ಯಾವುದೇ ವಿಚಾರಗಳನ್ನು ಪರಾಮರ್ಶಿಸಿ ಸ್ವೀಕರಿಸಿ: ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿಕೆ

1 Min Read
ಯಾವುದೇ ವಿಚಾರಗಳನ್ನು ಪರಾಮರ್ಶಿಸಿ ಸ್ವೀಕರಿಸಿ: ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿಕೆ
??????????

ಕೊಪ್ಪಳ: ಯಾವುದೇ ವಿಚಾರಗಳನ್ನು ಪರಾಮರ್ಶಿಸಿದರೆ ನಮ್ಮಲ್ಲೊಂದು ವ್ಯಕ್ತಿತ್ವ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಅಂಧತ್ವ ಆವರಿಸುತ್ತದೆ ಎಂದು ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.

ನಗರದ ಮಳೆಮಲ್ಲೇಶ್ವರ ಯಾತ್ರಿ ನಿವಾಸದಲ್ಲಿ ಎಐಡಿವೈಒ ಸಂಘಟನೆ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನ ಶಿಬಿರದಲ್ಲಿ ‘ಪ್ರಸಕ್ತ ತಲ್ಲಣಗಳು ಮತ್ತು ಯುವ ಜನರ ಮುಂದಿರುವ ಕರ್ತವ್ಯಗಳ’ ಕುರಿತು ಭಾನುವಾರ ಉಪನ್ಯಾಸ ನೀಡಿದರು. ಆಧುನಿಕ ಕಾಲದಲ್ಲೂ ಆಚರಣೆಯಲ್ಲಿರುವ ಹಳೆಯ ಸಂಪ್ರದಾಯಗಳನ್ನು ಪ್ರಶ್ನಿಸಿ ಉತ್ತರಗಳನ್ನು ಕಂಡುಕೊಳ್ಳಬೇಕು. ಬದಲಾವಣೆಗೆ ಪ್ರಜ್ಞಾಪೂರ್ವಕವಾಗಿ ಒಗ್ಗಿಕೊಳ್ಳಬೇಕು. ಸಮಾಜ ಮತ್ತು ದೇಶ ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಿಂದ ಜೀವಿಸಲು ಸಾಧ್ಯ ಎಂಬ ವೈಚಾರಿಕತೆಯನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

‘ನಿರುದ್ಯೋಗ ನಿವಾರಿಸಲಾಗದ ಸಮಸ್ಯೆಯೇ?’ ಎಂಬ ವಿಷಯದ ಕುರಿತು ಎಐಡಿವೈಒ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಿ.ಎಸ್.ಕುಮಾರ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಲಾಭದ ಏಕಮಾತ್ರ ಉದ್ದೇಶಕ್ಕಾಗಿ ಉತ್ಪಾದನೆ ನಡೆಯುತ್ತಿದ್ದು, ಅವರ ಸಂಪತ್ತು ವೃದ್ಧಿಸುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಆಗುವ ಬದಲಿಗೆ ನಿರುದ್ಯೋಗ ಬೆಳೆಯುತ್ತದೆ. ಇದಕ್ಕೆ ಪರ್ಯಾಯವಾಗಿರುವ ಸಮಾಜವಾದಿ ವ್ಯವಸ್ಥೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಉತ್ಪಾದನೆ ನಡೆಯುವುದರಿಂದ ಎಲ್ಲರಿಗೂ ಉದ್ಯೋಗ ಸಿಗಲು ಸಾಧ್ಯ. ಆದ್ದರಿಂದ ಅಂತಹ ವ್ಯವಸ್ಥೆ ನಿರ್ಮಾಣ ಮಾಡಲು ಯುವಜನರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು ಎಂದರು. ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಉಪಾಧ್ಯಕರಾದ ಚನ್ನಬಸವ ಜಾನೇಕಲ್, ಜಗನ್ನಾಥ ಕಲಬುರಗಿ ಇತರರಿದ್ದರು.

See also  ಮಾದಕ ವ್ಯಸನ ಮುಕ್ತ ಜೀವನ ಸುಂದರ
Share This Article