲಿಲ್ಲ. ಮಗ ವಿಧಾನಸಭೆ ಪ್ರವೇಶಿಸುವುದನ್ನು ಕಾಣಬೇಕೆಂಬ ಅವರ ಕನಸು ನನಸಾಗಲೇ ಇಲ್ಲ.

1985ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಕರಿಯಣ್ಣ, ಜನತಾಪಾರ್ಟಿಯಿಂದ ಸ್ಪರ್ಧಿಸಿದ್ದ ಬಸಣ್ಯಪ್ಪ ವಿರುದ್ಧ ಸುಮಾರು 3 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.

1989ರಲ್ಲಿ ಮೊದಲ ಬಾರಿಗೆ ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ ಕರಿಯಣ್ಣ ವಿಧಾನಸಭೆ ಪ್ರವೇಶಿಸಿದರು. ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿ ಚೂಡಾನಾಯ್ಕ ವಿರುದ್ಧ ಜಯ ಸಾಧಿಸಿದ್ದರು. 1994ರಲ್ಲಿ ಮತ್ತೊಮ್ಮೆ ಹೊಳೆಹೊನ್ನೂರು ಕ್ಷೇತ್ರದಲ್ಲಿ ಬಸವಣ್ಯಪ್ಪ ವಿರುದ್ಧ ಸೋಲು ಕಂಡರು.

1999ರ ಚುನಾವಣೆಯಲ್ಲಿ ಮತ್ತೊಮ್ಮೆ ಹೊಳೆಹೊನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಕರಿಯಣ್ಣ ಮತ್ತೆಂದೂ ಗೆಲುವಿನ ಸಿಹಿ ಕಾಣಲೇ ಇಲ್ಲ. 2004ರಲ್ಲಿ ಕ್ಷೇತ್ರ ಮರು ವಿಂಗಡಣೆಯಿಂದ ರಚನೆಯಾದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲುವು ಸಿಗಲೇ ಇಲ್ಲ.

ಶಿವಮೊಗ್ಗಕ್ಕೆ ಪಾರ್ಥಿವ ಶರೀರ: ಶುಕ್ರವಾರ ರಾತ್ರಿ ಪಾರ್ಥಿವ ಶರೀರವನ್ನು ಶಿವಮೊಗ್ಗದ ಅವರ ಸ್ವಗೃಹಕ್ಕೆ ತರಲಾಯಿತು. ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆ ಶನಿವಾರ ಹೊಳೆಹೊನ್ನೂರು ಸಮೀಪದ ಬಿ.ಬೀರನಹಳ್ಳಿಯ ಅವರ ತೋಟದಲ್ಲಿ ನಡೆಯಲಿದೆ.

ಕರಿಯಣ್ಣ ಅವರಿಗೆ ಪತ್ನಿ ವಿಜಯಮ್ಮ, ಪುತ್ರ ಡಾ. ಎಸ್.ಕೆ.ಶ್ರೀನಿವಾಸ್ ಸೇರಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರ ನಾಲ್ವರು ಮಕ್ಕಳೂ ವೈದ್ಯರು.