ಜಿಪಂ ಸದಸ್ಯ ಸಹಿತ ನಾಲ್ವರ ಬಂಧನ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಸೇರಿದಂತೆ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಆರಕ್ಕೇರಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ತಂಡ ಕೋಟ ಕ್ಷೇತ್ರದ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್(38)ನ್ನು ವಿಚಾರಣೆಗಾಗಿ ಗುರುವಾರ ವಶಕ್ಕೆ ಪಡೆದು ಶುಕ್ರವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಹೊಸನಗರದಲ್ಲಿ ತಲೆಮರೆಸಿಕೊಂಡಿದ್ದ ಕೊಡವೂರು ನಿವಾಸಿ ಮಹೇಶ್ ಗಾಣಿಗ(38), ಕೊಡವೂರು ಲಕ್ಷ್ಮೀ ನಗರ ನಿವಾಸಿ ರವಿಚಂದ್ರ ಪೂಜಾರಿ(28), ಕೋಟ ಮಣೂರು ನಿವಾಸಿ ಹರೀಶ್ ರೆಡ್ಡಿ(40) ಎಂಬುವರನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್.ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ರಾಜಶೇಖರ ರೆಡ್ಡಿ, ಜಿ.ರವಿ ಯಾನೆ ಮೆಡಿಕಲ್ ರವಿ ಅವರನ್ನು ಮಡಿಕೇರಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದರು. ಆರು ಮಂದಿ ಆರೋಪಿಗಳನ್ನು ತನಿಖಾಧಿಕಾರಿಗಳ ತಂಡ ಶುಕ್ರವಾರ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ಫೆ.15ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಆರೋಪಿಗಳೊಂದಿಗೆ ಜಿಪಂ ಸದಸ್ಯ ಸಂಪರ್ಕ: ಕೊಲೆಗೆ ಮುನ್ನ ಜ.23 ಮತ್ತು ಕೊಲೆ ನಡೆದ ಜ.26ರಂದು ರಾತ್ರಿ 11 ಗಂಟೆ ಬಳಿಕ ಆರೋಪಿಗಳು ಜಿಪಂ ಸದಸ್ಯ ರಾಘವೇಂದ್ರ ಕಾಂಚನ್‌ನನ್ನು ಫೋನ್ ಮೂಲಕ ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತಪಡಿಸಿಕೊಂಡ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವೆಂದರೆ ಆರೋಪಿ ರಾಘವೇಂದ್ರ ಕಾಂಚನ್ ಇತ್ತೀಚೆಗೆ ಕೋಟದಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಾತಿ, ರಾಜಕೀಯ, ಗುಂಪುಗಾರಿಕೆ?: ಶೌಚಗೃಹ ಪಿಟ್ ನಿರ್ಮಾಣ ವಿಚಾರದಲ್ಲಿ ಯತೀಶ್ ಕಾಂಚನ್, ಭರತ್ ಶ್ರಿಯಾನ್ ಅವರ ಕೊಲೆ ನಡೆದಿದೆ ಎನ್ನಲಾಗುತ್ತಿದ್ದರೂ, ಪ್ರಕರಣದಲ್ಲಿ ಜಿಪಂ ಸದಸ್ಯ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಮತ್ತು ಆರೋಪಿಗಳ ವಿಚಾರಣೆಯಿಂದ ಜಾತಿ, ರಾಜಕೀಯ, ಗುಂಪುಗಾರಿಕೆ, ಬಡ್ಡಿ ವ್ಯವಹಾರ ಕೊಲೆಗೆ ಕಾರಣವಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಕೊಲೆಗೆ ನಿಖರ ಕಾರಣ ಹೇಳಲು ಸಾಧ್ಯವಿಲ್ಲ, ವಿಚಾರಣೆ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತ ಪಾವಗಡದವರು: ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾಗುತ್ತಿರುವ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ, ಚಂದ್ರಶೇಖರ ರೆಡ್ಡಿಯ ತಂದೆ ಮೂಲತ ತುಮಕೂರು ಜಿಲ್ಲೆ ಪಾವಗಡದವರು. 60 ವರ್ಷದ ಹಿಂದೆ ಮಲ್ಪೆಗೆ ಉದ್ಯೋಗಕ್ಕೆ ಬಂದು, ಉಡುಪಿಯ ಯುವತಿಯನ್ನು ವಿವಾಹವಾಗಿ ಕೋಟದಲ್ಲಿ ನೆಲೆಸಿದರು. ಆರೋಪಿಗಳು ರಿಯಲ್‌ಎಸ್ಟೇಟ್ ಉದ್ಯಮ ಜತೆಗೆ ಬಡ್ಡಿ ವ್ಯವಹಾರವನ್ನೂ ನಡೆಸುತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳ ಬೇಟೆಯಾಡಿದ ತಂಡ: ತನಿಖೆ ಮತ್ತು ಆರೋಪಿಗಳ ಶೋಧಕ್ಕೆ ಡಿವೈಎಸ್‌ಪಿ ಜೈಶಂಕರ್ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿತ್ತು. ಡಿಸಿಐಬಿ ಇನ್ಸ್‌ಪೆಕ್ಟರ್ ಕಿರಣ್, ಬ್ರಹ್ಮಾವರ ಸಿಐ ಶ್ರೀಕಾಂತ್, ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂಪತ್‌ಕುಮಾರ್, ಉಡುಪಿ ಸಿಐ ಮಂಜುನಾಥ್, ಕಾಪು ಸಿಐ ಮಹೇಶ್ ಪ್ರಸಾದ್ ತಂಡ ಆರು ಮಂದಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಶೋಧ ಮತ್ತು ಪ್ರಕರಣದ ಎಲ್ಲ ಆಯಾಮಗಳ ತನಿಖೆ ನಡೆಸುತಿದ್ದಾರೆ.

ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು: ಪ್ರಕರಣದಲ್ಲಿ ಭಾಗಿಯಾದ ಬಹುತೇಕ ಆರೋಪಿಗಳು ರೌಡಿಶೀಟರ್‌ಗಳಾಗಿದ್ದಾರೆ. ಆರೋಪಿ ಹರೀಶ್ ರೆಡ್ಡಿ ವಿರುದ್ದ ಉಡುಪಿ ನಗರಠಾಣೆಯಲ್ಲಿ 2005ರಲ್ಲಿ ಕೊಲೆ ಕೇಸು ದಾಖಲಾಗಿತ್ತು. ಈತನ ಮೇಲೆ 2001ರಿಂದ 7 ವಿವಿಧ ಕ್ರಿಮಿನಲ್ ಕೇಸುಗಳಿವೆ. ಆರೋಪಿ ರಾಜಶೇಖರ ರೆಡ್ಡಿ 1993-2000ವರೆಗೆ ವಿವಿಧ ಪೊಲೀಸ್ ಠಾಣೆಯಲ್ಲಿ 9 ಕೇಸು ದಾಖಲಾಗಿವೆ. ಆರೋಪಿ ಮಹೇಶ್ ಗಾಣಿಗ ವಿರುದ್ದ 2011ರಲ್ಲಿ ಒಂದು ಕೇಸು ದಾಖಲಾಗಿದೆ. ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಕೂಡ ಒಂದು ಕೊಲೆಯತ್ನಕ್ಕೆ ಸಂಬಂಧಿಸಿ ಕೆಲದಿನ ಜೈಲುವಾಸ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಘವೇಂದ್ರ ಕಾಂಚನ್ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿದ್ದು, ಈ ಹಿಂದೆ ಉಡುಪಿ ತಾಲೂಕು ಪಂಚಾಯಿತಿ ಸದಸ್ಯನಾಗಿದ್ದು, 2016ರಲ್ಲಿ ಜಿಪಂ ಸದಸ್ಯನಾಗಿ ಆಯ್ಕೆಯಾಗಿದ್ದ.