
ಆನೇಕಲ್: ಭೀಮಾ ಕೋರೇಗಾಂವ್ ಯುದ್ಧ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹಿರಿಯ ದಲಿತಪರ ಹೋರಾಟಗಾರ ಬಿ.ಗೋಪಾಲ್ ತಿಳಿಸಿದರು.
ತಾಲೂಕಿನ ಇಂಡ್ಲವಾಡಿಯಲ್ಲಿ ಜೈಭೀಮ್ ಐಕ್ಯತಾ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ 1818ರ ಭೀಮಾ ಕೋರೇಗಾಂವ್ ಗೌರವಾರ್ಥ ಪಥಸಂಚಲನ, ಧ್ವಜಾರೋಹಣ ಮತ್ತು ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋರೇಗಾಂವ್ ಹೋರಾಟದಲ್ಲಿ ಪಾಲ್ಗೊಂಡು ಜಯಶಾಲಿಯಾಗಲು ಕಾರಣರಾದವರಲ್ಲಿ ಕರ್ನಾಟಕದ ಕೊಡಗಿನ ಯೋಧರ ಪಾತ್ರವು ಇದೆ. ಪೇಶ್ವೆ ಬಾಜಿರಾಯನ ಸಾವಿರಾರು ಸೈನಿಕರ ವಿರುದ್ಧ ಸೈನಿಕ ಸಿದ್ಧನಾಯಕನ ನಾಯಕತ್ವದಲ್ಲಿ ಮಹಾರ್ ಯೋಧರು ಪೇಶ್ವೆರಾಜನನ್ನು ಎದುರಿಸಿ ಗೆದ್ದು ಬಂದ ದಿನವೇ ಇದು ಎಂದು ತಿಳಿಸಿದರು.
ಎನ್‌ಆರ್‌ಸಿ ಕೇವಲ ಮುಸ್ಲಿಮರಿಗೆ ಮಾತ್ರ ಅಲ್ಲ. ಈಡಿಗರು, ಕುರುಬರು ಸೇರಿ ಹಲವಾರು ಜನಾಂಗಗಳಿಗೆ ತೊಂದರೆ ಆಗಲಿದೆ, ಇದನ್ನು ಅರಿತು ಮನೆ ಮನೆಯಿಂದಲೂ ಕೋರೇಗಾಂವ್ ಸೈನಿಕರು ಸಿದ್ಧವಾಗಬೇಕಿದೆ ಎಂದರು.
ವಿಶ್ವದಲ್ಲಿ ಮರೆಯಲು ಸಾಧ್ಯವಾಗದ ಘಟನೆ ಕೋರೇಗಾಂವ್ ಯುದ್ಧ ಎನ್ನುವುದು ಅರಿಯಬೇಕಿದೆ. ನಾವು ಕೂಗುವ ಜೈಭೀಮ್ ಎನ್ನುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲುಪಬೇಕು ಎಂದು ಹೇಳಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಬೆಂಗಳೂರು ಪ್ರದೇಶ ಬಿಟ್ಟು ಹೊರಗಡೆ ನೋಡಿದರೆ ಇಂದಿಗೂ ದಲಿತರ ಮೇಲೆ ಶೋಷಣೆ ಜೀವಂತವಾಗಿವೆ. ಅದಕ್ಕೆ ಸರ್ಕಾರಗಳು ಎಷ್ಟೇ ಕ್ರಮ ಕೈಗೊಂಡರು ಮನುವಾದಿಗಳು ಬಿಡುತ್ತಿಲ್ಲ. ನಾನೇನಾದರೂ ಶಾಸಕನಾಗಿದ್ದೇನೆ ಎಂದರೆ ಅದು ಅಂಬೇಡ್ಕರ್ ಅವರ ಮೀಸಲಾತಿಯಿಂದ ಮಾತ್ರ ಎಂದು ತಿಳಿಸಿದರು.
ತಮಿಳಿನ ಕಾಲಾ, ಕಬಾಲಿ ಸಿನಿಮಾ ನಿರ್ದೇಶಕ ಪಾ.ರಂಜಿತ್ ಮಾತನಾಡಿ, ಅಂಬೇಡ್ಕರ್ ಅವರಿಂದಲೇ ನಾವೆಲ್ಲ ಇಂದು ಸಮಾಜದಲ್ಲಿ ಮುಂದೆ ಬರಲು ಕಾರಣವಾಗಿದೆ, ಅವರ ಸಂವಿಧಾನದಿಂದ ನಾವು ಅಭಿವೃದ್ಧಿ ಕಂಡಿದ್ದೇವೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ, ಹೊಸಬೆಳಕು ಟ್ರಸ್ಟ್ ಸಂಸ್ಥಾಪಕ ಜಿಗಣಿ ರಾಮಕೃಷ್ಣ, ಹಿರಿಯ ಕಾಂಗ್ರೆಸ್ ಮುಖಂಡ ಪಟಾಪಟ್ ನಾಗರಾಜ್, ಜೆಡಿಎಸ್ ಮುಖಂಡ ಕೆ.ಪಿ.ರಾಜು, ಬಿ.ಪಿ.ರಮೇಶ್, ಸಿ.ನಾಗರಾಜು, ಮುನಿವೀರಪ್ಪ, ಬಿಎಸ್‌ಪಿ ತಾಲೂಕು ಅಧ್ಯಕ್ಷ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ, ಪಿವಿಸಿ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ, ಸಿ.ರಾವಣ, ಎಂ.ಆರ್.ಯಲ್ಲಪ್ಪ, ವಕೀಲ ಪ್ರಕಾಶ್, ಎನ್.ಎಂ.ಆರ್.ರಮೇಶ್, ಗ್ರಾಪಂ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ನಾರಾಯಣ ಸ್ವಾಮಿ, ಆರ್.ದೇವರಾಜು, ಜಿಗಣಿ ವಿನೋದ್, ವಕೀಲ ಆನಂದ್ ಚಕ್ರವರ್ತಿ ಮತ್ತಿತರರಿದ್ದರು.