ಕರಗುತ್ತಲೇ ಇದೆ ಕೊರಗರ ಕನಸು

ಶ್ರೀಪತಿ ಹೆಗಡೆ ಹಕ್ಲಾಡಿ ಕೆದೂರು
ಕೊರಗರೆಂದು ನೋಡದೆ ಅವರೂ ನಮ್ಮಂತೆ ಮನುಷ್ಯರು ಎಂಬ ಭಾವನೆ ಬದಲಾಗುವ ತನಕ ಮೂಲ ನಿವಾಸಿಗಳ ಬದುಕು ಸುಧಾರಿಸುವುದಿಲ್ಲ. ಮೂಲನಿವಾಸಿಗಳ ಜೀವನ ಮಟ್ಟ ಸುಧಾರಿಸುವ ಸಲುವಾಗಿಯೇ ಇರುವ ಐಟಿಡಿಪಿ ಅಧಿಕಾರಿಗಳ, ಜನಪ್ರತಿನಿಧಿಗಳ ನೈಜ ಕಾಳಜಿ, ಬದ್ಧತೆ ಇದ್ದರೆ ಮಾತ್ರ ಕೊರಗರು ಎಲ್ಲರಂತೆ ಮನುಷ್ಯರಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವುದು ಹಿರಿಯರ ಮಾತು.

ಮೂಲನಿವಾಸಿಗಳಿಗೆ ಕನಿಷ್ಠ ಮೂಲ ಸೌಲಭ್ಯವೂ ಇಲ್ಲದೆ ಹೀಗೂ ಬದುಕಲು ಸಾಧ್ಯವೇ ಎಂಬ ಪ್ರಶ್ನೆ 21ನೇ ಶತಮಾನದ ಅಂಚಿನಲ್ಲೂ ಹುಟ್ಟಿಕೊಳ್ಳುತ್ತಿದೆ ಎಂದರೆ ಕೊರಗರನ್ನು ನೋಡುವ ದೃಷ್ಟಿ, ಅಧಿಕಾರಿಗಳ ನಿರ್ಲಕ್ಷ್ಯ ಜನಪ್ರತಿನಿಧಿಗಳ ಆಸಕ್ತಿ ಬದಲಾಗಿಲ್ಲ ಎನ್ನೋದಕ್ಕೆ ಸಾಕ್ಷಿ. ನಾಗರಿಕ ಪ್ರಪಂಚದಿಂದ ಕೊರಗರನ್ನು ದೂರವಿಟ್ಟು ಕನಿಷ್ಠ ಸೌಲಭ್ಯವೂ ಸಿಗದೆ ಬದುಕುತ್ತಿರುವ ಮೂಲನಿವಾಸಿಗಳ ಜೀವನ ನಿಜಕ್ಕೂ ಕರುಣಾಜನಕ.

ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿಯ ಹೊಸ್ಮಠ ಕೊರಗ ಕಾಲನಿಯೇ ವೈರುಧ್ಯಗಳ ತವರು. ವಿದ್ಯುತ್, ಕುಡಿಯುವ ನೀರು, ರೇಶನ್ ಕಾರ್ಡ್ ಕೊರತೆಯ ಪಟ್ಟಿ. ಕಳಚಿಕೊಂಡ ಕಿಟಕಿ, ಹಾಳಾದ ಪಕಾಸಿ ರೀಪಿಗೆ ತೂಗಾಡುವ ಹೆಂಚು, ಮನೆ ಅರ್ಧ ಭಾಗಕ್ಕೆ ಹೆಂಚಿದ್ದರೆ, ಮತ್ತರ್ಧ ಭಾಗದಲ್ಲಿ ಅಂಗಾತ ಮಲಗಿ ನಕ್ಷತ್ರ ಎಣಿಸಬಹುದು. ನಾಲ್ಕು ಮನೆಗಳಿಗೆ ಶೌಚಗೃಹವಿದೆ. ತೆಂಗಿನ ಮರಕ್ಕೆ ಹಳೇ ಸೀರೆ ಸುತ್ತಿಕೊಂಡರೆ ಅದೇ ಬಣ್ಣಬಣ್ಣದ ಸ್ನಾನಗೃಹ. ಬಯಲೇ ಅಡುಗೆ ಕೊಠಡಿ!

