More

  ಇಂದು ಕೆಪಿಸಿಸಿ ಕ್ಲೈಮ್ಯಾಕ್ಸ್?

  ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ಈ ಸ್ಥಾನಕ್ಕಾಗಿ ಕೆಲವು ದಿನಗಳಿಂದ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಮತ್ತು ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆಯಾದರೂ ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ವರಿಷ್ಠರು ಶಿವಕುಮಾರ್ ಹೆಗಲಿಗೆ ಜವಾಬ್ದಾರಿಯ ನೊಗ ಏರಿಸುವ ಮನಸ್ಸು ಮಾಡಿರುವ ಸಾಧ್ಯತೆಗಳು ದಿಲ್ಲಿ ಅಂಗಳದಲ್ಲಿ ಗೋಚರಿಸಿದೆ.

  ಮಂಗಳವಾರ ಮತ್ತು ಬುಧವಾರ ದಿಲ್ಲಿಯಲ್ಲೇ ವಾಸ್ತವ್ಯ ಹೂಡಿ ಸೋನಿಯಾ, ರಾಹುಲ್ ಆದಿಯಾಗಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಎಂ.ಬಿ. ಪಾಟಿಲ್​ಗೆ ಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ತಮ್ಮ ಪ್ರಭುತ್ವ ಮುಂದುವರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಹಿರಿಯಾಳುಗಳಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ ಸೇರಿ ಅನೇಕ ಮಂದಿ ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಪ್ರಭಾವಳಿ ಕುಗ್ಗಿಸುವ ಸಲುವಾಗಿಯೇ ಶಿವಕುಮಾರ್​ಗೆ ಅಧಿಕಾರ ನೀಡಬೇಕೆಂಬ ಸ್ಪಷ್ಟ ನಿಲುವು ಹೊರಹಾಕಿರುವುದು ಡಿಕೆಶಿಗೆ ಅನುಕೂಲಕರ ಸ್ಥಿತಿ ನಿರ್ಮಾಣ ಮಾಡಿದೆ. ಮೇಲಾಗಿ, ಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಹೈಕಮಾಂಡ್ ಕೂಡ ಈ ಹಿಂದೆಯೇ ಭರವಸೆ ನೀಡಿದ್ದರಿಂದ ಡಿಕೆಶಿ ಕಷ್ಟಕಾಲದಲ್ಲೇ ಕೈ ಹಿಡಿಯಬೇಕೆಂಬ ಅಭಿಪ್ರಾಯ ಬಲಗೊಂಡಿದೆ. ಶಿವಕುಮಾರ್ ಪಕ್ಷಕ್ಕೆ ಅನೇಕ ರೀತಿಯಲ್ಲಿ ನೆರವಾಗಿದ್ದಾರೆ ಮತ್ತು ಅವರ ಪಕ್ಷನಿಷ್ಠೆಯನ್ನು ಈಗಲೂ ಗುರುತಿಸದಿದ್ದರೆ ವಿನಾಕಾರಣ ಒಕ್ಕಲಿಗ ಸಮುದಾಯದ ಆಕ್ರೋಶಕ್ಕೆ ಗುರಿಯಾಬೇಕಾದೀತು. ಅವರ ವಿರುದ್ಧ ಕೇಸುಗಳು ಏನೇ ಇದ್ದರೂ ಕಾನೂನಾತ್ಮಕವಾಗಿ ಹೋರಾಟ ಮಾಡಿದರಾಯಿತು ಎಂಬ ಗಂಭೀರ ಚರ್ಚೆ ಹೈಕಮಾಂಡ್ ವಲಯದಲ್ಲಿ ನಡೆದಿದೆ. ಡಿಕೆಶಿ ಮೇಲಿನ ಕೇಸುಗಳು ಗಂಭೀರವಾಗಿವೆ ಎಂದು ಪಕ್ಷದ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರೂ ಆರ್ಥಿಕ ಅಪರಾಧದ ಕೇಸುಗಳನ್ನು ಬಿಜೆಪಿ ನಾಯಕರೂ ಎದುರಿಸುತ್ತಿದ್ದಾರೆ ಎನ್ನುವುದು ಡಿಕೆಶಿ ಬೆಂಬಲಿಗರ ಪ್ರತಿವಾದ. ಮೇಲಾಗಿ ಸೋನಿಯಾ, ರಾಹುಲ್ ಸೇರಿ ಬಹುಮಂದಿ ಶಿವಕುಮಾರ್ ಪಕ್ಷನಿಷ್ಠೆಯನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ.

