ಹರಿಹರ ಪೀಠದ ಜಗದ್ಗುರು ವಚನಾನಂದ ಶ್ರೀಗಳ ಹೇಳಿಕೆ | ಕೊಟ್ಟೂರಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕೊಟ್ಟೂರು : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡಿ ಆಶಾಂತಿ ಸೃಷ್ಟಿಸಲ್ಲ. ಬದಲಿಗೆ ಚಾಣಾಕ್ಷತನದಿಂದ ಶಾಂತಿಯುತವಾಗಿ ಹೋರಾಟ ಮಾಡಿ ಮೀಸಲಾತಿ ಪಡೆಯಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಇದು ಸ್ಪರ್ಧಾತ್ಮಕ ಪ್ರಪಂಚ. ನಾವು ಮೀಸಲಾತಿ ಪಡೆಯುತ್ತೇವೆ. ಆದರೆ, ಅದಕ್ಕಾಗಿ ಕಾಯುತ್ತ ಕುಳಿತುಕೊಳ್ಳಬೇಡಿ. ಶ್ರಮಪಟ್ಟು ಓದಿ ಉನ್ನತ್ತ ಹುದ್ದೆ ಪಡೆದು ಪಾಲಕರು, ಸಮುದಾಯಕ್ಕೆ ಕೀರ್ತಿ ತರಬೇಕು. ಮಕ್ಕಳನ್ನು ಓದಿಸಲು ಸಾಧ್ಯವಾಗದಿದ್ದರೆ ಮಠಕ್ಕೆ ತಂದು ಬಿಡಿ. ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದು ಅಭಯ ನೀಡಿದರು.
ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, ಓದಿ ಉನ್ನತ ಸ್ಥಾನಕ್ಕೇರಿ ಸಮುದಾಯಕ್ಕೆ ಗೌರವ ತರಬೇಕು. ಆದರೆ ಕಳಂಕ ತರುವಂತೆ ನಡೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ಮಹಾದೇವ ಇಂಟರ್ ನ್ಯಾಷನಲ್ ಸ್ಕೂಲ್ ಸ್ಥಾಪಕ ಬಸಾಪುರ ಪಂಪಾಪತಿ ಮಾತನಾಡಿ, ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ನಿಧಿ ಸ್ಥಾಪಿಸಲು ಸಮಾಜದ ಪ್ರಮುಖರೊಂದಿಗೆ ಚರ್ಚಿಸಿದ್ದು, 10 ಲಕ್ಷ ರೂ. ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಚನ್ನಬಸವನಗೌಡ ಪಾಟೀಲ್, ಕೊಟ್ಟೂರು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಚಾಪಿ ಚಂದ್ರಪ್ಪ ಮಾತನಾಡಿದರು. ವಿಜಯನಗರ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್, ಚಪ್ಪರದಹಳ್ಳಿ ಕೊಟ್ರಪ್ಪ, ತಾಲೂಕು ಘಟಕದ ಕಾರ್ಯದರ್ಶಿ ಎಚ್.ಅಶೋಕ, ನಿಂಬಳಗೆರೆ ಕಲ್ಲೇಶಪ್ಪ, ಹುರುಳಿಹಾಳ ರೇವಣ್ಣ, ಶೆಟ್ಟಿ ರಾಜಶೇಖರ್, ಪ್ರೇಮಕ್ಕ, ತೂಲಹಳ್ಳಿ ಹೇಮಣ್ಣ ಇತರರಿದ್ದರು. ಸಾಧಕರು, ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದವರನ್ನು ಸನ್ಮಾನಿಸಲಾಯಿತು.