ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ, ಆರೋಪ – ವರದಿ ನೀಡುವಂತೆ ಸಹಾಯಕ ಆಯಕ್ತರ ಆದೇಶ

ಕೊಟ್ಟೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ, ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ವೈದ್ಯರು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಹೊಸಪೇಟೆ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ್, ತಹಸೀಲ್ದಾರ್‌ಗೆ ಆದೇಶಿಸಿದ್ದಾರೆ.

ಆದೇಶದ ಹಿನ್ನೆಲೆಪಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಹೆರಿಗೆ, ಶಸ್ತ್ರ ಚಿಕಿತ್ಸೆಗೆ ಹಣ ಕೊಟ್ಟವರು ಹಾಗೂ ಆಸ್ಪತ್ರೆ ಆರೋಗ್ಯ ರಕ್ಷ ಸಮಿತಿ ಸದಸ್ಯೆ ಎ.ಅಟವಾಳಗಿ ಬಸಮ್ಮ ಅವರನ್ನು ವಿಚಾರಣೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಬೆಡ್ ಶೀಟ್ ಇಲ್ಲ. ಅವ್ಯವಸ್ಥೆ ತಾಂಡವವಾಡುತ್ತಿದೆ. ಆಸ್ಪತ್ರೆಯ ಒಂದು ರೂಮಿನಲ್ಲಿ 40 ಮಂಚಗಳನ್ನು ಇಟ್ಟು ಬೀಗ ಹಾಕಿದ್ದು, ಮುರಿದ ಮಂಚಗಳನ್ನು ರೋಗಿಗಳಿಗೆ ಹಾಕಲಾಗಿದೆ. ಈ ಕುರಿತು ವಿಚಾರಿಸಿದರೆ ಸಿಬ್ಬಂದಿ ಕೊರತೆಯಿಂದಾಗಿ ಮಂಚಗಳನ್ನು ಹಾಗೆಯೇ ಇರಿಸಲಾಗಿದೆ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಕುರಿತು ಶೀಘ್ರ ವರದಿ ಸಿದ್ಧಪಡಿಸಿ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದರು. ‘ಹೆರಿಗೆಗಿಲ್ಲ ಹಣ ಕೇಳ್ತಾರೆ’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಮೇ 4 ರಂದು ವಿಸ್ತೃತ ವರದಿ ಪ್ರಕಟಗೊಂಡಿತ್ತು.

2 ಸಾವಿರ ರೂ. ಕೊಟ್ಟಿರುವುದು ಸತ್ಯ
ಮಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆ ಸಿಬ್ಬಂದಿಗೆ 2 ಸಾವಿರ ರೂ. ನೀಡಿರುವುದು ಸತ್ಯ ಎಂದು ಪಟ್ಟಣದ ನಿವಾಸಿ ನಾಗರತ್ನ, ತಹಸೀಲ್ದಾರ್ ಮುಂದೆ ಬುಧವಾರ ತಿಳಿಸಿದರು. ಶಸ್ತ್ರಚಿಕಿತ್ಸೆಗಾಗಿ ಒಳಗೆ ಹೋದ ಮಗಳು ಕೆಲ ನಿಮಿಷದಲ್ಲೇ ಹೊರಗೆ ಬಂದಳು. 2 ಸಾವಿರ ರೂ. ಕೊಟ್ಟರೆ ಮಾತ್ರ ಶಸ್ತ್ರ ಚಿಕಿತ್ಸೆ ನೀಡುವುದಾಗಿ ಹೇಳಿ ಸಿಬ್ಬಂದಿ, ಮಗಳನ್ನು ಹೊರಗೆ ಕಳುಹಿಸಿದ್ದರು. ಹೀಗಾಗಿ ಪಕ್ಕದ ಬೆಡ್‌ನವರ ಹತ್ತಿರ 2 ಸಾವಿರ ರೂ. ಸಾಲ ಪಡೆದು ಸಿಬ್ಬಂದಿಗೆ ಕೊಟ್ಟ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಎದುರು ಕಣ್ಣೀರು ಹಾಕಿದರು.

Leave a Reply

Your email address will not be published. Required fields are marked *