  ಇದೇ ಕಾರಣಕ್ಕೆ, ಶಿವಕುಮಾರ್ ಜೈಲಿನಲ್ಲಿದ್ದಾಗಲೂ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದ್ದರು. ಅಹ್ಮದ್ ಪಟೇಲ್ ನಾಲ್ಕೈದು ಬಾರಿ ತಿಹಾರ್​ಗೆ ಭೇಟಿ ಕೊಟ್ಟು ಶಿವಕುಮಾರ್ ಜತೆ ಮಾತನಾಡಿದ್ದರು. ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಬೇಕೆಂಬ ವಾದದ ಹಿಂದೆ ಪಟೇಲ್ ಧ್ವನಿ ದೊಡ್ಡದು ಎಂಬುದಿಲ್ಲಿ ಗಮನಾರ್ಹ. ಅಹ್ಮದ್ ಪಟೇಲ್ ರಾಜ್ಯಸಭೆ ಚುನಾವಣೆ ಗೆಲ್ಲುವ ಸಲುವಾಗಿಯೇ ಶಾಸಕರನ್ನು ರೆಸಾರ್ಟ್​ನಲ್ಲಿಟ್ಟಿದ್ದ ಡಿಕೆಶಿ, ನಂತರ ಐಟಿ, ಇಡಿ ತನಿಖೆ ಎದುರಿಸಿದ್ದಲ್ಲದೆ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು.

  ಸಿದ್ದು ನಿಯಂತ್ರಣ ತಂತ್ರ: ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ, ಬಿಬಿಎಂಪಿ ಹಾಗೂ ಈಚಿನ ಉಪ ಚುನಾವಣೆಯಲ್ಲೂ ಸಿದ್ದರಾಮಯ್ಯ ನಾಯಕತ್ವ ಸಾಧಿಸಿದ್ದೇನೆಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ಹೀಗಾಗಿ, ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಳ್ಳದ ಹಾಗೂ ಆಕ್ರಮಣಕಾರಿ ಧೋರಣೆ ಹೊಂದಿರುವ ವ್ಯಕ್ತಿಗೆ ನಾಯಕತ್ವ ನೀಡಬೇಕು. ಆರ್ಥಿಕ ಸಂಪನ್ಮೂಲದ ಕ್ರೋಡೀಕರಣವನ್ನೂ ಆದ್ಯತೆಗೆ ತೆಗೆದುಕೊಳ್ಳಬೇಕಿರುವುದರಿಂದ ಶಿವಕುಮಾರ್ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್​ನ ಒಂದು ಬಣ ಹೈಕಮಾಂಡ್​ಗೆ ವರದಿ ನೀಡಿತ್ತು. ದೋಸ್ತಿ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಾಸಕರೂ ಕಾರಣರು ಎಂಬುದು ಎಲ್ಲರಿಗೂ ಗೊತ್ತಿದೆ. ಆಗಲೂ ಸಿದ್ದರಾಮಯ್ಯ ಮೌನವಾಗಿದ್ದುಕೊಂಡು ಶಾಸಕರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಯತ್ನ ಮಾಡಿಲ್ಲ ಎಂದು ಅನೇಕರು ಹೈಕಮಾಂಡಿಗೆ ದೂರು ನೀಡಿದ್ದೂ ಇಲ್ಲಿ ಉಲ್ಲೇಖಾರ್ಹ.

  ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿಗೆ ಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಿದ್ದು ಬಣ ಪಕ್ಷ ಒಡೆಯುವ ಕೆಲಸ ಮಾಡಬಹುದಲ್ಲವೇ ಎಂಬ ಆತಂಕವೂ ವರಿಷ್ಠರಲ್ಲಿದೆ. ಹೀಗಾಗಿ, ಸಿದ್ದು ಬಣದ ಅಸಮಾಧಾನ ತಣಿಸಲು ಮೂರು ಅಥವಾ ನಾಲ್ಕು ಕಾರ್ಯಾಧ್ಯಕ್ಷರನ್ನೂ ವರಿಷ್ಠರು ನೇಮಿಸಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

