ಭಾರತೀಯ ಸಂಸ್ಕೃತಿಯಲ್ಲಿ ಜಾತ್ರೆ, ರಥೋತ್ಸವಗಳಿಗೆ ತುಂಬ ಮಹತ್ವವಿದೆ. ಕೊಪ್ಪಳ ಗವಿಮಠದಲ್ಲಿ ನಡೆಯುವ ಗವಿಸಿದ್ದೇಶ್ವರ ಜಾತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುವ ಬಹು ದೊಡ್ಡ ಆಚರಣೆ. ಸಾಮಾಜಿಕ ಜಾಗೃತಿಯ ವಿಶೇಷ ಅಂಶವನ್ನೂ ಒಳಗೊಂಡಿರುವ ಈ ಜಾತ್ರೆಯ ಪರಿಚಯಾತ್ಮಕ ಬರಹವಿದು.
ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುವ ಬಹುದೊಡ್ಡ ಜಾತ್ರೆಯಲ್ಲಿ ದಕ್ಷಿಣ ಕುಂಭ ಖ್ಯಾತಿಯ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯೂ ಒಂದು. ರಥೋತ್ಸವದೊಂದಿಗೆ ಪ್ರತೀ ವರ್ಷ ಒಂದಿಲ್ಲೊಂದು ಸಾಮಾಜಿಕ ಕಳಕಳಿ ಮೆರೆಯುವುದು ಜಾತ್ರೆಯ ವಿಶೇಷ. ಭಕ್ತರಿಗೆ ಮೂರು ದಿನಗಳ ಕಾಲ ಸಂಗೀತ ರಸದೌತಣ, ಅನುಭಾವಿಗಳ ಅನುಭವದ ನುಡಿಗಳು, ಸಾಮಾಜಿಕ ಜಾಗೃತಿ ಸಂದೇಶದೊಂದಿಗೆ ತಿಂಗಳ ಕಾಲ ಮಹಾದಾಸೋಹ ವ್ಯವಸ್ಥೆ ಮತ್ತೆಲ್ಲಿಯೂ ಸಿಗದು. ಕೊಪ್ಪಳದ ಪೂರ್ವದ ಬೆಟ್ಟದಲ್ಲಿ ಕಂಗೊಳಿಸುವ ಗವಿಮಠ ಅಧ್ಯಾತ್ಮ ಸಿರಿಯ ಆಗರ. ಅನ್ನ-ಅಕ್ಷರ-ಅಧ್ಯಾತ್ಮ (ಶಿಕ್ಷಣ) ದಾಸೋಹದ ಮೂಲಕ ನಾಡಿನ ಮನೆಮಾತಾಗಿದೆ. ಗವಿಮಠದ 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮಿಗಳ ಲಿಂಗೈಕ್ಯ ದಿನವನ್ನೇ ಪ್ರತಿ ವರ್ಷ ಜಾತ್ರೆಯಾಗಿ ಆಚರಿಸಲಾಗುತ್ತಿದೆ. ಈ ಬಾರಿ ಜ. 12ರಂದು ರಥೋತ್ಸವ ಜರುಗಲಿದೆ.
ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವದ ಮುನ್ನಾದಿನ ಬಸವ ಪಟ ಆರೋಹಣ ಜರುಗುತ್ತದೆ. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧಿವಿಧಾನೋಕ್ತವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡುತ್ತಾರೆ. ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ಐದು ಸಲ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೊಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಕಟ್ಟುತ್ತಾರೆ.
ಬಳಿಕ ಗವಿಸಿದ್ದೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮುಹೂರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಮಠಕ್ಕೆ ತರಲಾಗುತ್ತದೆ. ಬಳಿಕ ಹಲಗೇರಿ, ಮುದ್ದಾಬಳ್ಳಿ, ಮಂಗಳಾಪುರ ಗ್ರಾಮದಿಂದ ಕಳಸ, ಮೂರ್ತಿ ಮೆರವಣಿಗೆಯಲ್ಲಿ ಆಗಮಿಸಲಿವೆ. ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಉಘೇ ಉಘೇ ಗವಿಸಿದ್ದೇಶ ಎಂಬ ಘೊಷದೊಂದಿಗೆ ರಥೋತ್ಸವ ನಡೆಯುತ್ತದೆ.
