ಅವಳಿ ಕೊಲೆ ಮೂವರು ಆರೋಪಿಗಳ ಜಾಮೀನು ಅರ್ಜಿ 19ರಂದು ತೀರ್ಪು

ಕುಂದಾಪುರ: ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತ ಮೂವರ ಜಾಮೀನು ಅರ್ಜಿ ವಜಾ ಮಾಡುವಂತೆ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲಾ ನಾಯಕ್ ಶನಿವಾರ ವಾದ ಮಂಡಿಸಿದ್ದು, ಜೆಎಂಎಫ್ ನ್ಯಾಯಾಲಯ ನ್ಯಾಯಾಧೀಶ ಶ್ರೀಕಾಂತ್ ಫೆ.19ಕ್ಕೆ ತೀರ್ಪು ಕಾದಿರಿಸಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಪವನ್ ಅಮೀನ್, ವೀರೇಂದ್ರ ಆಚಾರ್ಯ ಹಾಗೂ ಪದವಿ ವಿದ್ಯಾರ್ಥಿ ಪ್ರಣವ್ ರಾವ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರವಾಗಿ ವಾದ ಮಂಡಿಸಿದ ಸುಮಂಗಲಾ ನಾಯಕ್, ಕೊಲೆ ನಡೆದ ಕೆಲವೇ ಸಮಯದೊಳಗೆ ಆರೋಪಿಗಳು ಪ್ರಕರಣದ ಇತರ ಆರೋಪಿಗಳಿಗೆ ವಿವಿಧ ರೀತಿ ಸಹಕಾರ ನೀಡಿರುವುದನ್ನು ಗಮನಿಸಿದರೆ, ಸಾಕ್ಷಿನಾಶ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎನ್ನುವ ಆರೋಪಗಳಿಗೆ ಮಾತ್ರ ಇವರು ಸೀಮಿತವಾಗಿಲ್ಲ. ಪ್ರಕರಣದ ಒಳಸಂಚಿನಲ್ಲಿಯೂ ಭಾಗಿಯಾಗಿರುವ ಸಾಧ್ಯತೆಗಳಿವೆ. ಪ್ರಕರಣ ತನಿಖೆ ಹಂತದಲ್ಲಿ ಇದೆ. ಪೂರ್ಣ ಪ್ರಮಾಣದ ತನಿಖೆ ನಡೆದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಬಳಿಕವಷ್ಟೇ ಪ್ರಕರಣದಲ್ಲಿ ಆರೋಪಿತರ ಪಾತ್ರ ಏನು ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಜಾಮೀನು ಅರ್ಜಿ ವಜಾ ಮಾಡುವಂತೆ ಮನವಿ ಮಾಡಿದರು.