More

    ಭಕ್ತರ ಕೋರಿಕೆ ಈಡೇರಿಸುವ ಕೋರಿಸಿದ್ಧೇಶ್ವರ

    ಜಾಗೃತವಾಗಿರುವ ಕರ್ತೃಗದ್ದುಗೆಯ ಮೂಲಕ ಜಾತ್ಯತೀತ, ಧರ್ವತೀತವಾಗಿ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವುದು ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠ. ಕಲ್ಯಾಣ ಕರ್ನಾಟಕದ ಅತ್ಯಂತ ಜಾಗೃತ ಸ್ಥಾನ ಎನಿಸಿರುವ ಇದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲವಾರದಲ್ಲಿದೆ.

    ಶ್ರೀ ಕೋರಿಸಿದ್ಧೇಶ್ವರರು ಯಾದಗಿರಿ ಜಿಲ್ಲೆಯ ತಿಮ್ಮಾಪುರದಲ್ಲಿ ಜನಿಸಿದವರು. ಕಾಖಂಡಕಿಯ ಮಲ್ಹಾರಾಧ್ಯರಲ್ಲಿ ಶಿಷ್ಯತ್ವ ಸ್ವೀಕರಿಸಿದರು. ಗುರುವಿನ ಆಜ್ಞೆಯಂತೆ ನಾಲವಾರದತ್ತ ಬರುತ್ತಿರುವಾಗ ಜೇವರ್ಗಿ ತಾಲೂಕಿನ ಹೊನ್ನಾಳ ಬಳಿ ಭೀಮೆ ತುಂಬಿ ಹರಿಯುತ್ತಿತ್ತು. ಗುರುವಿನ ಆದೇಶದಂತೆ ನಾಲವಾರದತ್ತ ಹೋಗಲೇಬೇಕಿದ್ದರಿಂದ ತಮ್ಮ ಮೈಮೇಲಿದ್ದ ಕೋರಿ ಕಂಬಳಿಯನ್ನು ತುಂಬಿ ಹರಿಯುತ್ತಿದ್ದ ನದಿಯ ಮೇಲೆ ಹಾಕಿ, ಅದರ ಮೇಲೆ ಕುಳಿತು ದಾಟಿದರು. ಕೋರಿ ಕಂಬಳಿಯನ್ನು ಬಳಸಿ ನದಿ ದಾಟಿದ್ದರಿಂದ ಹಾಗೂ ಭಕ್ತರ ಕೋರಿಕೆಯನ್ನು ಈಡೇರಿಸುತ್ತಿದ್ದುದರಿಂದ ಅವರು ಕೋರಿಸಿದ್ಧೇಶ್ವರ ಎಂದು ಹೆಸರಾದರು.

    ಅವರು ತಮ್ಮ ಆಧ್ಯಾತ್ಮಿಕ ತೇಜಸ್ಸಿನಿಂದ ನಾಲವಾರದ ಹೊರವಲಯದ ಹಾಳುಮಠದಲ್ಲಿದ್ದ ಬ್ರಹ್ಮರಾಕ್ಷಸನನ್ನು ನಿಗ್ರಹಿಸಿ ಅಸುರ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿ ಮಾಡಿದರು. ಈ ಸ್ಥಳಕ್ಕೆ ಬರಲು ಭಯಪಡುತ್ತಿದ್ದ ಜನರು ಗುರುವಿನ ಅಭಯವನ್ನು ಹೊಂದಿ ಸಾಗರದಂತೆ ಹರಿದುಬರತೊಡಗಿದರು.

    ವಿಶಿಷ್ಟ ಆಚರಣೆ ತನುವಿನಾರತಿ: ಭಕ್ತರು ಕೋರಿಸಿದ್ಧೇಶ್ವರ ಕರ್ತೃಗದ್ದುಗೆಯೆದುರು ತಮ್ಮ ಇಷ್ಟಾರ್ಥವನ್ನು ನಿವೇದಿಸಿಕೊಂಡು, ಈಡೇರಿದ ನಂತರ ಕೋರಿಸಿದ್ಧೇಶ್ವರರಿಗೆ ತಮ್ಮ ತನುವನ್ನೇ ಆರತಿ ಮಾಡಿ ಬೆಳಗುವುದರ ದ್ಯೋತಕವಾಗಿ ತನಾರತಿ ಹೊರುವುದು ವಿಶಿಷ್ಟ ಆಚರಣೆ. ಭಕ್ತೆ ನೀಲಮ್ಮತಾಯಿಗೆ ಮಕ್ಕಳಾಗದಿದ್ದಾಗ ತನಾರತಿ ಹೊತ್ತು ಮಲ್ಹಾರಾಧ್ಯರ ಗದ್ದುಗೆಗೆ ಪ್ರದಕ್ಷಿಣೆ ಹಾಕಲು ಕೋರಿಸಿದ್ಧೇಶ್ವರರು ಹೇಳಿದ್ದರು. ಅದರಂತೆ ಮಾಡಿದ ಫಲವಾಗಿ ಮಕ್ಕಳಾದವು. ತಮ್ಮ ಮನೋಭಿಲಾಷೆಗಳು ಪೂರ್ಣಗೊಂಡ ನಂತರ ಭಕ್ತರು ಚಳಿಯಲ್ಲೂ ಮಧ್ಯರಾತ್ರಿ ಮಿಂದು ಗೋಧಿಹಿಟ್ಟಿನ ದೀಪವನ್ನು ತಲೆಉ ಮೇಲೆ ಹೊತ್ತು ಪ್ರದಕ್ಷಿಣೆ ಹಾಕಿ ಹರಕೆ ಪೂರೈಸುತ್ತಾರೆ. ವರ್ಷದ ಮೊದಲ ತನಾರತಿ ಮಹೋತ್ಸವ ಅವರಾತ್ರಿ ಅಮಾವಾಸ್ಯೆಯಂದು ನಡೆಯುತ್ತದೆ. ನಾಲವಾರದಲ್ಲಿ ಅಕ್ಷಯ ತೃತೀಯಾ, ಮಣ್ಣೆತ್ತಿನ ಅಮಾವಾಸ್ಯೆ ಸೇರಿ ಮೂರು ಸಲ ತನಾರತಿ ಸೇವೆ ನಡೆದರೆ, ಗುರುಕ್ಷೇತ್ರ ಕಾಖಂಡಕಿಯಲ್ಲಿ ಎರಡು ಬಾರಿ ತನಾರತಿ ಸೇವೆ ನೆರವೇರುತ್ತದೆ.

