More

    ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ

    ರಾಯರಡ್ಡಿಗೆ ಆಚಾರ್ ಟಾಂಗ್ 3 ಹಂತದಲ್ಲಿ ಬಿ ಸ್ಕೀಂ ಅನುಷ್ಠಾನ

    ಕೊಪ್ಪಳ: ಮಾಜಿ ಸಚಿವ ಬಸವರಾಜ ರಾಯರಡ್ಡಿ ತಾವು ಅಧಿಕಾರದಲ್ಲಿದ್ದಾಗ ಕೃಷ್ಣಾ ಬಿ ಸ್ಕೀಂ ಅನುಷ್ಠಾನಕ್ಕೆ ಪ್ರಯತ್ನ ಪಟ್ಟಿಲ್ಲ. ಈಗ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಆರೋಪಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಖಲೆ ನೀಡುವ ಮೂಲಕ ರಾಯರೆಡ್ಡಿಗೆ ಟಾಂಗ್ ನೀಡಿದರು. ಕೃಷ್ಣ ಜಲ ಭಾಗ್ಯ ನಿಗಮದಿಂದ ಎರಡನೇ ಹಂತದಲ್ಲಿ ಆಲಮಟ್ಟಿ ಜಲಾಶಯಕ್ಕೆ 130 ಟಿಎಂಸಿ ಅಡಿ ಹೆಚ್ಚುವರಿ ನೀರು ಲಭ್ಯವಾಗಿದೆ. ಬಿ ಸ್ಕೀಂನಲ್ಲಿ 9 ಯೋಜನೆಗಳನ್ನು ಹಾಕಿಕೊಂಡಿದ್ದು, 8ನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಕೊಪ್ಪಳ ಏತ ನೀರಾವರಿ ಯಾಕೆ ಮಾಡಲಿಲ್ಲ ? 2011ರಲ್ಲಿ ಯೋಜನೆಗೆ 17,207 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ಕೊಡಲಾಯಿತು. ಬಳಿಕ 2013ರಲ್ಲಿ ಕೃಷ್ಣೆಯೆಡೆಗೆ ನಮ್ಮ ನಡಿಗೆ ಎಂದು ಸಿದ್ದರಾಮಯ್ಯ ಪಾದಯಾತ್ರೆ ಮಾಡಿದರು. ತಾವು ಅಧಿಕಾರಕ್ಕೆ ಬಂದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ರೂ. ನೀಡಿ ಅನುಷ್ಠಾನಗೊಳಿಸುವುದಾಗಿ ಭರವಸೆ ಕೊಟ್ಟರು. ಒಂದೊಮ್ಮೆ ಕೊಟ್ಟಿದ್ದರೆ, 17 ಸಾವಿರ ಕೋಟಿ ರೂ.ನಲ್ಲೇ ಕಾಮಗಾರಿ ಮುಗಿಯುತ್ತಿತ್ತು. ಇವರಿಗೆ ರೈತರ ಕಾಳಜಿ ಇದ್ದಿದ್ದರೆ ಕೊಡಿಸುತ್ತಿದ್ದರೆಂದು ಪರೋಕ್ಷವಾಗಿ ಕುಟುಕಿದರು.

