ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

ಉಡುಪಿ: ತುಳಸಿಯಲ್ಲಿ ಲಕ್ಷ್ಮೀ ಸನ್ನಿಧಾನವಿದೆ. ದೇಶದಲ್ಲಿ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು, ಕಾಶ್ಮೀರ ಸಮಸ್ಯೆ ನಿವಾರಣೆಯಾಗಲು ಕೃಷ್ಣನಿಗೆ ನಿತ್ಯ ಲಕ್ಷ ತುಳಸಿ ಅರ್ಚನೆ ನೆರವೇರಿಸಿದ್ದೂ ಕಾರಣ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶಿಸಿದರು.

ಪರ್ಯಾಯ ಪಲಿಮಾರು ಮಠ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ಕೃಷ್ಣ ಮಠ, ರಾಜಾಂಗಣದಲ್ಲಿ ನಡೆದ ಕೋಟಿ ತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ದೇವರು ದೇಶಕ್ಕೆ ‘ತಲೆ’ ನೀಡಿದ್ದಾನೆ. ಪಿಒಕೆಯೂ ಆದಷ್ಟು ಬೇಗ ಭಾರತದೊಂದಿಗೆ ವಿಲೀನವಾಗಲಿ. ಲಕ್ಷ್ಮಿಯ ಮೂಲಕ ಯಾವುದೇ ವಸ್ತುವನ್ನು ನೀಡಿದರೂ ದೇವರು ಬೇಗ ಸ್ವೀಕಾರ ಮಾಡುತ್ತಾನೆ. ಹೀಗಾಗಿ ದಾನ ಮಾಡುವಾಗ ತುಳಸಿ ದಳವನ್ನೂ ಜತೆಯಲ್ಲಿ ಇರಿಸುತ್ತೇವೆ ಎಂದರು.

ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
೨.೫ ಸಾವಿರ ಮಂದಿ ೪ ಬಾರಿ ವಿಷ್ಣುಸಹಸ್ರನಾಮ ಹೇಳಿದರು. ೧ ಕೋಟಿ ತುಳಸಿ ಅರ್ಚನೆ ಮಾಡಲಾಯಿತು. ಕೃಷ್ಣ ದೇವರಿಗೆ ಮತ್ತು ರಾಜಾಂಗಣದಲ್ಲಿ ಕೃಷ್ಣ ಪ್ರತಿಮೆಗೆ ಏಕಕಾಲದಲ್ಲಿ ಅರ್ಚನೆ ಮಾಡಲಾಯಿತು. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯ, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯ, ಕೃಷ್ಣ ಮಠದ ಪಿಆರ್‌ಒ ಶ್ರೀಶ ಭಟ್, ಶ್ರೀಗಳ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ ಉಪಸ್ಥಿತರಿದ್ದರು.

ಮಹಾಭಾರತ ಎಲ್ಲ ಶಾಸ್ತ್ರಗಳ ಸಾರ. ಇದರ ಸಾರ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ. ಒಂದು ನೇರ ಭಗವಂತನ ಗೀತೆಯಾಗಿದ್ದರೆ, ಇನ್ನೊಂದು ಭಕ್ತನ ಗೀತೆ. ವಿಷ್ಣು ಸಹಸ್ರನಾಮದ ಶಕ್ತಿ ಅಪಾರ. ಇಲ್ಲಿನ ಒಂದೊಂದು ನಾಮಕ್ಕೂ ನೂರು ಅರ್ಥಗಳಿವೆ. ಇದರ ಪಠಣದಿಂದ ದೇಶಕ್ಕೆ, ಜಗತ್ತಿಗೆ ಕಲ್ಯಾಣವಾಗಲಿ.
– ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ

Leave a Reply

Your email address will not be published. Required fields are marked *