ದೇಸಿ ಸಂಸ್ಕೃತಿ ಕಡೆಗಣನೆಗೆ ಬೇಸರ

ಕೊಟ್ಟೂರು(ಬಳ್ಳಾರಿ): ವಿದೇಶಿಗರು ಭಾರತೀಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಆದರೆ, ನಮ್ಮವರೇ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಕಡೆಗಣಿಸುತ್ತಿರುವುದಕ್ಕೆ ಗೀತಾಬಾಯಿ ಭೀಮಾನಾಯ್ಕ ಬೇಸರ ವ್ಯಕ್ತಪಡಿಸಿದರು.

ರಾಂಪುರದಲ್ಲಿ ಗುರುವಾರ ಗೀತಾಬಾಯಿ ಭೀಮಾನಾಯ್ಕ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಸೊಬಗು ಹೆಸರಡಿ ಕ್ಷೇತ್ರದ 22 ಗ್ರಾಪಂಗಳಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.

ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹಲವು ಕಲೆಗಳು ಅಡಗಿವೆ. ಅದರಲ್ಲಿ ರಂಗೋಲಿ ಕಲೆಯೂ ಒಂದು. ಪ್ರತಿಭಾವಂತರನ್ನು ಗುರುತಿಸಲು ವೇದಿಕೆ ಸಹಕಾರಿ ಆಗಲಿದೆ. ಜ.12ರಂದು ಹಗರಿಬೊಮ್ಮನಹಳ್ಳಿಯಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಇನ್ಫೋಸಿಸ್‌ನ ಸುಧಾ ಮೂರ್ತಿ, ಸಚಿವೆ ಜಯಮಾಲಾರನ್ನು ಆಹ್ವಾನಿಸುವ ಚಿಂತನೆ ಇದೆ ಎಂದು ಹೇಳಿದರು. ರಾಂಪುರದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಜೆ.ಕರಿಬಸಮ್ಮ ಪ್ರಥಮ, ಭಾಗ್ಯಲಕ್ಷ್ಮಿ ದ್ವಿತೀಯ, ಕಂಕ್ರಿ ಪ್ರೇಮ ತೃತೀಯ ಸ್ಥಾನ ಗಳಿಸಿದರು. ವಿವೇಕಾನಂದ, ಭರ‌್ಮಪ್ಪ ಇದ್ದರು.