ಸಿದ್ಧಗಂಗಾ ಶ್ರೀಗಳಿಂದ ನನಗೆ ಮರು ಜನ್ಮ

ಕೊಟ್ಟೂರು (ಬಳ್ಳಾರಿ): ನಾನು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ಸಂದರ್ಭದಲ್ಲಿ ಸಿದ್ಧಗಂಗಾ ಶ್ರೀಗಳು ನನಗೆ ಟಿಸಿಎಚ್ ಸೀಟ್ ನೀಡಿ ಮರುಜನ್ಮ ನೀಡಿದ್ದರು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಭಾವುಕರಾಗಿ ನುಡಿದರು.

ಪಟ್ಟಣದಲ್ಲಿ ಕೆ.ಶ್ರೀಧರ ರಚಿತ ಸ್ವಪ್ನದಲ್ಲಿ ಸೊರಗಿದ ಪ್ರೀತಿ ಕಾದಂಬರಿ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು. ಸಿದ್ಧಗಂಗಾ ಶ್ರೀಗಳ ನಿಧನ ಸುದ್ದಿ ಕೇಳುತ್ತಿದ್ದಂತೆ ಭಾಷಣವನ್ನೇ ಅರ್ಧಕ್ಕೆ ನಿಲ್ಲಿಸಿ ಕ್ಷಣಹೊತ್ತು ಮೌನವಹಿಸಿದರು. ಸಂತಾಪ ವ್ಯಕ್ತಪಡಿಸಿದ ನಂತರ ಮಾತನಾಡಿದರು. ನನ್ನಂಥ ಅದೆಷ್ಟೋ ರಾಜ್ಯ ಮತ್ತು ಅನ್ಯ ರಾಜ್ಯಗಳ ಅಕ್ಷರವಂಚಿತ ವಿದ್ಯಾರ್ಥಿಗಳ ಬದುಕಿನಲ್ಲಿ ಅಕ್ಷರದ ಬೀಜ ಬಿತ್ತಿ ಅವರ ಬದುಕನ್ನು ಹಸನಗೊಳಿಸಿದ್ದಾರೆ. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಬದಲು ವಿಶ್ವರತ್ನ ಪ್ರಶಸ್ತಿ ನೀಡಬೇಕು. ಪ್ರಪಂಚದ ವಿದ್ಯಾಮಾನಗಳನ್ನು ಕುಂತಲ್ಲೇ ಗ್ರಹಿಸುವಂಥ ಏಕೈಕ ತ್ರಿಕಾಲ ಜ್ಞಾನಿಗಳಾಗಿದ್ದರು ಎಂದು ಬಣ್ಣಿಸಿದರು.

ಕೇರಿ ಮುಟ್ಟಿದ ಮಾವು ಕಾದಂಬರಿ ಬಿಡುಗಡೆ
ಪಟ್ಟಣದಲ್ಲಿ ಕೊಟ್ಟೂರಿನ ಎಚ್.ಕೆ.ಎಸ್.ಪ್ರಕಾಶನ ಹೊರತಂದ ಶಿಕ್ಷಕ ಶೇಕ್ಷಾವಲಿ ಮಣಿಗಾರ ರಚಿತ ಕೇರಿ ಮುಟ್ಟಿದ ಮಾವು ಕಾದಂಬರಿಯನ್ನು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಭಾನುವಾರ ಬಿಡುಗಡೆ ಮಾಡಿದರು. ಗಜಲ್ ಕವಿ ಅಲ್ಲಾಗಿರಿರಾಜ ಕಾದಂಬರಿ ಕುರಿತು ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯ ಮಂಜಮ್ಮ ಜೋಗತಿ ಉದ್ಘಾಟಿಸಿದರು. ಕೆ.ಅಬ್ದುಲ್ ಗನಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಶೇಕ್ಷಾವತಿ, ಶಿಕ್ಷಕರ ಸಂಘದ ಸಂಡೂರು ತಾಲೂಕು ಅಧ್ಯಕ್ಷೆ ಎಂ.ಆರ್.ಸುಮನ್, ರಹೀಮಾಬಿ, ಇಮಾಮ್‌ಸಾಬ್, ಸೈಫ್ ಜಾನ್ಸೆ ಇತರರು ಇದ್ದರು. ಉಪನ್ಯಾಸಕ ಇಮಾಮ್ ಸಾಹೇಬ್ ನಿರೂಪಿಸಿದರು.