ನೆಮ್ಮದಿಯಿಂದಿರಿ ಕೆಲ್ಸ ಮಾಡಿ ಕೊಡ್ತೇವೆ: ಸಚಿವ ಕೋಟ

ವಿಜಯವಾಣಿ ಮಂಗಳೂರು ಕಚೇರಿಯಲ್ಲಿ ಸೆ.14ರಂದು ಏರ್ಪಡಿಸಿದ್ದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಅವರೊಂದಿಗೆ ನಡೆಸಿದ ಫೋನ್‌ಇನ್‌ಗೆ ಹಲವಾರು ಕರೆಗಳು ಬಂದವು. ಡೀಮ್ಡ್ ಫಾರೆಸ್ಟ್, ಮರಳು ಸಮಸ್ಯೆ, ದೇವಸ್ಥಾನಗಳ ಸಮಿತಿ, ಮೀನುಗಾರ ಮಹಿಳೆಯರ ಸಾಲಮನ್ನಾ, ಅಡಕೆ ಕೊಳೆರೋಗ, ಬುಲ್‌ಟ್ರಾಲ್ ಫಿಶಿಂಗ್ ಇತ್ಯಾದಿ ವಿಷಯಗಳ ಬಗ್ಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಮೂಲೆಗಳಿಂದ ಕರೆಗಳು ಬಂದಿದ್ದವು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು ವಿಜಯವಾಣಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದರು.

* ಮರಳು ಕೊರತೆ ತುಂಬ ಸಮಸ್ಯೆ ಸೃಷ್ಟಿಸಿದೆ. ಉದ್ಯೋಗಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶ್ವನಾಥ ಗುಜ್ಜಾಡಿ (ಗಂಗೊಳ್ಳಿ), ಭೋಜ ಉಡುಪಿ
*ವಾರದಲ್ಲಿ ಮರಳು ಕೊರತೆ ಸಮಸ್ಯೆ ಇತ್ಯರ್ಥಗೊಳ್ಳಲಿದೆ. ಏಳು ಮಂದಿ ಸದಸ್ಯರ ಸಮಿತಿ ಪುನರ್ ರಚಿಸಲಾಗಿದೆ. ಸೆ.23ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಉಡುಪಿ ಜಿಲ್ಲೆಯಿಂದ ಅರ್ಜಿ ಸಲ್ಲಿಸಿರುವ ಎಲ್ಲ 171 ಜನರಿಗೆ ಪರವಾನಗಿ ಒದಗಿಸಲಾಗುವುದು. ಹಸಿರು ಪೀಠದ ತಡೆಯಾಜ್ಞೆ, ಕೆಲವು ಸುತ್ತೋಲೆಗಳಿಂದ ಎರಡು ವರ್ಷಗಳಿಂದ ಮರಳು ಪೂರೈಕೆ ವಿಷಯದಲ್ಲಿ ಕೆಲವು ಗೊಂದಲಗಳು ಉಂಟಾಗಿತ್ತು.

* ವಾರಾಹಿ ಕಾಲುವೆ ತೀರದ ರಸ್ತೆಗಳು ಬಳಕೆಗೆ ಯೋಗ್ಯವಾಗಿಲ್ಲ. ಕಾಲುವೆ ದಂಡೆಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ವಾಹನ ಚಾಲನೆ ಸಾಧ್ಯವಾಗುತ್ತಿಲ್ಲ.
ವಿನಾಯಕ, ಶಂಕರನಾರಾಯಣ
* ಸೆ.20ರಂದು ಬೆಳಗ್ಗೆ 9 ಗಂಟೆಗೆ ಊರಿನ ಗೃಹ ಕಚೇರಿಯಲ್ಲಿ ಇರುತ್ತೇನೆ. ಖುದ್ದಾಗಿ ಭೇಟಿಯಾಗಿ. ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

* ನಮ್ಮದು ಖಾಸಗಿ ದೇವಸ್ಥಾನ. ಅಭಿವೃದ್ಧಿಪಡಿಸಲು ಸರ್ಕಾರದ ಸಹಕಾರ ಬೇಕು.
ಲಕ್ಷ್ಮಣ, ಪಾಂಡೇಶ್ವರ
ದೇವಸ್ಥಾನ ಸಮಿತಿ ವತಿಯಿಂದ ಅರ್ಜಿ ಸಲ್ಲಿಸಿ. ಪರಿಶೀಲಿಸಲಾಗುವುದು.