ಇತಿಹಾಸ: ಗವಿಮಠಕ್ಕೆ ಎಂಟು ನೂರು ವರ್ಷಗಳ ಇತಿಹಾಸವಿದೆ. ಮಠದ ಮೊದಲ ಪೀಠಾಧಿಪತಿ ಶ್ರೀ ರುದ್ರಮುನಿ ಶಿವಾಚಾರ್ಯರು ಕಿಕರ್ನಾಟಕದಲ್ಲಿ ವೀರಶೈವಧರ್ಮವನ್ನು ಜನಪ್ರಿಯಗೊಳಿಸಿದವರು. ಮಠದಲ್ಲಿರುವ ಕ್ರಿ.ಶ. 1086 ಶಾಸನದ ಪ್ರಕಾರ, ಕಾಶಿಯ ಜಂಗಮವಾಡಿಯಿಂದ ಧರ್ಮಪ್ರಸಾರ ಕೈಗೊಳ್ಳುತ್ತಾ ಬಂದ ರುದ್ರಮುನಿ ಶಿವಯೋಗಿಗಳು ಕೊಪ್ಪಳದ ಪೂರ್ವಬೆಟ್ಟದ ಗವಿಯಲ್ಲಿ ನೆಲೆಸಿ, ಧಾರ್ವಿುಕ-ಸಾಮಾಜಿಕ ಸುದಾರಣೆಯಲ್ಲಿ ನಿರತರಾದರು. ಇವರು ನೆಲೆಸಿದ ಸ್ಥಳವೇ ಗವಿಮಠವಾಯಿತು. ರುದ್ರಮುನಿ ಶಿವಾಚಾರ್ಯರ ನಂತರ ಮಠದ ಉತ್ತರಾಧಿಕಾರತ್ವದ ಪರಂಪರೆ ಮುಂದುವರಿದಿದೆ. 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮಿಗಳು ಪವಾಡಪುರುಷರಾಗಿದ್ದರು. ಸತ್ತ ಆಕಳಿಗೆ ಮರುಜನ್ಮ, ನವಾಬನ ಕುಷ್ಠರೋಗ ಗುಣ ಮಾಡಿದ್ದು ಸೇರಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ತಮ್ಮ ಗುರುಗಳಿಗಾಗಿ ನಿರ್ವಿುಸಿದ್ದ ಸಮಾಧಿಯಲ್ಲಿ ಕ್ರಿ.ಶ. 1816ರ ಪುಷ್ಯ ಬಹುಳ ಬಿದಿಗೆಯಂದು ಲಿಂಗೈಕ್ಯರಾದರು. ಆ ದಿನವನ್ನೇ ಪ್ರತಿ ವರ್ಷ ಜಾತ್ರೆಯಾಗಿ ಆಚರಿಸಲಾಗುತ್ತದೆ. ಸದ್ಯ 18ನೇ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಠವನ್ನು ಮುನ್ನಡೆಸುತ್ತಿದ್ದಾರೆ.
ಸಾಮಾಜಿಕ ಜಾಗೃತಿ: ಪ್ರತಿ ವರ್ಷ ಕೇವಲ ರಥೋತ್ಸವ ಮಾಡುವುದರಿಂದ ಜನರಿಗೆ ಪ್ರಯೋಜನವಿಲ್ಲವೆಂದು ಅರಿತ ಈಗಿನ ಶ್ರೀಗಳು ಜಾತ್ರೆಯಲ್ಲಿ ಸಾಮಾಜಿಕ ಸಂದೇಶ ನೀಡಲು ನಿರ್ಧರಿಸಿ ಪ್ರತಿ ವರ್ಷ ಒಂದೊಂದು ಜಾಗೃತಿ ಮೂಡಿಸುತ್ತಿದ್ದಾರೆ. 2016ರಲ್ಲಿ ಕೊಪ್ಪಳ ಜಿಲ್ಲೆ ಬಾಲ್ಯವಿವಾಹದ ಕೇಂದ್ರವಾಗಿತ್ತು. ಅದೇ ವರ್ಷ ಜಾತ್ರೆಯಲ್ಲಿ ಬಾಲ್ಯವಿವಾಹ ಜಾಗೃತಿ ಮೂಡಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಳಿದು ಜಾಥಾದಲ್ಲಿ ಪಾಲ್ಗೊಂಡರು. ಪರಿಣಾಮ ಎರಡು ವರ್ಷದ ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯವಿವಾಹದ ಪ್ರಮಾಣದಲ್ಲಿ ಇಳಿಕೆಯಾಗಿದೆ. 2017ರಲ್ಲಿ ಬರಗಾಲದಿಂದ ಬಳಲಿದ್ದ ಜನರಿಗೆ ಜಲದೀಕ್ಷೆ ಕಾರ್ಯಕ್ರಮದಡಿ ನೀರು ಸಂಗ್ರಹಣೆಯ ಅರಿವು ಮೂಡಿಸಲಾಗಿದೆ. 