ಸಿನಿಮಾ

ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ

ಕೊಪ್ಪಳ: ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಚುನಾವಣೆ ಬಂದಾಗ ಅವರಿಗೆ ರಾಜ್ಯ ನೆನಪಾಗುತ್ತದೆ. ಜನರು ಅವರನ್ನು ವಿಶ್ವಾಸಕ್ಕೆ ತೆಗದುಕೊಳ್ಳುತ್ತಿಲ್ಲವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯವನ್ನು ಅಭಿವೃದ್ಧಿ ಮಾಡಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ದೆಹಲಿ ನಾಯಕರು ಪ್ರಚಾರಕ್ಕೆ ಲಗ್ಗೆ ಇಟ್ಟಿದ್ದಾರೆ. ಇಷ್ಟು ದಿನ ಇಲ್ಲದ ಕನಿಕರ ಈಗ ಬಂದಿದೆ.

ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದ ಜೆಡಿಎಸ್ ಮೆರವಣಿಗೆ:  ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಭಾಗಿ

ಪ್ರಧಾನಿ ನರೇಂದ್ರ ಮೋದಿ ಕೇವಲ ರೋಡ್ ಶೋ ಮಾಡುವುದರಿಂದ ಜನರ ಸಮಸ್ಯೆ ಅರ್ಥವಾಗುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಕೊಡುಗೆ ಕೊಟ್ಟಿರುವುದಾಗಿ ಹೇಳುತ್ತಾರೆ. ಏನೇನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರ ನೀಡಿದ ವರದಿಯಲ್ಲೇ ರಾಜ್ಯದ 10 ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ. ಅವುಗಳ ಅಭಿವೃದ್ಧಿಗೆ ಕೇಂದ್ರ ಕೈಗೊಂಡ ಕ್ರಮವೇನು ಎಂದು ತಿಳಿಸಲಿ.

ರಾಜ್ಯದಲ್ಲಿ ಯಥೇಚ್ಛವಾಗಿ ನದಿ ನೀರು ಹರಿಯುತ್ತದೆ. ಅದರ ಸದ್ಬಳಕೆಯಾಗುತ್ತಿಲ್ಲ. ಕೃಷ್ಣಾ ನ್ಯಾಯಾಧೀಕರಣ-2 ತೀರ್ಪು ಬಂದು ದಶಕವಾಗಿದ್ದರೂ 130 ಟಿಎಂಸಿ ಅಡಿ ನೀರು ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಜೆಜೆಎಂನಡಿ ನಳ ಅಳವಡಿಸಿದ್ದಾರೆ. ಅದರಲ್ಲಿ ನೀರು ಬರುತ್ತಿಲ್ಲ. ಆದರೆ, ಗುತ್ತಿಗೆದಾರರು, ಸಂಬಂಧಿಸಿದ ಸಚಿವರಿಗೆ ಹಣದ ಹೊಳೆ ಹರಿದಿದೆ ಎಂದು ಆರೋಪಿಸಿದರು.

ಕಾಂಪಿಟ್ ವಿಥ್ ಚೀನಾ ಯೋಜನೆಯಡಿ ಕೊಪ್ಪಳಕ್ಕೆ ಆಟಿಕೆ ಕ್ಲಸ್ಟರ್ ಸೇರಿ ಜಿಲ್ಲೆಗೊಂದು ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಅದನ್ನು ಬಿಜೆಪಿಯವರು ಅನುಷ್ಠಾನ ಮಾಡಲಿಲ್ಲ. ಟಾಯ್ಸ ಕ್ಲಸ್ಟರ್ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೂರದ ಬೆಟ್ಟ.

ಬಿಜೆಪಿಗೆ 10 ಸ್ಥಾನವೂಬರುವುದಿಲ್ಲ

ಅವರನ್ನು ತೋರಿಸಿ ಮತ ಹಾಕಿ ಅಂತಾರೆ. ಆದರೆ, ಮೋದಿ ವರ್ಚಸ್ಸು ಕುಂದಿದೆ. ಸಿಎಂ ಬೊಮ್ಮಾಯಿ ರಾಜ್ಯವನ್ನು ಅಭಿವೃದ್ಧಿ ಮಾಡಿಲ್ಲ. ಅದಕ್ಕೆ ಅವರ ಹೆಸರು ಹೇಳಿ ಮತ ಯಾಚಿಸುತ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ಸ್ಥಾನವೂಬರುವುದಿಲ್ಲವೆಂದು ಕುಟುಕಿದರು.

ಜೆಡಿಎಸ್ ಅಭ್ಯರ್ಥಿಗಳಾದ ಸಿ.ವಿ.ಚಂದ್ರಶೇಖರ್, ನೇಮಿರಾಜ ನಾಯ್ಕ, ರಾಜು ನಾಯಕ, ಮಲ್ಲನಗೌಡ, ಜೆಡಿಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಡಾ.ಮಹೇಶ ಗೊವನಕೊಪ್ಪ, ಸುರೇಶ ಭೂಮರಡ್ಡಿ, ಮಂಜುನಾಥ ಸೊರಟೂರು, ಮೌನೇಶ ವಡ್ಡಟ್ಟಿ ಇತರರಿದ್ದರು.

ಜೆಡಿಎಸ್ ಕಾರ್ಯಕ್ರಮಕ್ಕೆ ಹಿಟ್ನಾಳ್ ಗ್ರಾಮದಿಂದ ಆಗಮಿಸುತ್ತಿದ್ದ ಜೆೆಡಿಎಸ್ ಕಾರ್ಯಕರ್ತರ ವಾಹನದ ಮೇಲೆ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರು ಕಲ್ಲು ತೂರಿದ್ದಾರೆ. ಇದನ್ನು ಜನ ಸಹಿಸುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Latest Posts

ಲೈಫ್‌ಸ್ಟೈಲ್