ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆಯನ್ನು ನೀಡಿದೆ.
ಎಂದಿನಂತೆ ಕಿಚ್ಚ ಸುದೀಪ್ ತಮ್ಮ ಸ್ಟೈಲಿಷ್ ಲುಕ್ನಲ್ಲಿ ಮುಂಚಿದ್ದಾರೆ. ಹ್ಯಾಟ್ ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೈಯಲ್ಲಿ ಸಿಗರೇಟ್ ಹಿಡಿದಿರುವ ಕಿಚ್ಚನ ಹೊಸ ಲುಕ್ ಅಭಿಮಾನಿಗಳಲ್ಲಿ ಸಂಕ್ರಾಂತಿ ಕಿಚ್ಚು ಹಚ್ಚಿದೆ. ವಿಶೇಷವಾಗಿ ಸಿಗರೇಟ್ ಹೊಗೆಯಲ್ಲಿ ವಿಲನ್ಗಳು ತೂರಿ ಹೋಗುತ್ತಿರುವ ದೃಶ್ಯ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿಸಿದೆ. ಅದರಲ್ಲೂ ಅರ್ಜುನ್ ಜನ್ಯ ನೀಡಿರುವ ಬಿಜಿಎಂ ಅಭಿಮಾನಿಗಳನ್ನು ಎದ್ದೆದ್ದು ಕುಣಿಯುವಂತೆ ಮಾಡುತ್ತದೆ.
ಚಿತ್ರದ ಆರಂಭದಲ್ಲಿನ ಟೀಸರ್ ಬಿಟ್ಟರೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಫೋಟೋ ಅಥವಾ ವಿಡಿಯೋವನ್ನು ಈವರೆಗೂ ಬಿಟ್ಟಿರಲಿಲ್ಲ. ಆದಗ್ಯೂ ಚಿತ್ರದ ಶೂಟಿಂಗ್ ಫೋಟೋಗಳಷ್ಟೇ ಕೆಲವೊಮ್ಮೆ ಬಹಿರಂಗವಾಗಿತ್ತು. ಹೀಗಾಗಿ ಮೋಷನ್ ಪೋಸ್ಟರ್ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿಲ್ಲ ಎಂಬುದಕ್ಕೆ ಯೂಟ್ಯೂಬ್ನಲ್ಲಿ ವೀಕ್ಷಣೆಯಾಗಿರುವ ಸಂಖ್ಯೆಯೇ ಹೇಳುತ್ತಿದೆ. ಬಿಡುಗಡೆಯಾದ ಅರ್ಧ ಗಂಟೆಯಲ್ಲೇ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗುತ್ತಿದೆ.
ಅಂದಹಾಗೆ ‘ಕೋಟಿಗೊಬ್ಬ 3’ ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡಿದ್ದು, ‘ರಾಮ್ಬಾಬು ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸುದೀಪ್ ಜತೆ ಮಡೊನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ ಹಾಗೂ ನವಾಬ್ ಷಾ ಮುಂತಾದವರು ಅಭಿನಯಿಸಿದ್ದಾರೆ.