* ಇ-ತಂತ್ರಾಂಶದಲ್ಲಿ ದೀರ್ಘಕಾಲದಿಂದ ದೋಷ ಮುಂದುವರಿದಿರುವ ಕಾರಣ ಡಿ.ಸಿ. ಕನ್ವರ್ಶನ್ ತುಂಬ ಸಮಸ್ಯೆಯಾಗಿದೆ.
ಸತೀಶ್ ಮಂಗಳೂರು
* ಸೆ.18ರಂದು ನಾನು ಬೆಂಗಳೂರಿಗೆ ತೆರಳಿದ ಸಂದರ್ಭ ಪರಿಸ್ಥಿತಿ ಏನು ಎಂದು ತಿಳಿದು ಪರಿಹಾರ ಕಂಡುಕೊಳ್ಳಲಾಗುವುದು.

* ವಾಹನಗಳ ತಪಾಸಣೆ ಸಂದರ್ಭ ಒರಿಜಿನಲ್ ದಾಖಲೆಗಳು ಇಲ್ಲದ ವಾಹನ ಸವಾರರ ಮೇಲೆ ಕೇಸು ದಾಖಲಿಸಿಕೊಳ್ಳಲಾಗುತ್ತಿದೆ. ಇದರಿಂದ ಮಂಗಳೂರು ಕೊಟ್ಟಾರ ಚೌಕಿ ಮೇಲ್ಸೇತುವೆ ಅಡಿಭಾಗದಲ್ಲಿ ದಿನಂಪ್ರತಿ ಟ್ರಾಫಿಕ್ ಜಾಮ್ ಆಗುತ್ತಿದೆ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ನಗರದಲ್ಲಿ ಹೆಚ್ಚುವರಿ ಶೌಚಗೃಹಗಳು ಬೇಕು.
ಯು.ರಾಮರಾವ್, ನಿವೃತ್ತ ಬ್ಯಾಂಕ್ ಅಧಿಕಾರಿ.
* ಸೆ.16ರಂದು ಮಧ್ಯಾಹ್ನ 2ರಿಂದ ಸಾಯಂಕಾಲ 5ರ ತನಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುತ್ತೇನೆ. ಬಂದು ಭೇಟಿಯಾಗಿ. ಸಂಬಂಧಿತ ಅಧಿಕಾರಿಗಳ ಸಮಕ್ಷಮದಲ್ಲೇ ಸಮಸ್ಯೆ ಇತ್ಯರ್ಥಪಡಿಸೋಣ.

* ಮೀನುಗಾರ ಮಹಿಳೆಯರ ಸಾಲಮನ್ನಾ ಕುರಿತು ಸರ್ಕಾರ ಘೋಷಣೆ ಮಾಡಿದ್ದರೂ ನಮ್ಮಲ್ಲಿ ಬ್ಯಾಂಕ್ ಅಧಿಕಾರಿಗಳು ಸಾಲ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ.
ರವೀಂದ್ರ ತಿಂಗಳಾಯ, ಉಡುಪಿ.
* 2017- 18 ಮತ್ತು 2018- 19ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮೀನುಗಾರ ಮಹಿಳೆಯರು ಪಡೆದ 50 ಸಾವಿರ ರೂ. ಒಳಗಿನ ರಾಜ್ಯದ 23 ಸಾವಿರ ಜನರ ಒಟ್ಟು 63 ಕೋಟಿ ರೂ. ಸಾಲಮನ್ನಾ ಮಾಡಿ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಈ ಬಗ್ಗೆ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಫಲಾನುಭವಿಗಳ ಪಟ್ಟಿ ಕೇಳಲಾಗಿದೆ. ಕೆಲವರಷ್ಟೇ ಒದಗಿಸಿದ್ದಾರೆ. ಸೆ.16ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಲಿಖಿತ ನಿರ್ದೇಶನ ನೀಡಲಾಗುವುದು.

