ಕೊಟ್ಟೂರು: ನನೆಗುದಿಗೆ ಬಿದ್ದಿರುವ ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಬೆಳ್ಳಿ ಕವಚವನ್ನು ತ್ವರಿತವಾಗಿ ಅಳವಡಿಸಲಾಗುವುದು ಎಂದು ದೇವಸ್ಥಾನದ ನೂತನ ಇಒ ಮಲ್ಲಪ್ಪ ತಿಳಿಸಿದ್ದಾರೆ.
1.3 ಕೋಟಿ ರೂ. ವೆಚ್ಚದ ಬೆಳ್ಳಿ ಕವಚ ಅಳವಡಿಕೆ ಕಾರ್ಯ ಒಂದಿಲ್ಲೊಂದು ಕಾರಣಕ್ಕೆ ವಿಳಂಬವಾಗಿದೆ. ಈಗಾಗಲೇ ಅಗತ್ಯ ಬೆಳ್ಳಿ ಸಿದ್ಧವಿದೆ. ಆದರೆ ಬಾಗಿಲನ್ನು ಸಾಗವಾನಿ ಕಟ್ಟಿಗೆಯಿಂದ ನಿರ್ಮಿಸಿ ಅದಕ್ಕೆ ಬೆಳ್ಳಿ ಕವಚ ಅಳವಡಿಸಬೇಕು.
ಸಾಗುವಾನಿ ಕಟ್ಟಿಗೆಯಿಂದ ಬಾಗಿಲು ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಂದಾಜು ಮೊತ್ತದ ಪಟ್ಟಿ ಸಿದ್ಧಪಡಿಸಿ ಕೊಟ್ಟಿದೆ. ಆದರೆ ಪಿಡಬ್ಲುೃಡಿ ಕೆಲ ನಿಯಮಗಳಿಂದಾಗಿ ಕೆಲಸ ವಿಳಂಬವಾಗಿದೆ. ಹೀಗಾಗಿ ನಿರ್ಮಿತಿ ಕೇಂದ್ರ ಮತ್ತು ಕೆಆರ್‌ಐಡಿಎಲ್‌ಗೆ ಸಂಪರ್ಕಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಕಾರ್ಯನಿಮಿತ್ತ ಬೇರೆ ಊರಿಗೆ ತೆರಳಿದ್ದು, ಅವರು ಬಂದ ತಕ್ಷಣ ಡಿಸಿ ಅವರನ್ನು ಭೇಟಿಯಾಗಿ ದೇವಸ್ಥಾನದ ಬಾಗಿಲಿಗೆ ಬೆಳ್ಳಿ ಕವಚ ಅಳವಡಿಕೆ ಕಾರ್ಯ ಆರಂಭಿಸಲಾಗುವುದು. ಭಕ್ತರಿಂದಲೂ ಒತ್ತಡ ಹೆಚ್ಚಿದೆ ಎಂದು ತಿಳಿಸಿದ್ದಾರೆ.