2018ರಲ್ಲಿ ಇಡೀ ವಿಶ್ವನ್ನು ಬಾಧಿಸುತ್ತಿರುವ ಒತ್ತಡದ ಬದುಕು, ಅದರ ಪರಿಣಾಮ, ನಿವಾರಣೆ ಕುರಿತು ಜಾಗೃತಿ ಮೂಡಿಸಲಾಯಿತು. 2019ರಲ್ಲಿ ದೃಷ್ಟಿ ಇಲ್ಲದವರಿಗೆ ಬೆಳಕಾಗುವ ನೇತ್ರದಾನ ಸಂದೇಶ ಸಾರುವ ಕೃಪಾದೃಷ್ಟಿ ಅಭಿಯಾನ ಆರಂಭಿಸಲಾಯಿತು. ಸಾವಿರಾರು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವುದರೊಂದಿಂಗೆ ನೇತ್ರದಾನ ಮಾಡಿದರು. ಈ ಬಾರಿ ಗಿಡ-ಮರಗಳ ಮಹತ್ವ ಸಾರುವ ಲಕ್ಷ ವೃಕ್ಷ ಅಭಿಯಾನ ಹಮ್ಮಿಕೊಂಡಿದ್ದು, ಕೊಪ್ಪಳದ ಹಿರೇಹಳ್ಳದ ಅಕ್ಕ-ಪಕ್ಕ ಸಾವಿರಾರು ಗಿಡ ನೆಟ್ಟು ಪರಿಸರ ಕಾಳಜಿ ಮೂಡಿಸಲಾಗುತ್ತಿದೆ.
ಸಾಂಸ್ಕೃತಿಕ ರಸದೌತಣ: ಜಾತ್ರಾ ಮಹೋತ್ಸವದಲ್ಲಿ ಸಂಜೆ ಸಂಗೀತ, ಜನಪದ ಗಾಯನ, ತತ್ತ್ವಪದ ಗಾಯನ, ನಾದತರಂಗ, ಹಾಸ್ಯ, ಜಾದೂ ಪ್ರದರ್ಶನ ಇರಲಿವೆ. ಹಗಲಿನಲ್ಲಿ ಮಲ್ಲಗಂಬ, ದಾಲಪಟ, ಕಬಡ್ಡಿ, ಕರಾಟೆ ಸ್ಪರ್ಧೆಗಳು ನಡೆಯಲಿವೆ.
ಗಣ್ಯ ಸಾಧಕರ ಆಗಮನ
ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಅಧ್ಯಾತ್ಮ ವಿಚಾರಗಳೊಂದಿಗೆ ವಿವಿಧ ಕ್ಷೇತ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಗಣ್ಯರ ಅನುಭವದ ನುಡಿಗಳನ್ನು ಭಕ್ತರು ಸವಿಯಬಹುದು. ಬಾಬಾ ರಾಮದೇವ್, ರವಿಶಂಕರ ಗುರೂಜಿ, ಸಾಲುಮರದ ತಿಮ್ಮಕ್ಕ, ವಿಜ್ಞಾನಿ ಸಿ.ಎನ್.ಆರ್. ರಾವ್, ವಿಜಯಪುರದ ಸಿದ್ದೇಶ್ವರ ಸ್ವಾಮಿಜಿ, ಅಣ್ಣ ಹಜಾರೆ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸೇರಿದಂತೆ ಅನೇಕ ಮಹನೀಯರು ರಥೋತ್ಸವಕ್ಕೆ ಚಾಲನೆ ನೀಡಿದ್ದರು.
ಈ ವರ್ಷದ ರಥೋತ್ಸವಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯ ಅಥಿತಿಗಳಾಗಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ್, ಪದ್ಮಭೂಷಣ ಪುರಸ್ಕೃತ ಡಾ. ಬಿ.ಎಂ. ಹೆಗ್ಡೆ, ಚಿತ್ರನಟ ರಮೇಶ್ ಅರವಿಂದ್, ಚಿಂತಕಿ ಡಾ. ವೀಣಾ ಬನ್ನಂಜೆ, ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ, ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಪಾಲ್ಗೊಳ್ಳಲಿದ್ದಾರೆ.
ವಿ.ಕೆ. ರವೀಂದ್ರ ಕೊಪ್ಪಳ