ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ಸೂಚನೆ

26 ಲಕ್ಷ ರೂ. ದುರುಪಯೋಗ>

ಕೊಪ್ಪಳ: ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ 26 ಲಕ್ಷ ರೂ. ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಸಾಮಾನ್ಯ ಶ್ರೇಣಿ ಸಮಿತಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಪತ್ರ ಬರೆದು ಸೂಚಿಸಿದೆ.

ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಪಿ.ಕೆ.ದುಮ್ಮಾಳ್ ಹಾಗೂ ಪ್ರಭಾರ ವ್ಯವಸ್ಥಾಪಕರಾಗಿದ್ದ ಎ.ಎಸ್.ಕೆಲಗೇರಿ ಅವಧಿಯಲ್ಲಿ 25.99 ಲಕ್ಷ ರೂ. ದುರುಪಯೋಗವಾಗಿದೆ. ಈ ಬಗ್ಗೆ ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರು ಪತ್ರ ಬರೆದಿದ್ದು, ವಾರ್ಷಿಕ ಲೆಕ್ಕಪತ್ರ ಪರಿಶೀಲನೆ ವೇಳೆ ಅವ್ಯವಹಾರ ಬಯಲಾಗಿದೆ. ಅಲ್ಲದೆ, ಆಡಳಿತ ಮಂಡಳಿಯವರು ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪ್ರೋತ್ಸಾಹ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈಗಾಗಲೇ ಪ್ರಭಾರ ವ್ಯವಸ್ಥಾಪಕ ಕೆಲಗೇರಿ ಅವರನ್ನು ಅಮಾನತು ಮಾಡಲಾಗಿದ್ದು, ಬ್ಯಾಂಕ್‌ಗೆ ಭೇಟಿ ನೀಡಿ ನಿವೃತ್ತ ವ್ಯವಸ್ಥಾಪಕ ಪಿ.ಕೆ.ದುಮ್ಮಾಳ್ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಿ. ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ಸಹಕಾರ ಸಂಘಗಳ ಕಾಯ್ದೆ 1959ರಂತೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ.

ಈವರೆಗೂ ಕ್ರಮವಿಲ್ಲ: ಪ್ರಕರಣ ಸಂಬಂಧ ರಾಜ್ಯ ಸಮಿತಿ ನ.14ರಂದು ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ. ಆದರೆ, ಈ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರು ಯಾವುದೇ ಕ್ರಮ ಕೈಗೊಂಡಿಲ್ಲ. ಮಾಧ್ಯಮದವರು ಪ್ರಶ್ನಿಸಿದರೆ, ಈ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸಿ ವರದಿ ಪಡೆದು ಕೇಂದ್ರ ಬ್ಯಾಂಕ್‌ಗೆ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಬಂಧಕರಿಗೆ ಸೂಚಿಸಿದ್ದಾರೆ.

 

ರೈತರ ಹಣ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ತಪ್ಪಿತಸ್ಥರು ಯಾರೇ ಇರಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ರೈತರ ಎಲ್ಲ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇವೆ.
| ಜಗದೀಶ ಶೆಟ್ಟರ್ ಮಾಜಿ ಸಿಎಂ

 

ಯಲಬುರ್ಗಾ ಪಿಕಾರ್ಡ್ ಬ್ಯಾಂಕ್‌ನಲ್ಲಾದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಮಿತಿ ಸಹಕಾರ ಸಂಘಗಳ ಉಪನಿಬಂಧಕರಿಗೆ ಪತ್ರ ಬರೆದಿದೆ. ಅದರ ಆಧಾರದಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸದ್ಯ ಬ್ಯಾಂಕ್‌ಗೆ ಒಬ್ಬ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದ್ದು, ಅವರು ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು.
| ಪಿ. ಸುನಿಲ್ ಕುಮಾರ್ ಜಿಲ್ಲಾಧಿಕಾರಿ, ಕೊಪ್ಪಳ