ಸಮಸ್ಯೆ ಇತ್ಯರ್ಥಕ್ಕೆ 3ತಿಂಗಳ ಗಡುವು

ಎಡದಂಡೆ ನಾಲೆ ರೈತರಿಂದ ಬೃಹತ್ ಪ್ರತಿಭಟನೆ

ಕೊಪ್ಪಳ: ತ್ರಿವಳಿ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಯವಾಗಿ ನವಲಿ ಜಲಾಶಯ ನಿರ್ಮಾಣ, ಟಿಬಿ ಬೋರ್ಡ್‌ನಲ್ಲಿ ತಾರತಮ್ಯ ನಿವಾರಣೆ, ಎಡದಂಡೆ ನಾಲೆ ಭದ್ರಪಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರು 3 ತಿಂಗಳ ಗಡುವು ನೀಡಿದ್ದಾರೆ.

ಕಳೆದೊಂದು ವಾರದಿಂದ ಸಿಂಧನೂರು ಭಾಗದಲ್ಲಿ ಪ್ರತಿಭಟನೆ ನಡೆಸಿರುವ ರೈತರು ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿ ಮುಂಭಾಗ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ , ಜಲಾಶಯ ನಿರ್ಮಿಸಿ 75 ವರ್ಷವಾಗಿದೆ . 9 ಲಕ್ಷ ಕುಟುಂಬಗಳು ಜಲಾಶಯ ನಂಬಿ ಬದುಕುತ್ತಿವೆ. ಸದ್ಯ 33 ಟಿಎಂಸಿ ಅಡಿ ಹೂಳಿದ್ದು ಒಂದು ಬೆಳೆಗೆ ಮಾತ್ರ ನೀರು ದೊರೆಯುತ್ತಿದೆ . ಅಧಿಕಾರಿಗಳು ಸರಿಯಾಗಿ ನೀರು ನಿರ್ವಹಿಸುತ್ತಿಲ್ಲ , ಬೋರ್ಡ್‌ನಲ್ಲಿ ಆಂಧ್ರ ಅಧಿಕಾರಿಗಳು ಸೇರಿಕೊಂಡಿದ್ದು , ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.

ಮಾಜಿ ಶಾಸಕ ಎನ್.ಎಸ್. ಬೋಸರಾಜು ಮಾತನಾಡಿ, ಪಕ್ಷಾತೀತವಾಗಿ ಈ ಭಾಗದ ಜನಪ್ರತಿನಿಧಿಗಳು ಹೋರಾಡಿದಾಗ ಮಾತ್ರ ಸಮಸ್ಯೆ ಪರಿಹಾರವಾಗಲಿದೆ. ನೀರಾವರಿ ಕಾನೂನುಗಳಲ್ಲಿ ತಿದ್ದುಪಡಿ ಮಾಡಬೇಕಿದೆ . ನೀರು ಹಂಚಿಕೆಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಬೇಕು. ನೀರಾವರಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆ ಬಳಿಕ 9 ಪ್ರಮುಖ ಬೇಡಿಕೆ ಈಡೇರಿಸುವಂತೆ ನೀರಾವರಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ , ರೈತ ಮುಖಂಡರಾದ ಪಂಪನಗೌಡ ಬಾದರ್ಲಿ, ಬಸವರಾಜ ಪಾಟೀಲ್, ಬಸವನಗೌಡ ಸೇರಿ ಸಿಂಧನೂರು, ಮಾನ್ವಿ ಭಾಗದ ಸಾವಿರಾರು ರೈತರು ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು: ನವಲಿ ಸಮಾನಾಂತರ ಜಲಾಶಯ ನಿರ್ಮಾಣ, ಟಿಬಿ ಬೋರ್ಡ್‌ನಲ್ಲಿ ಕೆಲ ನಿಯಮಾವಳಿ ತಿದ್ದುಪಡಿ, ಅಧ್ಯಕ್ಷ ಕಾರ್ಯದರ್ಶಿಯನ್ನು ಬದಲಾವಣೆ. ಎಡದಂಡೆ ನಾಲೆ ನವೀಕರಣ, ಬಲವರ್ದನೆಗೆ ಗಂಭೀರ- ಪ್ರಯತ್ನ, 2018-19ರಲ್ಲಿ ಎಡದಂಡೆ ನಾಲೆ ಪಾಲಿನ 3.82 ಟಿಎಂಸಿ ಅಡಿ ನೀರನ್ನು ಬಲದಂಡೆಗೆ ಹರಿಸಿದ್ದು, ಈವರ್ಷ ಎಡದಂಡೆಗೆ ಹೆಚ್ಚುವರಿಯಾಗಿ ಹರಿಸಬೇಕು . ಬಚಾವತ್ ವರದಿ ಯಥಾವತ್ ಜಾರಿ, ಎಡದಂಡೆ ನಾಲೆ ವ್ಯಾಪ್ತಿಯ ಉಪವಿಭಾಗದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳು.

ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ

ಗಂಗಾವತಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು ಮುನಿರಾಬಾದ್ ಕಾಡಾ ಕಚೇರಿ ಮುಂಭಾಗ ಕಪ್ಪುಬಟ್ಟೆ ಪ್ರದರ್ಶಿಸುವ ಮೂಲಕ ಶಕ್ತಿ ಪ್ರದರ್ಶಿಸುವ ಮುನ್ನ ನಗರಕ್ಕೆ ಆಗಮಿಸಿದ ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದ ರೈತ ಮುಖಂಡರು ಶುಕ್ರವಾರ ಗಾಂಧಿ ವೃತ್ತದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಬಾದರ್ಲಿ, ಎಡದಂಡೆ ಕಾಲುವೆಗೆ ನೀರು ಹರಿಸಿದರೂ ರಾಯಚೂರು ಜಿಲ್ಲೆ ಟೇಲ್ಯಾಂಡ್ ಭಾಗದಲ್ಲಿ ಇನ್ನೂ ನೀರು ಸಿಕ್ಕಿಲ್ಲ. ಜಲಾಶಯದಲ್ಲಿ ಹೆಚ್ಚಿರುವ ಹೂಳೆತ್ತುವಂತೆ ಒತ್ತಾಯಿಸಿ ಪ್ರತಿಭಟಿಸಿದರೂ ಯೋಜನೆ ರೂಪಿಸಿಲ್ಲ. ನದಿ ಮೂಲಕ ಪೋಲಾಗುತ್ತಿರುವ ನೀರು ಸಂಗ್ರಹಕ್ಕಾಗಿ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಎಡದಂದೆ ಕಾಲುವೆಗೆ ಧಕ್ಕೆಯಾಗದಂತೆ ಹೊಸ ಯೋಜನೆ ರೂಪಿಸಬೇಕಿದೆ. ತುಂಗಭದ್ರಾ ಮಂಡಳಿ ರಾಜ್ಯದವರನ್ನೇ ನೇಮಿಸುವುದು ಸೇರಿ ಹಲವು ಬೇಡಿಕೆಗಳನ್ನಿಟ್ಟುಕೊಂಡು 2 ವಾರದಿಂದ ವಿವಿಧ ರೀತಿಯಲ್ಲಿ ಪ್ರತಿಭಟಿಸಲಾಗಿದ್ದು, ನಿರಂತರ ಧರಣಿ, ಸಂಚಾರ ತಡೆ ಹಮ್ಮಿಕೊಳ್ಳಲಾಗಿತ್ತು. ಕಾಡಾ ಕಚೇರಿ ಮುಂಭಾಗ ಕಪ್ಪುಬಟ್ಟೆ ಪ್ರದರ್ಶಿಸುವ ಮೂಲಕ ಒತ್ತಡ ಹಾಕಲಾಗುವುದು. ನಿರ್ಲಕ್ಷಿಸಿದರೆ ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.

ನಗರಕ್ಕೆ ಆಗಮಿಸಿದ ಪ್ರತಿಭಟನೆ ರೈತರ ತಂಡವನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು. ಮಾಜಿ ಸಂಸದರಾದ ಎಸ್.ಶಿವರಾಮನಗೌಡ, ಕೆ.ವಿರೂಪಾಕ್ಷಪ್ಪ, ಎಂಎಲ್ಸಿ ಎನ್.ಎಸ್.ಭೋಸರಾಜ್, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಹ ಸಂಚಾಲಕ ಬಸವರಸ್ವಾಮಿ ಮಳೀಮಠ, ಮುಖಂಡರಾದ ರುದ್ರೇಶ ಡ್ಯಾಗಿ, ರಮೇಶಕುಲ್ಕರ್ಣಿ ಇತರರಿದ್ದರು.

Leave a Reply

Your email address will not be published. Required fields are marked *