ಸೀಟು ಹಂಚಿಕೆ ಬಗ್ಗೆ ದೇವೇಗೌಡ-ದಿನೇಶ್​ಗುಂಡೂರಾವ್​ ಚರ್ಚೆ; ಜೆಡಿಎಸ್​ ಕೇಳಿದ ಕ್ಷೇತ್ರಗಳು ಯಾವುವು ಗೊತ್ತೇ?

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಂದೊಂದೇ ರಾಜ್ಯಗಳೂ ಮೈತ್ರಿ ಘೋಷಿಸುತ್ತಿವೆ. ತಮಿಳುನಾಡಿನಲ್ಲಿ ಎರಡು ದಿನಗಳಲ್ಲಿ ಎರಡು ಮೈತ್ರಿ ಪ್ರಕಟವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕ ಕೂಡ ಹೆಜ್ಜೆ ಇಟ್ಟಿದ್ದು, ಕಾಂಗ್ರೆಸ್​ ತನ್ನ ಮಿತ್ರ ಪಕ್ಷ ಜೆಡಿಎಸ್​ನೊಂದಿಗೆ ಮೈತ್ರಿ ಚರ್ಚೆಯನ್ನು ಗುರುವಾರ ಅಧಿಕೃತವಾಗಿ ಆರಂಭಿಸಿದೆ. ಇಂದು ದೇವೇಗೌಡರನ್ನು ಭೇಟಿಯಾದ ಕಾಂಗ್ರೆಸ್​ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹಲವು ಹೊತ್ತು ಚರ್ಚೆ ನಡೆಸಿದರು.

ಪದ್ಮನಾಭನಗರದ ದೇವೇಗೌಡರ ನಿವಾಸ ‘ಅಮೋಘ’ಕ್ಕೆ ಗುರುವಾರ ಮಧ್ಯಾಹ್ನ ತೆರಳಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಮೈತ್ರಿ, ಸೀಟು ಹಂಚಿಕೆ, ಯಾವ ಕ್ಷೇತ್ರಗಳು ಯಾರಿಗೆ ಎಂಬ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದರು. ಅದರ ಜತೆಗೆ ಹಾಲಿ ರಾಜಕೀಯ ಸನ್ನಿವೇಶಗಳ ಕುರಿತೂ ಮಾತುಕತೆ ನಡೆಸಿದರು ಎನ್ನಲಾಗಿದೆ.

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ” ದೇವೇಗೌಡರನ್ನು ಭೇಟಿ ಮಾಡುವ ಕುರಿತು ಕಾಂಗ್ರೆಸ್​ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಇನ್ನು ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಉಸ್ತುವಾರಿ ಮತ್ತು ದೇವೇಗೌಡರು ಸಭೆ ಮಾಡಲಿದ್ದಾರೆ. ಸಭೆಯ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಆದಷ್ಟು ಶೀಘ್ರ ಕ್ಷೇತ್ರ ಹಂಚಿಕೆ ಮಾತುಕತೆ ಅಂತಿಮಗೊಳಿಸಬೇಕು ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ಯಾವ ಕ್ಷೇತ್ರಗಳು ಯಾರಿಗೆ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ,” ಎಂದರು.

ಮಾತುಕತೆ ವೇಳೆ ದೇವೇಗೌಡರು ಮಂಡ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ. ಇದರ ಜತೆಗೆ ಹಳೇ ಮೈಸೂರು ಭಾಗದ ಐದು ಜಿಲ್ಲೆಗಳು ಮತ್ತು ಹಾಲಿ ಕಾಂಗ್ರೆಸ್​ ಸಂಸದರಿರುವ ಕೆಲ ಕ್ಷೇತ್ರಗಳನ್ನು ಜೆಡಿಎಸ್​ ಹೊಂದುವ ಬಗ್ಗೆ, ಅದರ ಸಾಧಕ ಬಾಧಕಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಹಾಲಿ ಕಾಂಗ್ರೆಸ್​ನ ಕ್ಷೇತ್ರಗಳಿಗಾಗಿ ಬೇಡಿಕೆ ಇಡದಂತೆ ದಿನೇಶ್​ ಮನವಿ ಮಾಡಿದರು ಎಂದೂ ತಿಳಿದು ಬಂದಿದೆ.

ಇದರ ಜತೆಗೆ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಎರಡೂ ಪಕ್ಷಗಳು ಸಮಾನವಾಗಿ ದುಡಿಯುವ ಬಗ್ಗೆ ಇಬ್ಬರಲ್ಲೂ ಸಹಮತದ ಚರ್ಚೆಗಳಾಗಿವೆ ಎನ್ನಲಾಗಿದೆ.