    ಮತ್ತೆ 2017ರಲ್ಲಿ ಕಾಂಗ್ರೆಸ್ ಸರ್ಕಾರವೇ 52 ಸಾವಿರ ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತ ನಿಗದಿಪಿಸಿದೆ. ನಾನು ಶಾಸಕನಾದ ಬಳಿಕ, ಸದನದಲ್ಲಿ ಹಲವು ಬಾರಿ ಪ್ರಶ್ನಿಸಿದ್ದೇನೆ. ನೀರಾವರಿ ಮಂತ್ರಿ, ಸಿಎಂ ಎಚ್‌ಡಿಕೆಗೆ ಬೆನ್ನು ಬಿದ್ದಿದ್ದರಿಂದ 2019ರ ಬಜೆಟ್‌ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಟ್ಟರು. ಆದರೆ, 111 ಮತ್ತು 113ನೇ ಕೃಭಾಜನಿನಿ ಸಭೆಯಲ್ಲಿ ವಿಷಯ ಚರ್ಚಿಸದೇ ಮುಂದೂಡುತ್ತ ಬರಲಾಯಿತು. ಆಗ ರಾಯರಡ್ಡಿಯವರು ಏನು ಮಾಡುತ್ತಿದ್ದರು? ಯಲಬುರ್ಗಾದಲ್ಲಿ ಕುಡಿವ ನೀರಿಗೂ ಸಾಕಷ್ಟು ಬವಣೆಯಿದೆ. ಹೀಗಾಗಿ ಕ್ಷೇತ್ರದ 24 ಕೆರೆ ತುಂಬಿಸಲಾಗುತ್ತಿದೆ. ಮೂರು ಹಂತದಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ ಹುನುಗುಂದ, 2ರಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು 3ನೇ ಹಂತದಲ್ಲಿ ಯಲಬುರ್ಗಾ ಭಾಗದಲ್ಲಿ ಒಟ್ಟು 1720 ಕೋಟಿ ರೂ.ನಲ್ಲಿ ಅನುಷ್ಠಾನಗೊಳ್ಳಲಿದೆ. ಈಗಾಗಲೇ ಟೆಂಡರ್ ಮುಗಿದಿದ್ದು, ಕಾಮಗಾರಿ ಆರಂಭವಾಗಲಿದೆ ಎಂದರು.

    ಹಾಲಪ್ಪ ಯಾರೆಂದು ರಾಜ್ಯದ ಜನರಿಗೆ ಗೊತ್ತಿದೆ
    ನನಗೆ ಟಿಎಂಸಿ ಅಂದ್ರೇನೆಂದು ಗೊತ್ತಿಲ್ಲದಿದ್ದರೂ ಇಷ್ಟು ಕೆಲಸ ಮಾಡಿದ್ದೇನೆ. ಗೊತ್ತಿರುವ ರಾಯರಡ್ಡಿ ಯಾಕೆ ಮಾಡಿಲಿಲ್ಲ. ಹಾಲಪ್ಪ ಯಾರೆಂದು ಅವರು ಕೇಳುತ್ತಾರೆ. ನನ್ನ ಕ್ಷೇತ್ರದ 3 ಲಕ್ಷ ಜನ ನಾನು ಯಾರೆಂದು ಇಡೀ ರಾಜ್ಯಕ್ಕೆ ತೋರಿಸಿದ್ದಾರೆ. ಅಮರೇಗೌಡ ಬಯ್ಯಪುರ ಹಿರಿಯ ನಾಯಕ. ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಎಲ್ಲರೂ ಸೇರಿ ಕೆಲಸ ಮಾಡೋಣ ಎನ್ನಬೇಕು. ಅದು ಬಿಟ್ಟು ವರ್ಷದಲ್ಲಿ ಕಾಮಗಾರಿ ಅನುಷ್ಠಾನವಾದರೆ ರಾಜೀನಾಮೆ ನೀಡುತ್ತೇನೆಂದು ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದರು.


    ನೀರು ಹಂಚಿಕೆ ವಿಷಯವಾಗಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವಿದೆ. 9 ಯೋಜನೆ ಒಳಪಡುವ ಭಾಗದ ಜನಪ್ರತಿನಿಧಿಗಳೊಂದಿಗೆ ಸರ್ಕಾರಕ್ಕೆ ಸರ್ಕಾರಕ್ಕೆ ಒತ್ತಾಯಿಸಿ ಅರ್ಜಿ ವಜಾಗೊಳಿಸಲು ಪ್ರಯತ್ನಿಸುವೆ. ಬಜೆಟ್‌ನಲ್ಲೂ ಅನುದಾನ ನೀಡುವಂತೆ ಸಿಎಂಗೆ ಒತ್ತಾಯಿಸುವೆ.
    | ಹಾಲಪ್ಪ ಆಚಾರ್ ಯಲಬುರ್ಗಾ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts