ಬೋಧನಾ ತರಬೇತಿ ಕಾರ್ಯಾಗಾರ ಬಹಿಷ್ಕಾರ, ಸರ್ಕಾರದ ಇಬ್ಬಗೆ ನೀತಿಗೆ ಶಿಕ್ಷಕರ ಖಂಡನೆ

ಕೊಟ್ಟೂರು: 6 ರಿಂದ 8 ನೇ ತರಗತಿಗೆ ಸೇವಾ ನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದನಾಮಕರಣಗೊಳಿಸದೆ, ಪದವೀಧರ ಶಿಕ್ಷಕರನ್ನು ನೇಮಿಸಿದ ಸರ್ಕಾರದ ಕ್ರಮ ಖಂಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ಬೋಧನಾ ತರಬೇತಿ ಕಾರ್ಯಾಗಾರ ಬಹಿಷ್ಕರಿಸಿದರು.

ಪಟ್ಟಣದ ಎಲ್‌ಬಿಎಸ್ ಬಡಾವಣೆಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ಶಾಲಾ ಶಿಕ್ಷಕರು 2006 ರಿಂದ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಬೋಧಿಸುತ್ತಿದ್ದರು. ಸರ್ಕಾರ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿದ ನಂತರ 6 ರಿಂದ 8 ನೇ ತರಗತಿಗೂ ಪಾಠ ಹೇಳಿದ್ದಾರೆ. ಸರ್ಕಾರ ಏಕಾಏಕಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಜಾರಿಗೊಳಿಸಿ, ಇಷ್ಟು ದಿನ ತರಗತಿ ನಿಭಾಯಿಸಿದ ಶಿಕ್ಷಕರನ್ನು ಕಡೆಗಣಿಸಿ, 6 ರಿಂದ 8ನೇ ತರಗತಿಗೆ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರನ್ನು ನೇಮಿಸಿರುವುದು ಖಂಡನೀಯ ಎಂದು ಪ್ರತಿಭಟನಾನಿರತ ಶಿಕ್ಷಕರು ದೂರಿದರು. ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಸಮನ್ವಯ ಅಧಿಕಾರಿ ಜಮೀರ್ ಅಹ್ಮದ್ ಮನವಿ ಸ್ವೀಕರಿಸಿ ಶಿಕ್ಷಕರ ಮನವೊಲಿಸಿದರು. ನಂತರ ಕಾರ್ಯಾಗಾರ ನಡೆಯಿತು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾರಾಧ್ಯ, ಶಿಕ್ಷಕರಾದ ಕರಿಬಸಪ್ಪ, ನಾಗರಾಜ್, ಕೊಟ್ರೇಶ್, ಡಿ.ಸಿದ್ದಪ್ಪ, ಬಸವರಾಜ ಇತರರಿದ್ದರು.

ಪ್ರಾಥಮಿಕ ಶಿಕ್ಷಕರು ಸಹ ಪದವಿ ಪಡೆದಿದ್ದಾರೆ. ಹಲವು ವರ್ಷಗಳಿಂದ 6 ರಿಂದ 8 ನೇ ತರಗತಿಗೆ ಬೋಧನೆ ಮಾಡಿದ್ದಾರೆ. ಸರ್ಕಾರ ಪ್ರಾಥಮಿಕ ಶಿಕ್ಷಕರಿಗೆ 1 ರಿಂದ 5 ತರಗತಿಗೆ ಬೋಧಿಸಿ ಎಂದು ಆದೇಶಿಸಿದೆ. ಮತ್ತೊಂದು ಕಡೆ 1 ರಿಂದ 8 ತರಗತಿಗೆ ಬೋಧಿಸಲು ತರಬೇತಿ ನೀಡಲು ಮುಂದಾಗಿದೆ. ಸರ್ಕಾರ ಇಬ್ಬಗೆ ನೀತಿ ಖಂಡಿಸಿ, ಜು.1 ರಿಂದ ತರಗತಿ ಬಹಿಷ್ಕರಿಸಲಾಗುವುದು.
| ಎಚ್.ಎಂ. ಹನುಮಂತಪ್ಪ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಟ್ಟೂರು ತಾಲೂಕು ಘಟಕ.

Leave a Reply

Your email address will not be published. Required fields are marked *