* ಕುಂದಾಪುರ ತಾಲೂಕಿನ ಎಸ್‌ಪುತ್ತೂರು ಗ್ರಾಮದಲ್ಲಿ ಸುಮಾರು 1.2 ಕಿ.ಮೀ ರಸ್ತೆ ಅತ್ಯಂತ ದುಃಸ್ಥಿತಿಯಲ್ಲಿದೆ. ಶಾಸಕರಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ದಿನಕರ ಕುಂದಾಪುರ
* ಒಂದು ಅರ್ಜಿ ನನಗೆ ಕೊಡಿ. ಯಾವುದಾದರೂ ಯೋಜನೆಯಲ್ಲಿ ಸೇರಿಸೋಣ.

* ಸುಳ್ಯ ನಾಗಬ್ರಹ್ಮ ದೇವಸ್ಥಾನ ಅಭಿವೃದ್ಧಿಗೆ ಅನುದಾನ ಒದಗಿಸಿದರೆ ಅನುಕೂಲವಾಗುತ್ತದೆ.
ಗಂಗಾಧರ, ಸುಳ್ಯ
* ಅರ್ಜಿ ಸಲ್ಲಿಸಿ.

* ಕುಂದಾಪುರ ಬೇಳೂರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಒಂಬತ್ತು ಎಕರೆ ಜಾಗದಲ್ಲಿ ಬಹುಭಾಗ ಅತಿಕ್ರಮಣವಾಗಿದೆ. ದೇವಸ್ಥಾನದ ಪೂರ್ಣ ಜಾಗ ಉಳಿಸಿಕೊಡಿ.
ಬೇಳೂರು ಗ್ರಾಮ ನಿವಾಸಿ.
* ಹೌದು, ಈ ಬಗ್ಗೆ ಬೇರೆ ದೂರುಗಳು ಕೂಡ ಬಂದಿವೆ. ದೇವಸ್ಥಾನದ ಜಾಗ ಸರ್ವೇ ಮಾಡಿ ವರದಿ ನೀಡುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ.

* ಪೆರಂಪಳ್ಳಿಯಲ್ಲಿ ಕಾಂಕ್ರೀಟ್ ಸೇತುವೆ ಬೇಕು.
ಮಹೇಂದ್ರ ಸಾಲಿಗ್ರಾಮ.
* ಸ್ವಲ್ಪ ಕಾಲಾವಕಾಶ ಕೊಡಿ.

* ನಾವು ಉಡುಪಿಯ ಹಾರಾಡಿ ಗ್ರಾಮ ಪಂಚಾಯಿತಿಯಲ್ಲಿ ಇರುವ ವಲಸೆ ಕಾರ್ಮಿಕರು. ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೀನುಗಾರಿಕೆ ಮಾಡಲು, ಮೂಲಸೌಕರ್ಯ ಪಡೆಯಲು ಕಷ್ಟವಾಗಿದೆ.
ಸಂಗಪ್ಪ, ಹಾರಾಡಿ.
* ಗುರುತಿನ ಚೀಟಿ ಹೊಂದಿದ್ದರೆ ಮೀನುಗಾರಿಕೆ ನಡೆಸಲು ಸಮಸ್ಯೆ ಇಲ್ಲ. ಗುರುತಿನ ಚೀಟಿ ಪಡೆಯಲು ಕಷ್ಟವಿದ್ದರೆ ಸಂಪರ್ಕಸಿ. ವಾಸ ಮಾಡುವ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃಧ್ಧಿಗೆ ಕ್ರಮ ಕೈಗೊಳ್ಳಲಾಗುವುದು.

* ಮುಜರಾಯಿ ಇಲಾಖೆಯಲ್ಲಿ ಹಿಂದು ಹೊರತುಪಡಿಸಿದ ಧಾರ್ಮಿಕ ಕೇಂದ್ರಗಳಿಗೆ ಯಾಕೆ ನೆರವು ದೊರೆಯುತ್ತಿಲ್ಲ?
ಮಂಜುನಾಥ, ಕಕ್ಕೆಪದವು ಬಂಟ್ವಾಳ
* ಮುಸ್ಲಿಮರು ವಕ್ಫ್ ಬೋರ್ಡ್, ಕ್ರಿಶ್ಚಿಯನರು ಕ್ರಿಶ್ಚಿಯನ್ ಮಂಡಳಿ ಮೂಲಕ ತಮ್ಮ ಧಾರ್ಮಿಕ ಕೇಂದ್ರಗಳಿಗೆ ಅಗತ್ಯ ಅನುದಾನ ಪಡೆಯಬಹುದು.

