
ಕೊಟ್ಟೂರು: ಸಭೆಗೆ ಗೈರಾದ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ನೀಡುವಂತೆ ಶಾಸಕ ನೇಮಿರಾಜ್ ನಾಯ್ಕ ತಾಪಂ ಇಒ ಡಾ. ಆನಂದ ಕುಮಾರ್‌ಗೆ ಸೂಚಿಸಿದರು.
ಪಟ್ಟಣದ ತಾಪಂನಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಏಳು ಇಲಾಖೆ ಅಧಿಕಾರಿಗಳು ಗೈರಾಗಿದ್ದಕ್ಕೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಕೀತು ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೊಳ್ಳಿ ವಾಮದೇವ ಮಾತನಾಡಿ, ರೈತರು ಖರ್ಚು ಕಮ್ಮಿ, ಅಧಿಕ ಲಾಭ ಕೊಡುವ ಮೆಕ್ಕೆಜೋಳಕ್ಕೆ ಬೆನ್ನತ್ತಿ, ಶೇಂಗಾ, ಸೂರ್ಯಕಾಂತಿ ಬೆಳೆಯಲು ಮುಂದಾಗುತ್ತಿಲ್ಲ.
ನಮ್ಮಲ್ಲಿ ಕಳಪೆ ಬಿತ್ತನೆ ಬೀಜವಿಲ್ಲ. ಕಡಿಮೆ ಬೆಲೆಗೆ ರಾಣೆಬೆನ್ನೂರಿನಿಂದ ಪ್ರಮಾಣೀಕೃತವಲ್ಲದ ಮೆಕ್ಕೆಜೋಳ ಬಿತ್ತನೆ ಬೀಜ ತರುತ್ತಿದ್ದಾರೆ. ಇನ್ನು ಎಸ್ಸಿ-ಎಸ್ಟಿ ರೈತರ ಅನುದಾನ ಸರ್ಕಾರದಿಂದ ಬಂದಿಲ್ಲ ಎಂದು ತಿಳಿಸಿದರು.
ಶಾಸಕ ನೇಮಿರಾಜ್ ನಾಯ್ಕ ಪ್ರತಿಕ್ರಿಯಿಸಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನವನ್ನು ಅವರ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಇತರ ಯೋಜನೆಗೆ ಬಳಸುವುದರಿಂದ ಎಸ್ಸಿ-ಎಸ್ಟಿ ಸಮುದಾಯದವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿ ಪ್ರಸನ್ನ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ತಾಲೂಕಿನ ತಿಮ್ಮಲಾಪುರ, ಲೊಟ್ಟನಕೆರೆಯಲ್ಲಿ ಅನುಷ್ಠಾನಗೊಂಡಿವೆ ಎಂದರು.
ಶಾಸಕ ನೇಮಿರಾಜ್ ನಾಯ್ಕ ಪ್ರತಿಕ್ರಿಯಿಸಿ, ‘ಗ್ರಾಮಗಳಲ್ಲಿ ಸಿಮೆಂಟ್ ರಸ್ತೆಯನ್ನೆಲ್ಲ ಕಿತ್ತಿದ್ದೀರಿ. ಸಮರ್ಪಕವಾಗಿ ನೀರು ಪೂರೈಸಿ ಎಂದು ತಾಕೀತು ಮಾಡಿದರು. ಶುದ್ಧ ಕುಡಿವ ನೀರಿನ ಘಟಕಗಳು ಒಂದೂ ಸರಿ ಇಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದವು.
ಆಗ ಗುತ್ತಿಗೆದಾರರು ಇನ್ನೂ ನಮ್ಮ ವಶಕ್ಕೆ ನೀಡಿಲ್ಲ ಎಂದು ಅಧಿಕಾರಿ ಸಮಜಾಯಿಷಿ ನೀಡಿದರು. ಲೋಕೋಪಯೋಗಿ ಇಲಾಖೆ ಎಇಇ ನಾಗನಗೌಡ ಮಾತನಾಡಿ, ತಿಮ್ಮಲಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆ ಅಭಿವೃದ್ಧಿಗೆ 54 ಲಕ್ಷ ರೂ. ಮಂಜೂರಾಗಿದೆ ಎಂದರು.
ಶಾಸಕ ನೇಮಿರಾಜ್ ನಾಯ್ಕ ಮಾತನಾಡಿ, ನಿಮ್ಮ ಇಲಾಖೆ ಟೆಂಟರ್‌ಗಳು ವಿಳಂಬವಾಗುತ್ತಿವೆ. ಗುಣಮಟ್ಟದ ಕಾಮಗಾರಿ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದರು.
ಬಿಇಒ ಜಗದೀಶ ಮಾತನಾಡಿ, ಕೊಟ್ಟೂರು ಮತ್ತು ಕೂಡ್ಲಿಗಿ ಪ್ರೌಢಶಾಲೆಗಳಲ್ಲಿ 141 ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 118 ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದರು. ಶಾಸಕ ನೇಮಿರಾಜ್ ನಾಯ್ಕ ಮಾತನಾಡಿ, ಹರಾಳು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾಗಲು ಕ್ರಮವಹಿಸಿ. ಖಾಸಗಿ ಶಾಲೆಯವರ ಒತ್ತಡಕ್ಕೆ ಮಣಿಯದಿರಿ ಎಂದು ಹೇಳಿದರು.
ಪಟ್ಟಣದ ಹಳೆಯ ಪೊಲೀಸ್ ಠಾಣೆ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಕ್ರಮವಹಿಸುವಂತೆ ಸಿಡಿಇಪಿಒ ಮಾಲತಿಗೆ ಸೂಚನೆ ನೀಡಿದ ಶಾಸಕ, ಪೊಲೀಸರ ಹೆಸರಿನಲ್ಲಿರುವ ಖಾತೆಯನ್ನು ಬದಲಾಯಿಸಿ ಅಂಗನವಾಡಿ ಕಟ್ಟಡ ಕಟ್ಟಲು ಪರವಾನಗಿ ಕೊಡಿ ಎಂದು ಪಪಂ ಮುಖ್ಯಾಧಿಕಾರಿ ನಸರುಲ್ಲಾಗೆ ತಿಳಿಸಿದರು.
ತಹಸೀಲ್ದಾರ್ ಜಿ.ಕೆ. ಅಮರೇಶ, ತಾಪಂ ನಾಮ ನಿರ್ದೇಶಿತ ಸದಸ್ಯರಾದ ಪರಶುರಾಮ್, ಬುಡೇನ್ ಸಾಹೇಬ್, ಗಂಗಾಧರ ಇತರರಿದ್ದರು.