ಕೊಲೆ ಆರೋಪಿಗಳ ಬಂಧನಕ್ಕೆ ಗಡುವು

ಕೋಟ: ನನ್ನೂರಿಗೆ ಕಳಂಕ ತಂದ ಈ ಜೋಡಿ ಕೊಲೆ ಪ್ರಕರಣ ಭಾರಿ ನೋವು ತಂದಿದೆ. ಪೊಲೀಸ್ ಇಲಾಖೆ ನ್ಯಾಯಯುತವಾಗಿ ತನಿಖೆ ಕೈಗೊಳ್ಳುತ್ತಿದೆ. ಫೆ.6ರೊಳಗೆ ಆರೋಪಿಗಳನ್ನು ಪತ್ತೆ ಹಚ್ಚದಿದ್ದರೆ ಜಿಲ್ಲೆಯ ಶಾಸಕರ ಜತೆಗೂಡಿ ಮುಖ್ಯಮಂತ್ರಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಹೋರಾಟ ರೂಪಿಸಲಾಗುವುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟ ಮಣೂರಿನಲ್ಲಿ ನಡೆದ ಜೋಡಿ ಕೊಲೆ ಆರೋಪಿಗಳಿಗೆ ಬಂಧನ, ಗಲ್ಲು ಶಿಕ್ಷೆ, ಗಡಿಪಾರು ಆಗ್ರಹಿಸಿ ಕೋಟ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಸ್ಥಳೀಯ ವಿವಿಧ ಸಂಘಟನೆ ಆಶ್ರಯದಲ್ಲಿ ಭಾನುವಾರ ನಡೆದ ಕೋಟ ಬಂದ್ ಸಂದರ್ಭ ಸಂತೆ ಮಾರುಕಟ್ಟೆ ಸರ್ವೀಸ್ ರಸ್ತೆ ಸಮೀಪ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸಭೆಗೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಭರತ್ ಹಾಗೂ ಯತೀಶ್ ಹತ್ಯೆ ಕುರಿತು ನ್ಯಾಯಯುತ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ರೀತಿ ಕೇಸು ದಾಖಲಿಸುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಕೋಟ ಆರಕ್ಷಕ ಠಾಣೆಗೆ ದಕ್ಷ ಪೊಲೀಸ್ ಅಧಿಕಾರಿಯನ್ನು ಶೀಘ್ರ ನೇಮಿಸುತ್ತೇವೆ ಎಂದರು.

ಸಾಮೂಹಿಕ ಪ್ರಾರ್ಥನೆ: ಹತ್ಯೆ ಆರೋಪಿಗಳ ಶೀಘ್ರ ಬಂಧನಕ್ಕೆ ಕೋಟದ ಗ್ರಾಮದೇವತೆ ಅಮೃತೇಶ್ವರಿಯಲ್ಲಿ ಪ್ರಾರ್ಥನೆ ಹಾಗೂ ಸಂಕ್ರಾತಿ ದಿನದಂದು ಉಯಿಲು ನೀಡಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಜಯಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಪ್ರಶಾಂತ್ ಶೆಟ್ಟಿ, ಪ್ರಮುಖರಾದ ಶ್ಯಾಮಸುಂದರ ನಾಯಿರಿ, ವನಿತಾ ಶ್ರೀಧರ ಆಚಾರ್ಯ, ರಘು ತಿಂಗಳಾಯ, ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಮಹೇಶ್ ಕುಮಾರ್, ಧನಂಜಯ ಕೋಟೇಶ್ವರ, ರಾಜೇಶ್ ಸಂಗಮ್, ಐರೋಡಿ ವಿಠಲ್ ಪೂಜಾರಿ, ಲಲಿತಾ ಪೂಜಾರಿ, ರಾಘವೇಂದ್ರ ಕಾಂಚನ್, ಸುಬ್ರಾಯ ಆಚಾರ್ಯ, ನಾಗರಾಜ್ ಐತಾಳ್, ಕೃಷ್ಣಮೂರ್ತಿ ಮರಕಾಲ, ಎಂ.ಎಸ್ ಸಂಜೀವ, ರಮೇಶ್ ಎಚ್.ಕುಂದರ್, ಶಿವರಾಮ್ ಕೆ.ಎಂ., ಜಯಂತ್ ಅಮೀನ್ ಕೋಡಿ, ಗುಲಾಬಿ ದೇವದಾಸ್ ಬಂಗೇರ, ಲಿಯಾಖಾತ್ ಆಲಿ ಮತ್ತಿತರರು ಭಾಗವಹಿಸಿದ್ದರು.

ಮುಚ್ಚಿದ ಅಂಗಡಿ ಮುಂಗಟ್ಟು: ಕೋಟ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಥಳೀಯ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾ ಸಭೆಗೆ ಭಾರಿ ಜನಸಮೂಹ ಹರಿದು ಬಂದಿತ್ತು. ಕೋಟ ಸಂತೆ ಮಾರುಕಟ್ಟೆ ಸರ್ವೀಸ್ ರಸ್ತೆ ಭಾಗ ಜನರಿಂದ ತುಂಬಿ ತುಳುಕುತಿತ್ತು.

10 ನಿಮಿಷದಲ್ಲಿ 48 ಸಾವಿರ ರೂ.ಸಂಗ್ರಹ!: ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ ಗಾಣಿಗ, ಹತ್ಯೆಯಾದ ಇಬ್ಬರ ಮನೆಯವರಿಗೆ ಸಹಾಯಕ್ಕೆಂದು ದೇಣಿಗೆ ಡಬ್ಬಿ ಹಿಡಿದು ಪ್ರತಿಭಟನಾ ನಿರತರಲ್ಲಿ ಹಣ ಸಂಗ್ರಹಿಸಿದರು. ಹತ್ತೇ ನಿಮಿಷದಲ್ಲಿ ಸುಮಾರು 48 ಸಾವಿರ ರೂ. ಹಣ ಸಂಗ್ರಹವಾಯಿತು.