* ಋಣ ಮುಕ್ತ ಕಾಯ್ದೆ ಏನಾಯಿತು.
ದಿನೇಶ್ ಪೈ, ಕಾರ್ಕಳ
ಕಾಯ್ದೆಗೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂಬ ಮಾಹಿತಿ ಇದೆ. ಎರಡು ದಿನ ಬಳಿಕ ಈ ಬಗ್ಗೆ ನಿಖರ ಹೇಳಿಕೆ ನೀಡುತ್ತೇನೆ.

* ಗ್ರಾಮ ಪಂಚಾಯಿತಿಗಳ ಗ್ರಂಥಾಲಯದ ಅವಧಿ ಕಡಿತಗೊಂಡಿದೆ.
ಬಾಬುರಾಮ್ ಪಾಟೀಲ್, ಧಾರವಾಡ ಜಿಲ್ಲೆ.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಅವಧಿ ದಿನಂಪ್ರತಿ ಎಂಟು ಗಂಟೆ ಎನ್ನುವುದು ಹಳೇ ನಿಯಮ. ಆದರೆ ವೇತನ ಪರಿಷ್ಕರಣೆ ಸಂಬಂಧಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಇಲಾಖೆ ನಡುವಿನ ತರ್ಕದಿಂದ ಕೆಲಸದ ಅವಧಿಯನ್ನು ನಾಲ್ಕು ಗಂಟೆಗೆ ಇಳಿಸಲಾಗಿತ್ತು. ಪ್ರಸಕ್ತ ಗ್ರಂಥಪಾಲಕರ ವೇತನ 7,000 ರೂ.ನಿಂದ 13,200 ರೂ.ಗೆ ಏರಿಸಲು ಸರ್ಕಾರದ ಹಣಕಾಸು ವಿಭಾಗ ಅನುಮೋದನೆ ನೀಡಿದ್ದು, ಆದೇಶ ಹೊರಬಿದ್ದ ಕೂಡಲೇ ಗ್ರಂಥಾಲಯದ ಅವಧಿ ಮತ್ತೆ ಎಂಟು ಗಂಟೆಗೆ ವಿಸ್ತರಣೆಗೊಳ್ಳಲಿದೆ.

* ಗ್ರಾಮೀಣ ಪ್ರದೇಶದ ಕೆಲವು ದೇವಸ್ಥಾನಗಳಲ್ಲಿ ಮೂಲಸೌಕರ್ಯಗಳಿಲ್ಲ.
ಗಣೇಶ ಶೇಡಿಮನೆ
* ಕಳೆದ ಬಾರಿ 950 ದೇವಸ್ಥಾನಗಳಿಗೆ 20 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ ಮತ್ತೆ ಅವಕಾಶ ದೊರೆತಿದೆ. ಅರ್ಜಿ ಸಲ್ಲಿಸಿ. ಭಾಗಶಃ ಸರ್ಕಾರ ಒದಗಿಸುತ್ತದೆ. ಉಳಿದದ್ದು ಸಾರ್ವಜನಿಕರು ದೇಣಿಗೆ ಮೂಲಕ ಸಂಗ್ರಹಿಸಬೇಕು.

* ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧದಿಂದ ನಮಗೆ ಜೀವನ ನಿರ್ವಹಣೆ ಸಮಸ್ಯೆಯಾಗಿದೆ.
ಕೃಷ್ಣ ಮಲ್ಪೆ
* ಬುಲ್‌ಟ್ರಾಲ್ ಮತ್ತು ಲೈಟ್ ಫಿಶಿಂಗ್ ಪರ ಮತ್ತು ವಿರುದ್ದ ಸಾಕಷ್ಟು ಚರ್ಚೆಗಳು ನಡೆದಿವೆ. ಎಂಟು ದಿನ ಬಳಿಕ ಇನ್ನೊಮ್ಮೆ ಚರ್ಚೆ ನಡೆಸಲಿದ್ದೇವೆ. ಸದ್ಯ ಅವಕಾಶ ಒದಗಿಸಲು ಕಾನೂನಿನ ತೊಡಕುಗಳಿವೆ. ದಯವಿಟ್ಟು ಸಹಕಾರ ಕೊಡಿ. ರಾಜ್ಯದ ಸುಮಾರು 3.50 ಲಕ್ಷದಷ್ಟು ಮೀನುಗಾರರನ್ನು ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ತಂದು ಅವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾವ ಸರ್ಕಾರದ ಮುಂದಿದೆ.