  ಒಂದುವೇಳೆ ಎಂ.ಬಿ. ಪಾಟಿಲ್ ಅಧ್ಯಕ್ಷರಾಗದೆ ಇದ್ದರೆ 4 ಕಾರ್ಯಾಧ್ಯಕ್ಷರನ್ನು ನೇಮಿಸಲೇಬೇಕು ಎನ್ನುವುದು ಸಿದ್ದರಾಮಯ್ಯ ವಾದ. ನಾಲ್ವರು ಕಾರ್ಯಾಧ್ಯಕ್ಷರ ಮೂಲಕ ಪಿಸಿಸಿ ಅಧ್ಯಕ್ಷರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಪಕ್ಷಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಿದ್ದರಾಮಯ್ಯ ಮಾತಿಗೆ ಆದ್ಯತೆ ಸಿಕ್ಕಂತಾಗುತ್ತದೆ. ಆದರೆ, ಡಿಕೆಶಿ ಬೆಂಬಲಿಗ ಬಣಕ್ಕೆ ಇದು ಬೇಕಿಲ್ಲ. ಹೀಗಾಗಿಯೇ, ಕಾರ್ಯಾಧ್ಯಕ್ಷ ಅಗತ್ಯವೇ ಇಲ್ಲ. ಶಿವಕುಮಾರ್​ಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು. ಕೈ ಕಟ್ಟಿ ಹಾಕುವುದಿದ್ದರೆ ಅಧಿಕಾರ ಬೇಕಿಲ್ಲ ಎಂದೂ ಅವರ ಬೆಂಬಲಿಗ ಬಣ ಸ್ಪಷ್ಟಪಡಿಸಿದೆ. ಹಾಗಿದ್ದರೂ, ಕಾರ್ಯಾಧ್ಯಕ್ಷರನ್ನು ನೇಮಿಸಿದಲ್ಲಿ ಅವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬೇಡ ಎಂಬ ಷರತ್ತನ್ನು ಮುಂದಿಡಲಾಗಿದೆ.

  ಡಿಕೆಶಿ ಒಲವಿಗೆ ಕಾರಣ?

  ಕಷ್ಟದ ಸಂದರ್ಭದಲ್ಲಿ ಪಕ್ಷದ ನೆರವಿಗೆ ಹಲವು ಬಾರಿ ಧಾವಿಸಿದ್ದಾರೆ, ಈಗ ಅಧಿಕಾರ ನೀಡದಿದ್ದರೆ ನಡುನೀರಲ್ಲಿ ಕೈಬಿಟ್ಟೆವು ಎಂಬ ಆಕ್ರೋಶ.

  ಅಹ್ಮದ್ ಪಟೇಲ್ ಸೇರಿ ಅನೇಕರನ್ನು ರಾಜಕೀಯವಾಗಿ ಕಾಪಾಡಿರುವ ಶಿವಕುಮಾರ್, ಹೈಕಮಾಂಡ್ ಜತೆಗೆ ಆತ್ಮೀಯ ಒಡನಾಟ.

  ಗಂಭೀರ ಕೇಸು, ತನಿಖೆಗಳ ನಡುವೆಯೂ ಪಕ್ಷನಿಷ್ಠೆ ಕಾಯ್ದುಕೊಂಡದ್ದು, ಪಿಸಿಸಿ ಅಧ್ಯಕ್ಷ ಸ್ಥಾನದ ಭರವಸೆಯನ್ನು ಮೊದಲೇ ನೀಡಿದ್ದೇವೆ. ಅದನ್ನು ಉಳಿಸಿಕೊಳ್ಳಲು ಇದು ಸೂಕ್ತ ಕಾಲ ಎಂಬ ಅನಿಸಿಕೆ.

  ಕೇಸುಗಳಿದ್ದರೂ, ಈಚಿನ ದಿನಗಳಲ್ಲಿ ಡಿಕೆಶಿ ರಾಜಕೀಯ ಜನಪ್ರಿಯತೆ ಹೆಚ್ಚಿದ್ದನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿದೆ.

  ಡಿಕೆಶಿ ಬಹುತೇಕ ಜಿಲ್ಲೆಗಳಲ್ಲಿ ತಮ್ಮ ಬೆಂಬಲಿಗ ಕಾರ್ಯಪಡೆ ಹೊಂದಿದ್ದಾರೆ. ಪಕ್ಷದ ಸಮಗ್ರ ಸಂಘಟನೆಗೆ ಇವರು ನೆರವಾಗಬಲ್ಲರು.

