ಕೊಟ್ಟೂರು: ದೇಶವನ್ನು ಸುಭದ್ರ, ವಿಶ್ವಗುರುವಾಗಿಸಲು ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಭಾರತದ ಜನರು ಒಪ್ಪಿಕೊಂಡಿದ್ದಾರೆ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದರೆ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈಗಲೂ ಕಾಲ ಮಿಂಚಿಲ್ಲ ದೇಶಕ್ಕಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕೊಟ್ಟೂರು ಹಾಗೂ ಸುತ್ತಲಿನ ಹಳ್ಳಿಗಳು ಬಿಜೆಪಿ ಶಕ್ತಿ ಕೇಂದ್ರಗಳಾಗಿವೆ. ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ತನಕ ಪಕ್ಷದ ಕಾರ್ಯಕರ್ತರು ಹೋರಾಡಬೇಕೆಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಬಿಜೆಪಿ ಎಂದಿಗೂ ಡಾ.ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಯಲ್ಲ ಎಂದ ಅವರು ಬೆಂಗಳೂರಿನಿಂದ ಮೈಸೂರಿಗೆ ನಡೆಯುವ ಪಾದಯಾತ್ರೆಯಲ್ಲಿ ವಿಜಯನಗರ ಜಿಲ್ಲೆಯಿಂದ ಒಂದು ಸಾವಿರ, ಬಳ್ಳಾರಿ ಜಿಲ್ಲೆಯಿಂದ ನಾಲ್ಕು ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಪಂ ಸದಸ್ಯ ಕೆ.ಎಸ್.ಈಶ್ವರಗೌಡ ಮಾತನಾಡಿ, ಬೇರೆ ಪಕ್ಷದಿಂದ ಬಂದವರಿಗೆ ಉನ್ನತ ಸ್ಥಾನಮಾನ ನೀಡುವುದರಿಂದ ಬಿಜೆಪಿಯ ಮೂಲ ನಿಷ್ಟಾವಂತ ಹಾಗೂ ಸ್ವಾಭಿಮಾನಿ ಕಾರ್ಯಕರ್ತರಿಗೆ ಅನ್ಯಾಯವಾಗಲಿದ್ದು, ಮುಂದೆ ಹೀಗಾಗಬಾರದೆಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವೀರೇಶ ಸ್ವಾಮಿ, ಸ್ಥಳೀಯ ಘಟಕದ ಅಧ್ಯಕ್ಷ ಭರಮನಗೌಡ, ಮುಖಂಡ ಮುಟುಗನಹಳ್ಳಿ ಕೊಟ್ರೇಶಪ್ಪ, ಮಂಡಲ ಅಧ್ಯಕ್ಷ ಪ್ರಕಾಶ ಮಾತನಾಡಿದರು. ಪ್ರಮುಖರಾದ ಜೈಯಪ್ರಕಾಶ, ಅಂಗಡಿ ಪಂಪಾಪತಿ, ಕೋಗಳಿ ಹನುಮಂತಪ್ಪ, ಎಂ.ಕೊಟ್ರೇಶ, ಗೊಲ್ಲರಹಳ್ಳಿ ಉಮೇಶ , ಹರಾಳು ಗುರುಮೂರ್ತಿ, ಸಿದ್ದಯ್ಯ ಇತರರಿದ್ದರು.