* ಬೀಡಿ ಕಾರ್ಮಿಕರು, ಅಲ್ಪಸಂಖ್ಯಾತರಿಗೆ ಒದಗಿಸುವ ರೀತಿ ಮೀನುಗಾರರ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ಒದಗಿಸಿಕೊಡಿ.
ರಂಜಿತ್ ಕುಮಾರ್ ಕೋಟ
* ಖಂಡಿತ ಪರಿಶೀಲನೆ ಮಾಡೋಣ.

* ಟೋಲ್ ಪಾವತಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಪೂರ್ಣ ಹೊಂಡಗಳಿಂದ ಕೂಡಿದೆ. ಸಂಚಾರ ಕಷ್ಟವಾಗಿದೆ.
ಸದಾಶಿವ ಶೆಟ್ಟಿ ಬ್ರಹ್ಮಾವರ
* ವಿಪರೀತ ಮಳೆಗೆ ರಸ್ತೆಗಳು ಹಾಳಾಗುತ್ತಿವೆ. ಸೋಮವಾರ ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಸಮಾಲೋಚನೆ ಮಾಡಲಿದ್ದೇನೆ.

* ಮುಲ್ಲರಪಟ್ಣ ಸೇತುವೆ ಕುಸಿದು ಒಂದೂವರೆ ವರ್ಷವಾಯಿತು. ಹಿಂದೆ ಬರುತ್ತಿದ್ದ ಬಸ್ ನಿಂತು ಸಮಸ್ಯೆಯಾಗಿದೆ.
ಪ್ರವೀಣ್ ಬಂಟ್ವಾಳ
* ಸರ್ಕಾರಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಮಾಡಬಹುದು.

* ಕಲ್ಲಡ್ಕ- ಪಾಣೆಮಂಗಳೂರು ರಸ್ತೆ ಪೂರ್ಣ ಕೆಟ್ಟುಹೋಗಿದೆ.
ಕವಿತಾ ಬಂಟ್ವಾಳ
* ಗಮನ ಹರಿಸಲಾಗುವುದು.

* ಹವಾಮಾನ ವೈಪರಿತ್ಯದಿಂದ ಮತ್ತೆ ಅಡಕೆಗೆ ಕೊಳೆರೋಗ ಬಾಧೆ ಜಾಸ್ತಿಯಾಗಿದೆ. ಕಾಳುಮೆಣಸು ದರ ಕ್ವಿಂಟಾಲ್‌ಗೆ ಕಳೆದ ವರ್ಷ 700 ರೂ. ಇದ್ದ ದರ ಈ ವರ್ಷ 270 ರೂ.ಗೆ ತಲುಪಿದೆ.
ಸಂದೇಶ ಬಂಟ್ವಾಳ
* ಅಗತ್ಯವಿದ್ದರೆ ಕೊಳೆರೋಗ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚಿಸುತ್ತೇನೆ. ಕಾಳುಮೆಣಸಿಗೆ ಬೆಂಬಲ ಬೆಲೆ ನೀಡುವ ವಿಷಯದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚಿಸಿ ಸರ್ಕಾರ ತೀರ್ಮಾನಿಸಲಾಗುವುದು.

* ಬಿ.ಸಿ.ರೋಡ್- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಯಾವಾಗ ಇತ್ಯರ್ಥಗೊಳ್ಳುತ್ತದೆ?
ರಾಧಾಕೃಷ್ಣ, ಸುಳ್ಯ
* ಎಲ್ ಆ್ಯಂಡ್ ಟಿ ಕಂಪನಿಗೆ ಇರುವ ಟೆಂಡರ್ ಈ ತಿಂಗಳ ಅಂತ್ಯಕ್ಕೆ ಮುಗಿಯುತ್ತದೆ. ಆದರೆ ಶೇ.30 ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಕಾರಿಡಾರು ನಿರ್ಮಿಸಲು ನಿರ್ಣಯ ಕೈಗೊಂಡ ಕಾರಣ ಯೋಜನೆಗೆ ಹಿನ್ನೆಡೆಯಾಗಿದೆ. ಮೊದಲು ರಸ್ತೆ ಸರಿ ಮಾಡಿಕೊಳ್ಳುವಂತೆ ಕೇಂದ್ರ ಸೂಚಿಸಿದೆ. ಈಗ ಇರುವ ಕಂಪನಿಗೆ ಟೆಂಡರ್ ಮುಂದುವರಿಸಬೇಕೆ ಬೇಡವೇ ಎಂದು ಸರ್ಕಾರ ತೀರ್ಮಾನಿಸುತ್ತದೆ.