ಲಕ್ಷ್ಮೀ ಮಗ ಪ್ರಭಾಕರ ಹಾಗೂ ಪತ್ನಿ ವಾಸಿಸುವ ಮನೆ ಟಾರ್ಪಲ್ ಹೊದಿಸಿದ ಚಿಕ್ಕ ಜೋಪಡಿ. ಗಾಳಿ ಬೆಳಕಿಲ್ಲದೆ, ಒಂದು ಹಾಲುಗಲ್ಲದ ಹಸುಗೂಸು ಸೇರಿ ಇಬ್ಬರು ಬುಡ್ಡಿದೀಪದ ಬೆಳಕಲ್ಲಿ ಬದುಕುತ್ತಿದ್ದಾರೆ. ಪಡಿತರ ಚೀಟಿಗೆ ಅರ್ಜಿ ಹಾಕಿದ್ದರೂ ಕಾರ್ಡ್ ಸಿಗದ ಕಾರಣ ಸವಲತ್ತುಗಳು ಸಿಗುತ್ತಿಲ್ಲ.

ಸುಣ್ಣಾರಿ ಮೂಲ: ಕೊರ್ಗಿ ಹಾಗೂ ಕೆದೂರು ಗ್ರಾಮ ಪಂಚಾಯಿತಿ ನಡುವಿನ ಹೊಸ್ಮಠದಲ್ಲಿ ಇರುವ ಮೂಲನಿವಾಸಿಗಳ ಮೂಲ ಸುಣ್ಣಾರಿ. ಏಳು ದಶಕದ ಹಿಂದೆ ಮೂಲನಿವಾಸಿಗಳು ಬಂದು ನೆಲೆಸಿದ್ದು ಹೊಸ್ಮಠದಲ್ಲಿ. ಸುಮಾರು ಒಂದೆ ಎಕರೆ ಜಾಗದಲ್ಲಿ ಮೊದಲು ಒಂದು ಕುಟುಂಬ ಬಂದು ನೆಲೆಸಿದ್ದು, ಈಗ ಎಂಟು ಮನೆಯಾಗಿದೆ, ಜನಸಂಖ್ಯೆ 41. ಒಂಟಿ ಮನೆ ಈಗ ಕಾಲನಿಯಾಗಿದೆ! ಹೊಸ್ಮಠಕ್ಕೆ ಮೊದಲು ಬಂದದ್ದು ಲಕ್ಷ್ಮೀ ಹಾಗೂ ಕಾಳ ಜೋಡಿ. ಈ ದಂಪತಿಗೆ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಿದ್ದು, ಕುಟುಂಬ ವಿಸ್ತರಿಸಿಕೊಂಡಿದೆ. ಎಂಟು ಮನೆಯಲ್ಲಿ ಎಲ್ಲರೂ ವಾಸಿಸುತ್ತಿದ್ದು, ಒಬ್ಬರು ಪ್ಲಾಸ್ಟಿಕ್ ಜೋಪಡಿಯಲ್ಲಿದ್ದಾರೆ. ಮತ್ತೊಬ್ಬರ ಮನೆ ಕಳಚುವ ಹಂತದಲ್ಲಿದೆ. ಅತ್ಯಂತ ಜರೂರು ಎರಡು ಮನೆಗಳ ರಿಪೇರಿ ಆಗಬೇಕಿದೆ. ಎಸ್‌ಸಿಎಸ್‌ಟಿ ಕಾಲನಿ ಅಭಿವೃದ್ಧಿಗೆ ಪ್ರತ್ಯೇಕ ಹಣವಿದ್ದು, ಐಟಿಡಿಪಿ ಇಲಾಖೆಯಲ್ಲಿ ಕೊರಗರ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿಜಯವಾಣಿ ಮಧ್ಯಸ್ಥಿಕೆಯಲ್ಲಿ ಬಾಲಕಿ ಶಾಲೆಗೆ: ಹೊಸ್ಮಠ ಕಾಲನಿಯ ಬಾಲಕಿ ಕೆದೂರು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದಿದ್ದು, ಕಾರಣಾಂತರದಿಂದ ಶಾಲೆ ಬಿಟ್ಟಿದ್ದು, ವಿಜಯವಾಣಿ ಮಧ್ಯಸ್ಥಿಕೆಯಲ್ಲಿ ಗುರುವಾರದಿಂದ ಮರಳಿ ಶಾಲೆ ಮೆಟ್ಟಿಲೇರಲಿದ್ದಾಳೆ. ವಿಜಯವಾಣಿ ಪ್ರತಿನಿಧಿ ಇಲ್ಲಿಗೆ ಭೇಟಿ ನೀಡಿದಾಗ ಬಾಲಕಿ ಶಾಲೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಗಮನಕ್ಕೆ ತರಲಾಯಿತು. ಬಾಲಕಿ ಜತೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿದ್ದರಿಂದ ಮತ್ತೆ ಶಾಲೆಗೆ ಹೋಗುವ ಇಚ್ಛೆ ಬಾಲಕಿ ವ್ಯಕ್ತಪಡಿಸಿದ್ದಳು. ಕೆದೂರು ಪ್ರೌಢಶಾಲೆ ಮುಖ್ಯ ಶಿಕ್ಷಕರ ಜತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ ಬಾಲಕಿಗೆ ಮರಳಿ ಶಾಲೆಗೆ ತೆರಳಲು ಸಮ್ಮತಿಸಿದ್ದಾರೆ. ಶಾಲೆಯಲ್ಲಿ ನೇರವಾಗಿ 10ನೇ ತರಗತಿಗೆ ಕೂರಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ನನಗೂ ವಯಸ್ಸಾಯಿತು.. ಮಗನಿಗೆ ಮನೆ ಆಗುವುದನ್ನು ನೋಡಬೇಕು ಎನ್ನೋದು ಆಸೆ. ಕೋಳಿಗೂಡಿನಂಥ ಮನೆಯಲ್ಲಿ ಮಗ ಸೊಸೆ, ಮೊಮ್ಮಕ್ಕಳ ಬದುಕು ನೋಡಲಾಗುತ್ತಿಲ್ಲ. ನಮ್ಮ ಕಾಲನಿಯಲ್ಲಿ ಅತ್ಯಂತ ಜರೂರು ಎರಡು ಮನೆಯ ಅವಶ್ಯವಿದೆ.
– ಲಕ್ಷ್ಮೀ, ಕಾಲನಿಯ ಹಿರಿಯ ಮಹಿಳೆ

