ಕೊಪ್ಪಳ: ಗಿಡ ನೆಡುವುದೊಂದು ಮಹತ್ಕಾರ್ಯ. ಗವಿಮಠ ಜಾತ್ರೆ ಅಂಗವಾಗಿ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಡಿಸಿ ಪಿ.ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಮೈದಾನದಲ್ಲಿ ಜಾತ್ರೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಲಕ್ಷ ವೃಕ್ಷೋತ್ಸವ ಶೀರ್ಷಿಕೆಯಡಿ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಲಕ್ಷ ವೃಕ್ಷೋತ್ಸವ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಮತೋಲನ ಕಾಪಾಡಲು ಗಿಡ-ಮರ ಬೆಳೆಸಬೇಕು. ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದೊಂದು ಸಾರ್ಥಕ ಕ್ಷಣ. ವಿದ್ಯಾರ್ಥಿಗಳು ವೃಕ್ಷದ ಮಹತ್ವ ಅರಿತು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಅಂದಾಗ ಕಾರ್ಯಕ್ರಮದ ಉದ್ದೇಶ ಈಡೇರಲಿದೆ ಎಂದರು.
ಡಿಎಫ್‌ಒ ಯಶ್‌ಪಾಲ್ ಕ್ಷೀರಸಾಗರ ಮಾತನಾಡಿ, ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ. ಸರ್ಕಾರ ಮಾಡುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಇಂತಹ ಮಹತ್ವಪೂರ್ಣ ಕಾರ್ಯದಲ್ಲಿ ಭಾಗಿಯಾದದ್ದು ಖುಷಿ ತಂದಿದೆ. ನಾವು ಬದುಕಬೇಕೆಂದರೆ, ಮರಗಳೂ ಬದುಕಬೇಕಿರುವುದು ಅನಿವಾರ್ಯ ಎಂದರು. ಆರ್‌ಎಫ್‌ಒ ಎ.ಎಚ್.ಮುಲ್ಲಾ ಮಾತನಾಡಿದರು.
ಸಾರ್ವಜನಿಕ ಮೈದಾನದಿಂದ ಅಶೋಕ ವೃತ್ತ, ಜವಾಹರ್ ರಸ್ತೆ, ಗಡಿಯಾರ ಕಂಕ ವೃತ್ತ, ಶಾರದಾ ಚಿತ್ರಮಂದಿರ ಮಾರ್ಗವಾಗಿ ಸಾಗಿ ಗವಿಮಠದ ಮಹಾದಾಸೋಹ ಭವನದವರೆಗೂ ನಡೆಯಿತು. ಲಕ್ಷ ವೃಕ್ಷೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು, ಭಕ್ತರು ಇದ್ದರು.
ಮರ ನಿಜ ಧರ್ಮ ಪಾಲಕ: ಗುಡಿ, ಮಸೀದಿ, ಚರ್ಚ್ ಕಟ್ಟಿದರೆ, ಆಯಾ ಧರ್ಮದವರಿಗೆ ಆಶ್ರಯವಾಗುತ್ತದೆ. ಆದರೆ, ಒಂದು ಗಿಡ ನೆಟ್ಟರೆ, ಅದು ಎಲ್ಲರಿಗೂ ನೆರಳಾಗುತ್ತದೆ. ಈ ಮೂಲಕ ಅದು ನಿಜ ಧರ್ಮ ಪಾಲಿಸುತ್ತದೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಜಾಥಾದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಂಗಳವಾರ ಆಶೀರ್ವಚನ ನೀಡಿದರು. ಅಭಿಷೇಕ ಮಾಡುವವರಿಗೆ, ನೈವೇದ್ಯ ನೀಡುವವರಿಗೆ, ಗುಡಿ ಕಟ್ಟಿಸುವವರಿಗೆ, ಪೂಜೆ ಮಾಡುವವರಿಗೆ ದೇವರು ಒಲಿಯುವುದಿಲ್ಲ. ದೇವರು ಇಷ್ಟಪಡುವುದು ಗಿಡ ನೆಡುವವರನ್ನು. ಅವುಗಳನ್ನು ಪೊಷಿಸುವವರನ್ನು. ನಮಗೆ ಬದುಕುವುದಕ್ಕೆ ಆಮ್ಲಜನಕ ಬೇಕು. ಅದು ಬೇಕೆಂದೇ ಗಿಡ ನೆಟ್ಟು ಪೋಷಿಸಬೇಕು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ಸಾಕು. ಅದರಿಂದ ಅನೇಕರು ಉಸಿರಾಡಬಹುದು ಎಂದರು.