* ಗ್ರಾಮ ಪಂಚಾಯಿತಿಗಳಲ್ಲಿರುವ ಬಾಪೂಜಿ ಕೇಂದ್ರಗಳ ಸೇವೆಯು ಕೆಲವು ವಿಷಯಗಳಿಗೆ ಸೀಮಿತವಾಗಿವೆ.
ಜಯರಾಮ ಶಿಬಾಜೆ ಗ್ರಾಮ, ಬೆಳ್ತಂಗಡಿ
ಪಕ್ಕದ ಕೇರಳದಲ್ಲಿ ಜನನ, ಮರಣ ಪ್ರಮಾಣಪತ್ರ, ಮದುವೆ ನೋಂದಣಿ ಸಹಿತ ವಿವಿಧ ಸೌಲಭ್ಯಗಳನ್ನು ಗ್ರಾಪಂಗಳಲ್ಲೇ ಒದಗಿಸಲಾಗುತ್ತಿದೆ. ನಮ್ಮಲ್ಲಿ ಕೂಡ 100 ಸೇವೆಗಳನ್ನು ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಸಿಬ್ಬಂದಿ ಕೊರತೆ ಇರುವ ಕಡೆ ಸ್ವಲ್ಪ ಸಮಸ್ಯೆಯಾಗಿದೆ. ಸೇ.75ಕ್ಕಿಂತ ಅಧಿಕ ತೆರಿಗೆ ಪಾವತಿ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಸೌಲಭ್ಯ ದುರುಪಯೋಗ ಕಂಡು ಬಂದ ಕಾರಣ ಸ್ವಲ್ಪ ತಡೆ ಹಿಡಿಯಲಾಗಿತ್ತು. ದೂರುಗಳು ಇಲ್ಲದೆ ಇರುವ ಜಿಲ್ಲೆಗಳಲ್ಲಿ ಸೌಲಭ್ಯ ಮುಂದುವರಿಸಲು ನಿರ್ಣಯಿಸಲಾಗಿದೆ.

ಡೀಮ್ಡ್ ಫಾರೆಸ್ಟ್ ಗುರುತಿಸುವ ಸರ್ವೇ
ಅರಣ್ಯ, ಗಣಿ ಮತ್ತು ಭೂವಿಜ್ಞಾನ ಮತ್ತು ಕಂದಾಯ ಇಲಾಖೆಗಳು ಒಂದೂವರೆ ತಿಂಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಅರಣ್ಯ ಚಹರೆ ಇಲ್ಲದ ಡೀಮ್ಡ್ ಫಾರೆಸ್ಟ್ ಪ್ರದೇಶ ಗುರುತಿಸುವ ಕಾರ್ಯ ಪೂರ್ಣಗೊಳಿಸಲಿದೆ. ಬಳಿಕ ಡೀಮ್ಡ್ ಫಾರೆಸ್ಟ್ ಲಕ್ಷಣ ಇಲ್ಲದ ಪ್ರದೇಶಗಳನ್ನು ಕೈಬಿಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಗಂಗೊಳ್ಳಿಯ ಗುಜ್ಜಾಡಿ ವಿಶ್ವನಾಥ, ಬಜಗೋಳಿಯ ಜಯಂತ್, ಬ್ರಹ್ಮಾವರದ ನಯನ್, ಕುಂದಾಪುರ ಮಳವಳ್ಳಿ ಗ್ರಾಮದ ಆಶಾ ನಿತ್ಯಾನಂದ, ಜಯರಾಮ ಶೆಟ್ಟಿ ಉಡುಪಿ ಡೀಮ್ಡ್ ಫಾರೆಸ್ಟ್ ಸಂಬಂಧಿಸಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಸಮೀಕ್ಷೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ 20 ಸೆಂ.ಮೀ. ಹೆಚ್ಚು ದಪ್ಪವಿಲ್ಲದ 18ಕ್ಕಿಂತ ಕಡಿಮೆ ಮರಗಳಿರುವ ಪ್ರದೇಶವನ್ನು ಡೀಮ್ಡ್ ಪ್ರದೇಶ ವ್ಯಾಪ್ತಿಯಿಂದ ಕೈಬಿಡಲಾಗುವುದು. ಡೀಮ್ಡ್ ಪ್ರದೇಶ ವ್ಯಾಪ್ತಿಯಲ್ಲಿ ಒಳಗೊಂಡಿರುವ ಉಡುಪಿ ಜಿಲ್ಲೆಯ 34,000 ಹೆಕ್ಟೇರ್ ಪ್ರದೇಶದ ಲಕ್ಷೃ ಹೊಂದಿಲ್ಲವೆಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ರಾಜ್ಯ ಸರ್ಕಾರ ವಸ್ತುಸ್ಥಿತಿ ಕುರಿತು ಸುಪ್ರೀಂಕೋರ್ಟ್‌ಗೆ ಅಫಿಡವಿತ್ ಸಲ್ಲಿಸಿದ್ದು, ತೀರ್ಮಾನ ಬಾಕಿ ಇದೆ ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆ (ಮಂಗಳೂರು) ಉಪನಿರ್ದೇಶಕ ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿ ಸುಶ್ಮಿತಾ ರಾವ್, ದೋಣಿ ಮತ್ತು ಸಲಕರಣೆ ವಿಭಾಗದ ಸಹಾಯಕ ನಿರ್ದೇಶಕಿ ಕವಿತಾ ಉಪಸ್ಥಿತರಿದ್ದರು.