    ಜಗದ್ಗುರು ಸಿದ್ಧತೋಟೇಂದ್ರ ಶ್ರೀಗಳು: ಲಿಂ. ತೋಟೇಂದ್ರ ಶಿವಾಚಾರ್ಯರು ತಾವು ಒಂದು ವರ್ಷದ ನಂತರ ಇದೇ ದಿನ ನಾಲವಾರದ ದಂಪತಿ ಗೌರಮ್ಮ-ಗುರುಸಿದ್ಧಯ್ಯನವರ ಮಗನಾಗಿ ಜನಿಸುವುದಾಗಿ 1963ರ ಆಶ್ವಯುಜ ಶುಕ್ಲ ನವಮಿಯಂದು ಹೇಳಿದ್ದರು. ಅದರಂತೆ 1964ರಲ್ಲಿ ಆಶ್ವಯುಜ ಶುಕ್ಲ ನವಮಿಯಂದೇ ಡಾ. ಸಿದ್ಧತೋಟೇಂದ್ರ ಶ್ರೀಗಳು ಜನಿಸಿದರು. 11ನೇ ವಯಸ್ಸಿನಲ್ಲಿ ಪಟ್ಟಾಧಿಕಾರ ಸ್ವೀಕರಿಸಿದರು. ಮಠಾಧೀಶರಾಗಿ ಕೇವಲ ಪೂಜೆ, ಆಶೀರ್ವಾದಕ್ಕೆ ಸೀಮಿತರಾಗದೆ ಸಾಮಾಜಿಕ, ಶೈಕ್ಷಣಿಕ, ಧಾರ್ವಿುಕ, ಸಾಹಿತ್ಯ, ಕಲೆಗಳಿಗೆ ಆಶ್ರಯ ನೀಡುತ್ತಿದ್ದಾರೆ. 34 ವರ್ಷಗಳಿಂದ ಪ್ರತಿ ಅಮಾವಾಸ್ಯೆಯಂದು ಶಿವಾನುಭವ ಚಿಂತನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸೇವೆ ಸಲ್ಲಿಸಿದ ಭಕ್ತರಿಗೆ ಶಿವಾನುಭವ ಚೇತನ ಹಾಗೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸಿದ್ಧತೋಟೇಂದ್ರ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.

    ರೈತರಿಗೆ ಮಾನಸಿಕ ಸ್ಥೈರ್ಯ ತುಂಬಲು 1001 ರೈತರಿಗೆ ರುಮಾಲು ಸುತ್ತುವ, ಪರಿಸರ ಜಾಗೃತಿಗಾಗಿ ವರ್ಷ ಪರ್ಯಂತ ಒಂದು ಲಕ್ಷ ಸಸಿ ವಿತರಿಸುವ, ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಗಳನ್ನು ನಡೆಸಿದ್ದಾರೆ. ಸಾಹಿತಿಯೂ ಆಗಿರುವ ಸ್ವಾಮಿಗಳು ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಮಠದಿಂದ ತನಾರತಿ ತ್ರೈಮಾಸಿಕ ಪತ್ರಿಕೆ ಪ್ರಕಟಿಸುತ್ತಿದ್ದಾರೆ.

    ನುಚ್ಚು ಪ್ರಸಾದ ವಿಶೇಷ

    ಜೋಳದ ನುಚ್ಚಿನ ಪ್ರಸಾದ ಇಲ್ಲಿನ ವಿಶೇಷ. ಈ ಹಿಂದೆ ಭಕ್ತರು ತಮ್ಮ ಕೋರಿಕೆ ಈಡೇರಿದ ನಂತರ ಕರ್ತೃಗದ್ದುಗೆಗೆ ತೆಂಗು, ಸವ್ವಾಸೇರು ಜೋಳದ ನುಚ್ಚು ಅರ್ಪಿಸುತ್ತಿದ್ದರು. ಭಕ್ತರು ತಂದ ನುಚ್ಚಿನ ಅಡುಗೆ ಮಾಡಿ ಪ್ರಸಾದದ ರೂಪದಲ್ಲಿ ನುಚ್ಚು, ಸಾರು ವಿತರಿಸಲಾಗುತ್ತಿತ್ತು.

    | ಕೆ.ರಮೇಶ ಭಟ್ಟ ನಾಲವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts