ಕೊಟ್ಟೂರೇಶ್ವರ ಸ್ವಾಮಿ ರಥಕ್ಕೆ ಬಾಳೆಹಣ್ಣು, ಉತ್ತುತ್ತಿ ನಿಷೇಧ


ಕೊಟ್ಟೂರು: ಫೆ.28ರಂದು ಜರುಗುವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಶಾಸಕ ಎಸ್.ಭೀಮಾನಾಯ್ಕ ಸೂಚಿಸಿದರು.

ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ರಥೋತ್ಸವದ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದರು. ಎಲ್ಲ 20 ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತಾ ಕಾರ್ಯದಲ್ಲಿ ಸದಸ್ಯರ ಜತೆಗೆ ನಾನೂ ಭಾಗವಹಿಸುವೆ. ಸಭೆಗೆ ಗೈರಾಗಿದ್ದ ಕೆಇಬಿ ಎಇಇಗೆ ಶೋಕಾಸ್ ನೋಟಿಸ್ ನೀಡುವಂತೆ ಎಸಿ ಲೋಕೇಶಗೆ ಸೂಚಿಸಿದರು.

ಕಳೆದ ವರ್ಷದಂತೆ ಶ್ರೀ ಕೊಟ್ಟೂರೇಶ್ವರ ರಥಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆಯುವುದು ನಿಷೇಧಿಸಲಾಗಿದೆ ಎಂದು ಸಭೆಗೆ ಎಸಿ ಮಾಹಿತಿ ನೀಡಿದರು. ಪಪಂ ಸದಸ್ಯ ತೋಟದ ರಾಮಣ್ಣ, ಇತರ ಭಕ್ತರು ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದರು. ಭಕ್ತರ ಹಿತದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಎಸಿ ತಿಳಿಸಿದರು.

ಸಿಪಿಐ ರವೀಂದ್ರ ಕುರುಬಗಟ್ಟಿ ಮಾತನಾಡಿ, ಅಹಿತರಕರ ಘಟನೆ ತಡೆಗೆ ಮೂವರು ಡಿವೈಎಸ್ಪಿ, 7 ಸಿಪಿಐ, 28 ಪಿಎಸ್‌ಐ, 225 ಕೆಎಸ್‌ಆರ್‌ಪಿ, 695 ಪೊಲೀಸ್ ಸಿಬ್ಬಂದಿ, ಅಪರಾಧ ತಡೆಗೆ ವಿಶೇಷ ತರಬೇತಿ ಪಡೆದ 40 ಪೊಲೀಸರನ್ನು ನಿಯೋಜಿಸಲಾಗುವುದು ಎಂದರು. ಮಹಲ್ ಮಠದ ಕ್ರಿಯಾಮೂರ್ತಿಗಳಾದ ಶಂಕರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಜಿಪಂ ಸದಸ್ಯ ಹರ್ಷವರ್ಧನ್, ದೊಡ್ಡರಾಮಣ್ಣ, ಡಿವೈಎಸ್ಪಿ ಬಸವೇಶ್ವರ ಹೀರಾ, ತಹಸೀಲ್ದಾರ್ ಕೆ.ಮಂಜುನಾಥ್, ಧರ್ಮಕರ್ತ ಗಂಗಾಧರಯ್ಯ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್‌ಪಿಬಿ ಮಹೇಶ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್ ಇತರರಿದ್ದರು.