ನಿಮ್ಮ ಕಾಳಜಿ ಅರ್ಥವಾಗುತ್ತೆ ಕವಿತಕ್ಕ…
ಕಲ್ಲಡ್ಕ-ಪಾಣೆಮಂಗಳೂರು ರಸ್ತೆ ತುಂಬ ಕೆಟ್ಟದಾಗಿದೆ. ಸಂಚಾರ ಮಾಡಲು ಸಾಧ್ಯವೇ ಇಲ್ಲ, ಗರ್ಭಿಣಿಯರು ಪ್ರಯಾಣಿಸಲು ಭಾರಿ ಕಷ್ಟ ಎಂದು ಬಂಟ್ವಾಳ ಕಲ್ಲಡ್ಕದ ಕವಿತಾ ಎಂಬುವರು ಅಹವಾಲು ಸಲ್ಲಿಸಿದರು. ಇದಕ್ಕೆ ನಗುನಗುತ್ತ ಉತ್ತರಿಸಿದ ಸಚಿವರು, ಆಯಿತಕ್ಕಾ.. ಕವಿತಕ್ಕಾ.. ಸರಿ ಮಾಡಿಸಿ ಕೊಡೋಣ. ಶಾಸಕರ ಜತೆ ಮಾತನಾಡಿ, ಈ ವರ್ಷದಲ್ಲಿ ಮಾಡಿಕೊಡುತ್ತೇನೆ ಎಂದಾಗ ಕವಿತಾ ಅವರು ವರ್ಷ ಕಾಯಬೇಕೇ ಎಂದು ಅಚ್ಚರಿಪಟ್ಟರು. ಮುಂದುವರಿಸಿದ ಸಚಿವರು, ಕವಿತಕ್ಕ ನಿಮ್ಮ ಕಾಳಜಿ ಅರ್ಥವಾಗುತ್ತದೆ. ವರ್ಷ ಅಂದ್ರೆ ಅದೆಲ್ಲ ವಾರದಲ್ಲಿ ಆಗುವಂಥದ್ದಲ್ಲ. ರಸ್ತೆ ಮಾಡ್ಲಿಕ್ಕೆ ತುಂಬ ನಿಯಮಾವಳಿಗಳಿವೆ. ಹಣ ಮಂಜೂರು ಆಗಬೇಕು, ಎಸ್ಟಿಮೇಟ್ ಮಾಡಬೇಕು, ಟೆಂಡರ್ ಆಗಬೇಕು ಎನ್ನುತ್ತ ನೆಮ್ಮದಿಯಿಂದಿರಿ ರಸ್ತೆ ಸರಿಪಡಿಸ್ತೇವೆ ಎಂದು ನಗುತ್ತಲೇ ಉತ್ತರ ನೀಡಿದರು.

Leave a Reply

Your email address will not be published. Required fields are marked *