ರಟ್ಟಿಹಳ್ಳಿ: ಕಪ್ಪು ಶಿಲೀಂಧ್ರ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚುಚ್ಚುಮದ್ದುಗಳನ್ನು ಪೂರೈಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮಾಹಿತಿ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಾಸ್ಪತ್ರೆಯಲ್ಲಿ ಕೋವಿಡ್ ಕಾಳಜಿ ಕೇಂದ್ರವನ್ನು ಬುಧವಾರ ಪರಿಶೀಲಿಸಿ, ವೈದ್ಯರೊಂದಿಗೆ ರ್ಚಚಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೊಸದಾಗಿ 51 ವೈದ್ಯರನ್ನು ನೇಮಿಸಲಾಗಿದ್ದು, ಕೆಲವು ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಿಸಲಾಗಿದೆ. ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಾಗುತ್ತಿರುವುದು ಸವಾಲಾಗಿದ್ದು, 2-3 ದಿನಗಳಲ್ಲಿ ಚುಚ್ಚುಮದ್ದುಗಳು ದೊರೆಯುವ ಭರವಸೆಯಿದೆ ಎಂದರು.
ಕರೊನಾ 3ನೇ ಅಲೆ ತಡೆಯಲು ತಾಲೂಕು ಮಟ್ಟದಲ್ಲಿ ಹೆಚ್ಚಿನ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕಿತರ ಪ್ರಕರಣ ದಿನೇದಿನೆ ಕಡಿಮೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಇನ್ನೂ ಕಡಿಮೆಯಾಗಬೇಕಾಗಿದೆ. ಪ್ರತಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ರೆಮ್ೆಸಿವರ್ ಉತ್ಪಾದನೆ ಪ್ರಮಾಣವೂ ಹೆಚ್ಚಾಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಸೋಂಕಿತ ಮಕ್ಕಳಿಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜೂನ್ನಿಂದ ಆಗಸ್ಟ್ನೊಳಗೆ ಸಾರ್ವಜನಿಕರಿಗೆ ಹೆಚ್ಚಿನ ಲಸಿಕೆ ನೀಡಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕರೊನಾ ಬಂದು ಜೀವನ ಕಷ್ಟವಾಗಿದೆ. ರೈತರು ಬೆಳೆ ಹಾನಿ ಮಾಡಿಕೊಳ್ಳಬಾರದು. ಸ್ವಲ್ಪ ದಿನ ಕಾಯಬೇಕಾಗುತ್ತದೆ. ರಾಜ್ಯದಲ್ಲಿ ಗೊಬ್ಬರ ಕೊರತೆಯಿಲ್ಲ. 1600 ಮೆಟ್ರಿಕ್ ಟನ್ ಗೊಬ್ಬರ ಬರುತ್ತಿದ್ದು, ರೈತರು ಆತಂಕಪಡಬಾರದು. ಕೋವಿಡ್ ಪರಿಸ್ಥಿತಿಯಲ್ಲಿ ಜನರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ ರಾಜಕೀಯ ಮಾಡೋಕೆ ಹೊರಟಿದ್ದಾರೆ. ಈ ಸಾಂಕ್ರಾಮಿಕ ರೋಗ ಜಗತ್ತಿಗೆ ವ್ಯಾಪಿಸಿರುವುದು ಯಾವುದೇ ಒಂದು ಪಕ್ಷದಿಂದಲ್ಲ. ಈ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕೆ ಹೋಗುತ್ತಿದ್ದಾರೆ ಎಂದು ವಿಪಕ್ಷವನ್ನು ಟೀಕಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ತಹಸೀಲ್ದಾರ್ ಕೆ. ಗುರುಬಸವರಾಜ, ಡಿಎಚ್ಒ ರಾಘವೇಂದ್ರ, ತಾಲೂಕು ವೈದ್ಯಾಧಿಕಾರಿ ಚಿದಾನಂದ, ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ಫಾಲಕ್ಷಗೌಡ್ರ ಪಾಟೀಲ, ತಾಪಂ ಮಾಜಿ ಸದಸ್ಯ ಆರ್.ಎನ್. ಗಂಗೋಳ, ಸುಭಾಷ ಹದಡೇರ, ಮಹೇಶ ಗುಬ್ಬಿ, ವೀರನಗೌಡ ಮಕರಿ, ರವೀಂದ್ರ ಮುದಿಯಪ್ಪನವರ, ದೇವರಾಜ ನಾಗಣ್ಣನವರ, ಶಂಭಣ್ಣ ಗೂಳಪ್ಪನವರ, ಶಂಕ್ರುಗೌಡ ಚೆನ್ನಗೌಡ್ರ, ಗಣೇಶ ವೆರ್ಣಿಕರ, ಕೆ.ವಿ. ವರಹದ ಇತರರಿದ್ದರು.
ಲಾಕ್ಡೌನ್ ವಿಸ್ತರಣೆ 5ರಂದು ನಿರ್ಧಾರ: ಲಾಕ್ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ತಜ್ಞರ ವರದಿ ಆಧರಿಸಿ ಮುಖ್ಯಮಂತ್ರಿ ಜೂ. 5ರಂದು ಅಂತಿಮ ನಿರ್ಣಯ ಪ್ರಕಟಿಸಲಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಅವರು ತಜ್ಞರಿಂದ ಮಾಹಿತಿ ಪಡೆದು 2-3 ದಿವಸಗಳಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.