ನಾಲ್ಕು ವರ್ಷಗಳಿಂದ ಪ್ಲಾಸ್ಟಿಕ್ ಹಾಸಿನ ಮಾಡಿನಲ್ಲಿ ಜೀವನ ನಡೆಸುತ್ತಿದ್ದು, ಪಡಿತರ ಚೀಟಿಗೆ ಅರ್ಜಿ ಕೊಟ್ಟರೂ ಇದುವರೆಗೆ ಸಿಕ್ಕಿಲ್ಲ. ಚುನಾವಣೆಗೆ ಮತ ಕೇಳಲು ಬಂದವರಿಗೆ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಸ್ಪಂದಿಸಲ್ಲ. ಮನೆಯಿಲ್ಲದೆ ಮಳೆಗಾಲ ಕಳೆಯುವುದು ಕಷ್ಟವಾಗುತ್ತದೆ. ವಾಸಕ್ಕೆ ಮನೆ ಮಂಜೂರು ಮಾಡಿದರೆ, ಕೂಲಿ ಮಾಡಿ ಬಂದು ನೆಮ್ಮದಿಯಲ್ಲಿ ಕೂರಲಿಕ್ಕಾದರೂ ಮನೆಯಿದೆ ಎಂಬ ಸಮಾಧಾನ ಸಿಗುತ್ತದೆ.
– ಪ್ರಭಾಕರ, ಟಾರ್ಪಲ್ ಸೂರಿನಡಿ ಬದುಕುತ್ತಿರುವ ಕಾಲನಿ ಯುವಕ

Leave a Reply

Your email address will not be published. Required fields are marked *