  ಸಿದ್ದು ವಿರೋಧಿಗಳ ವಾದ

  ಎಂ.ಬಿ. ಪಾಟಿಲ್ ಅಧ್ಯಕ್ಷರಾದರೆ ಸಿದ್ದರಾಮಯ್ಯ ಪ್ರಭಾವಳಿ ಮುಂದು ವರಿಯುತ್ತದೆ, ದೋಸ್ತಿ ಸರ್ಕಾರ ಬೀಳುವುದನ್ನು ತಡೆವ ಯತ್ನ ಮಾಡಲಿಲ್ಲ.

  ಕೆಪಿಸಿಸಿ ಮೇಲೆ ನಿಯಂತ್ರಣ ಸಾಧಿಸಿದರೆ ಮತ್ತೆ ಮೂಲ-ವಲಸಿಗ ತಿಕ್ಕಾಟ ಮುಂದುವರಿಯುತ್ತದೆ

  ಚುನಾವಣೆಗಳಲ್ಲಿ ಪಕ್ಷಕ್ಕೆ ಇದೇ ವಿಚಾರ ಭಾರಿ ಡ್ಯಾಮೇಜ್ ಮಾಡುತ್ತಿದೆ

  ಉತ್ತರ ಕರ್ನಾಟಕದಲ್ಲಿ ಲಿಂಗಾಯತರನ್ನು ತೃಪ್ತಿಪಡಿಸಲು ವಿವಾದಾತೀತ ವ್ಯಕ್ತಿತ್ವದ ಈಶ್ವರ ಖಂಡ್ರೆ ಸೂಕ್ತ ಆಯ್ಕೆ

  ಎಂ.ಬಿ. ಪಾಟೀಲ್ ಪ್ರತ್ಯೇಕ ಲಿಂಗಾಯತ ಧರ್ಮದ ಪ್ರತಿಪಾದನೆಯಿಂದಾಗಿ ವೀರಶೈವ ಲಿಂಗಾಯತರ ಮುನಿಸನ್ನು ಈಗಲೂ ಎದುರಿಸುತ್ತಿದ್ದಾರೆ.

  ತೀರಾ ಅನಿವಾರ್ಯವಾದಲ್ಲಿ ಖಂಡ್ರೆ ಬದಲಿಗೆ ಪಾಟೀಲ್​ರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಬಹುದು.

  ವಿಪಕ್ಷ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯಲಿ. ಆದರೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೂರ್ಣ ಅಧಿಕಾರ ಅವರಿಗೆ ಬೇಡ. ಎಂ.ಬಿ. ಪಾಟೀಲ್ ಅವರ ಕೈಗೊಂಬೆಯಂತೆ ಕೆಲಸ ಮಾಡುವ ಭೀತಿ ಇದೆ

  ಕಾರ್ಯಾಧ್ಯಕ್ಷರು ಯಾರ್ಯಾರು?

  ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂಬ ನಿರ್ಧಾರ ವಾಗಿದೆ ಎಂದು ಹೇಳಲಾಗಿದ್ದರೂ, ಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ ಈ ಘೊಷಣೆಯನ್ನೂ ಮಾಡುತ್ತಾರಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಕಲಬುರಗಿ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಮೈಸೂರು ಭಾಗಗಳಿಗೆ ಆದ್ಯತೆ ನೀಡಿ ಕಾರ್ಯಾಧ್ಯಕ್ಷರ ನೇಮಕ ಆಗಬಹುದು ಎನ್ನಲಾಗಿದೆ. ಸಂಭವನೀಯ ಹೆಸರುಗಳು ಇಲ್ಲಿವೆ.

  1.ಧ್ರುವನಾರಾಯಣ ಅಥವಾ ಮಹದೇವಪ್ಪ (ದಲಿತ ಸಮುದಾಯ, ಮೈಸೂರು) 2. ಯು.ಟಿ. ಖಾದರ್ (ಅಲ್ಪ ಸಂಖ್ಯಾತ, ದ.ಕನ್ನಡ) 3. ಸತೀಶ್ ಜಾರಕಿಹೊಳಿ (ಪ.ಪಂಗಡ, ಬೆಳಗಾವಿ) 4. ಈಶ್ವರ ಖಂಡ್ರೆ (ಲಿಂಗಾಯತ, ಹೈ.ಕ.)

  ರಾಘವ ಶರ್ಮ ನಿಡ್ಲೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts